

ಕೊಲಂಬೋ: ಶ್ರೀಲಂಕಾ ಪ್ರವಾಸವನ್ನು ಟೀಮ್ ಇಂಡಿಯಾ ಯಶಸ್ವಿಯಾಗಿ ಆರಂಭಿಸಿದೆ. ಶನಿವಾರ (ಜುಲೈ 27) ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತ 43 ರನ್‌ಗಳ ಜಯ ಸಾಧಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮೆನ್ ಇನ್ ಬ್ಲೂ ತಂಡವು 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 213 ರನ್ ಗಳಿಸಿತು. ಆರಂಭಿಕರಾದ ಯಶಸ್ವಿ ಜೈಸ್ವಾಲ್ (21 ಎಸೆತಗಳಲ್ಲಿ 40) ಮತ್ತು ಶುಭಮನ್ ಗಿಲ್ (16 ಎಸೆತಗಳಲ್ಲಿ 34) ಅದ್ಭುತ ಇನ್ನಿಂಗ್ಸ್‌ನೊಂದಿಗೆ ಮಿಂಚಿದರು. ನಂತರ ಸೂರ್ಯಕುಮಾರ್ ಯಾದವ್ (26 ಎಸೆತಗಳಲ್ಲಿ 58) ನಾಯಕತ್ವದ ಇನ್ನಿಂಗ್ಸ್ ಸಿಡಿಸಿದರು. ಕೊನೆಯಲ್ಲಿ ರಿಷಭ್ ಪಂತ್ (33 ಎಸೆತಗಳಲ್ಲಿ 49) ಕೂಡ ಧನಾಧನ್ ಇನ್ನಿಂಗ್ಸ್ ಆಡಿ ಭಾರತ ಬೃಹತ್ ಸ್ಕೋರ್ ಮಾಡಿತು. ಬಳಿಕ ಆತಿಥೇಯ ತಂಡ 19.2 ಓವರ್‌ಗಳಲ್ಲಿ 170 ರನ್‌ಗಳಿಗೆ ಸೀಮಿತವಾಯಿತು.
ಭಾರತದ ಬೌಲರ್‌ಗಳಲ್ಲಿ ಅರ್ಷದೀಪ್ ಸಿಂಗ್ ಮತ್ತು ಅಕ್ಷರ್ ಪಟೇಲ್ ತಲಾ ಎರಡು ವಿಕೆಟ್ ಪಡೆದರು. ರಿಯಾನ್ ಪರಾಗ್ ಮೂರು ವಿಕೆಟ್ ಕಬಳಿಸಿ ಲಂಕಾ ಪಾಲಿಗೆ ಸಿಂಹಸ್ವಪ್ನವಾದರು. ತಮ್ಮ ನಾಯಕತ್ವದ ಜವಾಬ್ದಾರಿಯುತ ಆಟದಿಂದ ಪಂದ್ಯದ ಸ್ವರೂಪವನ್ನೇ ಬದಲಿಸಿದ ಸೂರ್ಯಕುಮಾರ್, ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಆದರೆ, ಲಂಕಾ ಇನ್ನಿಂಗ್ಸ್‌ನಲ್ಲಿ ನಡೆದ ಘಟನೆಯೊಂದು ಪಂದ್ಯದ ಹೈಲೈಟ್ ಆಯಿತು. ಬೌಲಿಂಗ್ ವೇಳೆ ಭಾರತದ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್ ಗಾಯಗೊಂಡರು. 16ನೇ ಓವರ್ ಬೌಲಿಂಗ್ ಮಾಡಿದ ಬಿಷ್ಣೋಯ್, ಕಮಿಂದು ಮೆಂಡಿಸ್ ಬಾರಿಸಿದ ಚೆಂಡನ್ನು ಹಿಡಿಯಲು ಜಿಗಿದರು. ಆದರೆ, ಚೆಂಡು ಕ್ಯಾಚ್ ಆಗಲಿಲ್ಲ. ಚೆಂಡು ಕೈ ತಪ್ಪಿದಾಗ ಕೆಳಗೆ ಬಿದ್ದರು. ಇದರ ಪರಿಣಾಮವಾಗಿ, ಅವರ ಬಲಗೈ ಮಣಿಕಟ್ಟು ಮತ್ತು ಮುಖಕ್ಕೆ ಗಾಯವಾಯಿತು. ಬಿಷ್ಣೋಯ್ ಕೆನ್ನೆಯ ಮೇಲೆ ಗಾಯವಾಗಿ, ಆ ಭಾಗದಲ್ಲಿ ರಕ್ತಸ್ರಾವವಾಯಿತು.
ಬಿಷ್ಣೋಯ್ ಮುಖದಲ್ಲಿ ಗಾಯವನ್ನು ಕಂಡ ತಕ್ಷಣವೇ ಫಿಸಿಯೋ ಮೈದಾನಕ್ಕೆ ಓಡಿದರು. ಚಿಕಿತ್ಸೆ ಪಡೆದ ನಂತರ ಬಿಷ್ಣೋಯ್ ಡ್ರೆಸ್ಸಿಂಗ್ ರೂಂಗೆ ಹೋಗಿ ವಿಶ್ರಾಂತಿ ಪಡೆಯುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಅವರು ಬೌಲಿಂಗ್ ಮುಂದುವರಿಸಿದರು. ಮೇಲಾಗಿ ಚರಿತಾ ಅಸಲಂಕಾ ಅವರನ್ನು ಅದೇ ಓವರ್‌ನಲ್ಲಿ ಔಟ್ ಮಾಡಿದರು. 4 ಓವರ್‌ಗಳಲ್ಲಿ ಒಟ್ಟು 37 ರನ್ ನೀಡಿ 1 ವಿಕೆಟ್ ಪಡೆದರು. ಅವರ ಸಮರ್ಪಣೆಗೆ ಎಲ್ಲರೂ ಬೆರಗಾದರು. ಗಾಯದ ಭಯವಿಲ್ಲದೆ ತಂಡಕ್ಕಾಗಿ ಆಡಿದ್ದಕ್ಕೆ ಅವರನ್ನು ಮೆಚ್ಚಿಕೊಂಡರು.
ಹಿಂದೊಮ್ಮೆ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ತಲೆಗೆ ಪೆಟ್ಟಾದರೂ ಕೂಡ ಲೆಜೆಂಡ್ ಅನಿಲ್ ಕುಂಬ್ಳೆ ಬೌಲಿಂಗ್ ಮಾಡಿ ವಿಕೆಟ್ ಪಡೆದ ಘಟನೆ ಎಲ್ಲರಿಗೂ ನೆನಪಿದೆ. 2002ರಲ್ಲಿ ನಡೆದ ಟೆಸ್ಟ್‌ನಲ್ಲಿ, ಬ್ಯಾಟಿಂಗ್ ಸಮಯದಲ್ಲಿ ಚೆಂಡು ಹೆಲ್ಮೆಟ್‌ಗೆ ಬಡಿದು ಗಾಯಗೊಂಡಿದ್ದ ಕುಂಬ್ಳೆ ಚಿಕಿತ್ಸೆಗೆ ಒಳಗಾಗಿದ್ದರು ಮತ್ತು ತಲೆಗೆ ಬ್ಯಾಂಡೇಜ್ ಹಾಕಿಕೊಂಡೇ ಬೌಲಿಂಗ್ ಮಾಡಿದ್ದರು. ರವಿ ಬಿಷ್ಣೋಯ್ ಗಾಯಗೊಂಡು ಆಡಿದ ಬಳಿಕ ಇದೇ ಘಟನೆ ಮತ್ತೆ ನೆನಪಾಗಿದೆ. ಇದೇ ಸಮರ್ಪಣಾ ಮನೋಭಾವದಲ್ಲಿ ರವಿ ಬಿಷ್ಣೋಯ್ ಆಡಿದರೆ ಕುಂಬ್ಳೆ ಮಟ್ಟಕ್ಕೆ ಬರುತ್ತಾರೆ ಎಂದು ಅಭಿಮಾನಿಗಳು ಹೊಗಳುತ್ತಿದ್ದಾರೆ. (ಏಜೆನ್ಸೀಸ್)