

ನವದೆಹಲಿ: ಕೇಂದ್ರ ಹಣಕಾಸು ಸಚಿವಾಲಯವು ಸರ್ಕಾರಿ ಸ್ವಾಮ್ಯದ ಮೂರು ಬ್ಯಾಂಕ್ಗಳ ಖಾಸಗೀಕರಣ ಪ್ರಕ್ರಿಯೆಗೆ ಚಾಲನೆ ನೀಡಿದೆ.
ಅವುಗಳನ್ನು ಆರ್ಥಿಕವಾಗಿ ಇನ್ನಷ್ಟು ಸದೃಢಗೊಳಿಸುವ ಹಾಗೂ ಮುಂದಿನ ದಿನಗಳಲ್ಲಿ ಸಂಕಷ್ಟಕ್ಕೊಳಗಾಗದಲ್ಲಿ ಸಾರ್ವಜನಿಕರ ತೆರಿಗೆ ಹಣವನ್ನು ಬಳಸಿ ಪುನಶ್ಚೇತನ ಕಾರ್ಯ ಕೈಗೊಳ್ಳುವ ಹೊರೆಯನ್ನು ತಪ್ಪಿಸಲು ಈ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ.
ಸರ್ಕಾರದ ನೀತಿ ನಿರೂಪಣಾ ಸಂಸ್ಥೆಯಾದ ನೀತಿ ಆಯೋಗದಿಂದಲೇ ನೀಡಲಾದ ಸಲಹೆ ಮೇರೆಗೆ ಬ್ಯಾಂಕುಗಳ ಖಾಸಗೀಕರಣಕ್ಕೆ ಮುಂದಾಗಲಾಗುತ್ತಿದೆ.
ಪಂಜಾಬ್ ಮತ್ತು ಸಿಂಧ್ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ ಹಾಗೂ ಇಂಡಿಯನ್ ಓವರ್ಸೀಸ್ ಬ್ಯಾಂಕ್ ಖಾಸಗೀಕರಣದ ಬಗ್ಗೆ ಚರ್ಚೆಗಳು ಜಾರಿಯಲ್ಲಿವೆ. ಈ ಕಾರಣಕ್ಕಾಗಿಯೇ ಈ ಮೂರು ಬ್ಯಾಂಕುಗಳನ್ನು ವಿಲೀನ ಪ್ರಕ್ರಿಯೆಯಿಂದ ಹೊರಗಿಡಲಾಗಿತ್ತು ಎಂದು ಹೇಳಲಾಗಿದೆ.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ದೀರ್ಘ ಕಾಲಾವಧಿಗೆ ಖಾಸಗಿ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸಬೇಕು ಎಂಬುದು ನೀತಿ ಆಯೋಗದ ಸಲಹೆಯಾಗಿದೆ. ಬೃಹತ್ ಉದ್ಯಮ ಸಂಸ್ಥೆಗಳಿಗೆ ಕೆಲ ಷರತ್ತುಗಳಿಗೆ ಬ್ಯಾಂಕಿಂಗ್ ವಹಿವಾಟು ನಡೆಸಲು ಪರವಾನಗಿ ನೀಡಬೇಕೆಂದು ಕೂಡ ನೀತಿ ಆಯೋಗ ಶಿಫಾರಸು ಮಾಡಿದೆ.
ರಾಷ್ಟ್ರೀಕರಣಗೊಂಡ ಕೆಲ ಬ್ಯಾಂಕುಗಳ ಖಾಸಗೀಕರಣದ ಚರ್ಚೆ ನಡೆದಿದೆ. ಆದರೆ, ಈ ಬಗ್ಗೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲಾಗಿಲ್ಲ. ಈ ಬಗ್ಗೆ ಮುಂದಿನ ಹಂತದಲ್ಲಿ ಬೆಳವಣಿಗೆಗಳು ಉಂಟಾಗಬೇಕಾದರೆ, ಬ್ಯಾಂಕ್ಗಳ ರಾಷ್ಟ್ರೀಕರಣ ಕಾಯ್ದೆಯನ್ನು ತಿದ್ದುಪಡಿ ಮಾಡಬೇಕಾಗುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಆರ್ಥಿಕ ವ್ಯವಸ್ಥೆಯಲ್ಲಿ ಖಾಸಗಿ ಹೂಡಿಕೆಗೆ ಮುಕ್ತ ಅವಕಾಶಗಳನ್ನು ಕಲ್ಪಿಸುವ ಬಗ್ಗೆ ಕಳೆದ ತಿಂಗಳು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ನ ಕಳೆದ ತಿಂಗಳಷ್ಟೇ ಘೋಷಿಸಿದ್ದರು.