ಲಿಪ್​ಸ್ಟಿಕ್​ ಇಂಡೆಕ್ಸ್​; ಅರ್ಥಶಾಸ್ತ್ರದ ಸಿದ್ಧಾಂತವನ್ನೇ ಬುಡಮೇಲಾಗಿಸಿದ ಕರೊನಾ

Lipstick
Published on

ಬೆಂಗಳೂರು: ಎಂಥದ್ದೇ ಆರ್ಥಿಕ ಸಂಕಷ್ಟ ಎದುರಾದರೂ ಇದರ ಮಾರಾಟಕ್ಕೆ ಧಕ್ಕೆಯಾದದ್ದೇ ಇಲ್ಲ. ಕಾರು, ಬೈಕ್​, ಮೊಬೈಲ್​ ಅಥವಾ ಇನ್ನಾವುದೇ ಬೆಲೆಬಾಳುವ ವಸ್ತುಗಳ ಖರೀದಿಯನ್ನು ಜನರು ಮುಂದೂಡಿದರೂ ಇದನ್ನು ಕೊಳ್ಳಲು ಜನರು ಎಂದಿಗೂ ಚಿಂತೆ ಮಾಡಿದ್ದಿಲ್ಲ, ಮುಂದೂಡಿದ್ದೂ ಇಲ್ಲ...! ಅರ್ಥಶಾಸ್ತ್ರಜ್ಞರ ಬೇಡಿಕೆ- ಪೂರೈಕೆ ಸಿದ್ಧಾಂತದಾಚೆಗೆ ಇದು ನಿಲ್ಲುತ್ತಿತ್ತು.

ಈ ಹಿಂದೆ ಇಂಥದ್ದೊಂದು ಕುಸಿತವನ್ನು ಇದು ಕಂಡಿತ್ತೋ ಇಲ್ಲವೋ ಗೊತ್ತಿಲ್ಲ. ಈಗ ಮಾತ್ರ ದುಸ್ಥಿತಿಗೆ ತಲುಪಿದೆ. ಅಷ್ಟೇ ಅಲ್ಲ, ಸದ್ಯಕ್ಕೆ ಇದು ಚೇತರಿಸಿಕೊಳ್ಳುವ ಲಕ್ಷಣ ಕಾಣುತ್ತಿಲ್ಲ....! ಕೊಂಚ ಸರಳವಾಗಿ ಹೇಳುವುದಾದರೆ.... ಬರ ಬಂದಿದೆ ಅಂತಾ ಜನ ಮಸಾಲೆ ದೋಸೆ ತಿನ್ನೋದು ಬಿಡ್ತಾರಾ... ಎನ್ನುವುದು ರೂಢಿ ಮಾತು. ಆದರೆ, ಬಾಯೇ ಇಲ್ಲದಿದ್ದರೆ, ಮಸಾಲೆ ದೋಸೆ ಯಾರಿಗ್​ ಬೇಕು ಹೇಳಿ...!

ಇಷ್ಟೆಲ್ಲ ಪೀಠಿಕೆ ಬೇಕಾಗಿರೋದು ಯಾವುದಕ್ಕೆ ಅಂತೀರಾ...? ಮಹಿಳೆಯರ ಅಚ್ಚುಮೆಚ್ಚಿನ ಸಂಗಾತಿ ಸಂಗಾತಿ ಲಿಪ್​ಸ್ಟಿಕ್​ ಹಾಗೂ ಅದರ ಮಾರಾಟ ಕುಸಿದಿರುವ ಬಗ್ಗೆ.

ಬೇಡಿಕೆ ಕಳೆದುಕೊಳ್ಳದ ವಸ್ತುಗಳನ್ನು ಅರ್ಥಶಾಸ್ತ್ರದಲ್ಲಿ "ಲಿಪ್​ಸ್ಟಿಕ್​ ಇಂಡೆಕ್ಸ್" ನಲ್ಲಿ ಹೆಸರಿಸಲಾಗುತ್ತದೆ. ಲಿಯೋನಾರ್ಡ್​ ಲೌಡರ್ ಈ ಪದವನ್ನು ಹುಟ್ಟುಹಾಕಿದ್ದ. 2000ರ ಆರ್ಥಿಕ ಸಂಕಷ್ಟ ಸಮಯದಲ್ಲೂ ಕಾಸ್ಮೆಟಿಕ್​ ವಸ್ತುಗಳ ಬೇಡಿಕೆ ಕುಸಿಯದಿರುವುದನ್ನು ಈ ರೀತಿಯಾಗಿ ವ್ಯಾಖ್ಯಾನಿಸಿದ್ದ. ಆದರೀಗ ಲಿಪ್​ಸ್ಟಿಕ್​ ಇಂಡೆಕ್ಸ್​ಗೂ ಕುತ್ತು ಬಂದಿರುವಂತಿದೆ.

ಕಳೆದೆರಡು ತಿಂಗಳಲ್ಲಿ ಲಿಪ್​ಸ್ಟಿಕ್​ಗೆ ಬೇಡಿಕೆಯೇ ಇಲ್ಲವಾದಂತಾಗಿದೆ. ಕರೊನಾ ಸಂಕಷ್ಟದಿಂದಾಗಿ ಜನರು ಮನೆಯಿಂದ ಹೊರಗೆ ತೆರಳಬೇಕೆಂದರೆ ಮಾಸ್ಕ್​ ಧರಿಸುವುದು ಕಡ್ಡಾಯವಾಗಿದೆ. ಹೀಗಿರುವಾಗ ಲಿಪ್​ಸ್ಟಿಕ್​ನ ಅವಶ್ಯಕತೆ ಯಾವ ನಾರಿಮಣಿಗೆ ಇದ್ದೀತು... ಹೇಳಿ. ಸದ್ಯ ಸಭೆ, ಸಮಾರಂಭ, ಶುಭ ಕಾರ್ಯಗಳು ಕೂಡ ನಡೆಯುತ್ತಿಲ್ಲ. ನಡೆದರೂ ಮನೆಯಳತೆಗೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ. ಹೀಗಾಗಿ ಪ್ರಸ್ತುತ ಲಿಪ್​ಸ್ಟಿಕ್​ ಮಾರಾಟ ಕುಸಿದಿದೆ ಎಂದು ಹಿಂದುಸ್ತಾನ್​ ಯುನಿಲೀವರ್​ ಸಂಸ್ಥೆ ಪ್ರತಿನಿಧಿಗಳು ಹೇಳುತ್ತಾರೆ. ಲಾ ಒರಿಯಲ್​ ಕಂಪನಿಯ ಭಾರತದ ನಿರ್ದೇಶಕಿ ಕವಿತಾ ಅಂಗ್ರೆ ಕೂಡ ಇದನ್ನೇ ಹೇಳುತ್ತಾರೆ. ಆದರೆ, ಈ ಕುಸಿತ ಕೆಲ ದಿನಗಳಮಟ್ಟಿಗೆ ಮಾತ್ರ ಲಾಕ್​ಡೌನ್ ಸಂಪೂರ್ಣ ತೆರವಾಗಿ ಜನಜೀವನ ಸಾಮಾನ್ಯ ಸ್ಥಿತಿಗೆ ಬಂದ ಮೇಲೆ ಇದರ ಮಾರಾಟ ಎಂದಿನಂತಿರಲಿದೆ ಎಂಬ ವಿಶ್ವಾಸ ಇವರದ್ದು.

ಹಾಗೆಂದ ಮಾತ್ರಕ್ಕೆ ಸುಂದರವಾಗಿರೋಕೆ ಯಾವ ಮಹಿಳೆ ಇಷ್ಟಪಡೋದಿಲ್ಲ? ಹೀಗಾಗಿ ಇವರ ಚಿತ್ತವೀಗ ಕಣ್ಣುಗಳತ್ತ ಹೊರಳಿದೆ. ನೇತ್ರಗಳನ್ನು ಹೆಚ್ಚು ಆಕರ್ಷಣಿಯವನ್ನಾಗಿಸುತ್ತಿದ್ದಾರೆ. ಲಿಪ್​ಸ್ಟಿಕ್​ ಜಾಗಕ್ಕೀಗ ನೇತ್ರಾಲಂಕಾರ ಬಂದಿದೆ. ಐಲೈನರ್​, ಐಬ್ರೋ ಹಾಗೂ ಐ ಕಲರ್​ಗಳ ಮಾರಾಟ ಹೆಚ್ಚಾಗಿದೆ ಎಂಬುದನ್ನು ಇವರು ವಿವರಿಸುತ್ತಾರೆ. ಅಲ್ಲಿಗೆ 'ಲಿಪ್​ಸ್ಟಿಕ್​ ಇಂಡೆಕ್ಸ್​' ಅನ್ನು 'ಐ ಇಂಡೆಕ್ಸ್​ ' ಎಂದು ಬದಲಾಯಿಸಿಕೊಳ್ಳಬೇಕೆನೋ?

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net