ಭಾರತದ ಬಗ್ಗೆ ಮಾತನಾಡಿದ್ದಕ್ಕೆ... ಶಾಕಿಂಗ್​ ಸಂಗತಿ ಬಿಚ್ಚಿಟ್ಟ ಕಣ್ಮರೆಯಾಗಿದ್ದ ಪಾಕ್​ ಯೂಟ್ಯೂಬರ್​! Pakistan

Pakistan
Published on

Pakistan : ಸುಮಾರು 21 ದಿನಗಳಿಂದ ನಾಪತ್ತೆಯಾಗಿದ್ದ ಪಾಕಿಸ್ತಾನಿ ಯೂಟ್ಯೂಬರ್‌ಗಳಾದ ಶೋಯೆಬ್ ಚೌಧರಿ ಮತ್ತು ಸನಾ ಅಮ್ಜದ್ ಮತ್ತೆ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಭಾರತ ಮತ್ತು ಪಾಕಿಸ್ತಾನದ ಬಗ್ಗೆ ಅನೇಕ ವಿಷಯಗಳನ್ನು ಹಂಚಿಕೊಂಡಿದ್ದರು. ಭಾರತವನ್ನು ಹೊಗಳಿದ್ದಕ್ಕೆ ಇಬ್ಬರನ್ನು ಅಪಹರಿಸಿ, ಕೊಲ್ಲಲಾಗಿದೆ ಎಂಬ ವದಂತಿಗಳಿ ಹರಡಿದ್ದವು. ಇದೀಗ ಸನಾ ಅಮ್ಜದ್​ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ವಿಡಿಯೋ ಪೋಸ್ಟ್​ ಮಾಡಿದ್ದು, ತಾನು ಸುರಕ್ಷಿತವಾಗಿದ್ದೇನೆಂದು ಘೋಷಿಸಿದ್ದಾರೆ. ಆದರೆ, ತನ್ನ ಜೀವಕ್ಕೆ ಅಪಾಯವಿದೆ ಎಂತಲೂ ಬಹಿರಂಗಪಡಿಸಿದ್ದಾರೆ.

ನನ್ನ ಜೀವ ಅಪಾಯದಲ್ಲಿದೆ. ಯಾವಾಗ ಏನು ಬೇಕಾದರೂ ಆಗಬಹುದು. ನಮ್ಮ ಕುಟುಂಬದ ಸದಸ್ಯರಿಗೂ ಬೆದರಿಕೆಗಳಿವೆ ಎಂದು ಸನಾ ಹೇಳಿದ್ದಾರೆ. ಭಾರತವನ್ನು ಹೊಗಳುವುದು ಪಾಕಿಸ್ತಾನದಲ್ಲಿ ಅಪರಾಧವೇನಲ್ಲ. ಇಲ್ಲಿನ ಜನರು ಪ್ರಧಾನಿ ಮೋದಿ ಸೇರಿದಂತೆ ಭಾರತೀಯ ರಾಜಕಾರಣಿಗಳನ್ನು ಹೊಗಳಿದ್ದಾರೆ. ನಾನು ಕಣ್ಮರೆಯಾದಾಗ ಭಾರತೀಯ ಮಾಧ್ಯಮ ಮತ್ತು ಯೂಟ್ಯೂಬರ್‌ಗಳು ನೀಡಿದ ಬೆಂಬಲಕ್ಕೆ ಧನ್ಯವಾದಗಳು. ಆದರೆ, ಪಾಕಿಸ್ತಾನಿ ಮಾಧ್ಯಮಗಳು ಮಾತ್ರ ಮೌನವಾಗಿದ್ದವು ಎಂದು ಸನಾ ಅಸಮಾಧಾನ ಹೊರಹಾಕಿದ್ದಾರೆ.

ಲಾಹೋರ್‌ನ ಲಿಬರ್ಟಿ ಮಾರ್ಕೆಟ್‌ನಿಂದ ಭಾರತದ ಬಗ್ಗೆ ಮಾತನಾಡಿದ ಮೊದಲ ಯೂಟ್ಯೂಬರ್ ನಾನು. ಇದಕ್ಕಾಗಿ ನಾನು ಸಾಕಷ್ಟು ಟೀಕೆಗಳನ್ನು ಎದುರಿಸಿದ್ದೇನೆ. ನನ್ನನ್ನು ಮೌನಗೊಳಿಸಲು ಸಾಕಷ್ಟು ಪ್ರಯತ್ನಗಳು ನಡೆದಿವೆ. ಈಗ ನನಗೆ ಬೆದರಿಕೆ ಹಾಕುವ ಮೂಲಕ ನನ್ನನ್ನು ಸಂಪೂರ್ಣವಾಗಿ ಮೌನಗೊಳಿಸಲು ಪ್ರಯತ್ನಗಳು ನಡೆಯುತ್ತಿವೆ. ನನ್ನನ್ನು ಮೌನಗೊಳಿಸಲು ಇರುವ ಒಂದೇ ಮಾರ್ಗವೆಂದರೆ ನನ್ನ ಪ್ರಾಣ ತೆಗೆಯುವುದು. ಇಲ್ಲದಿದ್ದರೆ, ನಾನು ಭಾರತದ ಬಗ್ಗೆ ಮಾತನಾಡುವುದನ್ನು ನಿಲ್ಲಿಸುವುದಿಲ್ಲ. ನನಗೆ ಏನಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಸನಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಬಹಿರಂಗಪಡಿಸಿದ್ದಾರೆ.

ಮತ್ತೊಬ್ಬ ಯೂಟ್ಯೂಬರ್ ಶೋಯೆಬ್​ ಚೌಧರಿ ಕೂಡ ಪಾಕಿಸ್ತಾನದ ಪ್ರಮುಖ ಪಕ್ಷದ ಸದಸ್ಯರು ತನ್ನನ್ನು ಅಪಹರಿಸಿ ಕ್ರೂರವಾಗಿ ಚಿತ್ರಹಿಂಸೆ ನೀಡಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ಆದರೆ, ನಾನು ಹೆದರುವುದಿಲ್ಲ ಮತ್ತು ವಿಡಿಯೋ ಪೋಸ್ಟ್​ ಮಾಡುವುದನ್ನು ಮುಂದುವರಿಸುತ್ತೇನೆ ಎಂದು ಶೋಯೆಬ್​ ಚೌಧರಿ ಹೇಳಿದ್ದಾರೆ.

ಅಂದಹಾಗೆ ಶೋಯೆಬ್ ಚೌಧರಿ ಅವರು ತನ್ನ ಚಾನೆಲ್ 'ರಿಯಲ್ ಎಂಟರ್‌ಟೈನ್‌ಮೆಂಟ್' ಮೂಲಕ ಪಾಕಿಸ್ತಾನದಲ್ಲಿ ಪ್ರಸ್ತುತ ವಿದ್ಯಮಾನಗಳು ಮತ್ತು ಸಾರ್ವಜನಿಕ ಅಭಿಪ್ರಾಯಗಳ ಕುರಿತು ವಿಡಿಯೋಗಳನ್ನು ಮಾಡುತ್ತಿರುತ್ತಾರೆ. ಇನ್ನೊಂದೆಡೆ ಸನಾ ಅಮ್ಜದ್​ ತನ್ನದೇ ಹೆಸರಿನ ಚಾನೆಲ್ ಮೂಲಕ ವಿಡಿಯೋಗಳನ್ನು ಪೋಸ್ಟ್​ ಮಾಡುತ್ತಿರುತ್ತಾರೆ. ಇಬ್ಬರು ಭಾರತದ ಬಗ್ಗೆ ಅನೇಕ ವಿಡಿಯೋಗಳನ್ನು ಮಾಡುತ್ತಿದ್ದರು. ಸಾಕಷ್ಟು ಮಂದಿ ಭಾರತೀಯರು ಕೂಡ ಅವರ ವಿಡಿಯೋಗಳನ್ನು ವೀಕ್ಷಣೆ ಮಾಡುತ್ತಾರೆ. ಆದರೆ, ಕಳೆದ 20 ದಿನಗಳಿಂದ ವಿಡಿಯೋ ಮಾಡದೇ ಇದ್ದಿದ್ದರಿಂದ ಈ ಊಹಾಪೋಹಗಳು ಹರಿದಾಡಿದ್ದವು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net