ಭಾರತ, ಪ್ರಧಾನಿ ಮೋದಿ ಹೊಗಳಿದ ಪಾಕಿಸ್ತಾನ​ ಯೂಟ್ಯೂಬರ್ಸ್​ ಕಣ್ಮರೆ! ಗಲ್ಲಿಗೇರಿಸಿತೇ ಪಾಕ್​ ಸೇನೆ? Pakistan

Pakistan
Published on

Pakistan : ಸಾಮಾಜಿಕ ಜಾಲತಾಣಗಳಲ್ಲಿ ಪಾಕಿಸ್ತಾನ ಸೇನೆಯ ವಿರುದ್ಧ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಕೆಲವು ಪಾಕಿಸ್ತಾನಿ ಯೂಟ್ಯೂಬರ್‌ಗಳು ಈ ಹಿಂದೆ ಭಾರತ ಮತ್ತು ಪ್ರಧಾನಿ ಮೋದಿಯನ್ನು ಬೆಂಬಲಿಸಿ ವಿಡಿಯೋಗಳನ್ನು ಪೋಸ್ಟ್ ಮಾಡಿದ್ದರು. ಅವರೀಗ ಕಾಣೆಯಾಗಿದ್ದು, ಪಾಕಿಸ್ತಾನದ ಸೇನೆ ಅವರನ್ನು ಕೊಂದಿದೆ ಎಂದು ಕೆಲವರು ಆರೋಪ ಮಾಡುತ್ತಿದ್ದಾರೆ.

ಭಾರತ ಮತ್ತು ಮೋದಿಯನ್ನು ಬೆಂಬಲಿಸಿ ವಿಡಿಯೋ ಮಾಡುತ್ತಿದ್ದ ಯೂಟ್ಯೂಬರ್‌ಗಳು ಇದ್ದಕ್ಕಿದ್ದಂತೆ ವಿಡಿಯೋ ಪೋಸ್ಟ್ ಮಾಡುವುದನ್ನು ನಿಲ್ಲಿಸಿರುವುದರಿಂದ ಈ ಒಂದು ಅನುಮಾನ ಮೂಡಿದೆ. ಸುಮಾರು 12 ಯೂಟ್ಯೂಬರ್‌ಗಳು ಕಣ್ಮರೆಯಾಗಿದ್ದಾರೆ ಎಂದು ವರದಿಯಾಗಿದೆ.

ಕಾಣೆಯಾದವರಲ್ಲಿ ಸನಾ ಅಂಜದ್ ಮತ್ತು ಶೋಯೆಬ್ ಚೌಧರಿ ಬಹಳ ಜನಪ್ರಿಯರಾಗಿದ್ದಾರೆ. ಈ ಇಬ್ಬರೂ ಬೀದಿಗಿಳಿದು, ಜನರನ್ನು ಸಂದರ್ಶಿಸಿ, ಜನರ ಪ್ರತಿಕ್ರಿಯೆಗಳ ವಿಡಿಯೋ ಮಾಡುವುದರಲ್ಲಿ ಫೇಮಸ್ ಆಗಿದ್ದಾರೆ.

ಶೋಯೆಬ್ ಚೌಧರಿ ಅವರು ತನ್ನ ಚಾನೆಲ್ 'ರಿಯಲ್ ಎಂಟರ್‌ಟೈನ್‌ಮೆಂಟ್' ಮೂಲಕ ಪಾಕಿಸ್ತಾನದಲ್ಲಿ ಪ್ರಸ್ತುತ ವಿದ್ಯಮಾನಗಳು ಮತ್ತು ಸಾರ್ವಜನಿಕ ಅಭಿಪ್ರಾಯಗಳ ಕುರಿತು ವಿಡಿಯೋಗಳನ್ನು ಮಾಡುತ್ತಿದ್ದರು. ಇನ್ನೊಂದೆಡೆ ಸನಾ ಅಂಜಾದ್ ತನ್ನದೇ ಹೆಸರಿನ ಚಾನೆಲ್ ಮೂಲಕ ವಿಡಿಯೋಗಳನ್ನು ಪೋಸ್ಟ್​ ಮಾಡುತ್ತಿದ್ದಳು. ಈ ಇಬ್ಬರು ಭಾರತದ ಬಗ್ಗೆ ಅನೇಕ ವಿಡಿಯೋಗಳನ್ನು ಮಾಡುತ್ತಿದ್ದರು. ಸಾಕಷ್ಟು ಭಾರತೀಯರು ಕೂಡ ಅವರ ವಿಡಿಯೋಗಳನ್ನು ವೀಕ್ಷಣೆ ಮಾಡುತ್ತಿದ್ದರು.

ಇಬ್ಬರು ಸಾಮಾಜಿಕ ಜಾಲತಾಣದಲ್ಲಿ ಸುಮಾರು 19 ದಿನಗಳಿಂದ ಯಾವುದೇ ಹೊಸ ವಿಡಿಯೋಗಳನ್ನು ಪೋಸ್ಟ್ ಮಾಡಿಲ್ಲ. ಹೀಗಾಗಿ ಪಾಕಿಸ್ತಾನ ಸೇನೆಯು ಅವರನ್ನು ಗಲ್ಲಿಗೇರಿಸಿದೆ ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ. ಯೂಟ್ಯೂಬರ್ಸ್​ ಎಲ್ಲಿಯೂ ಕಾಣಿಸಿಕೊಳ್ಳದಿರುವುದು ಈ ಊಹಾಪೋಹಕ್ಕೆ ಕಾರಣವಾಗಿದೆ. ಇದು ಪ್ರಪಂಚದಾದ್ಯಂತ ಅನೇಕ ಜನರಲ್ಲಿ ಕಳವಳವನ್ನು ಉಂಟುಮಾಡಿದೆ.

ಸನಾ ಅಂಜದ್ ಅವರು "ಮೋದಿ ಸದಾ ಶೇರ್ ಹೈ" (ಮೋದಿ ಯಾವಾಗಲೂ ಸಿಂಹ) ಎಂಬ ಶೀರ್ಷಿಕೆಯ ವಿಡಿಯೋವನ್ನು ಪೋಸ್ಟ್ ಮಾಡಿದ್ದರು. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. 370ನೇ ವಿಧಿಯನ್ನು ರದ್ದು ಮಾಡಿದ ನಂತರ ಪ್ರಧಾನಿ ಮೋದಿ, ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದಾಗ ತೆಗೆದ ವಿಡಿಯೋವನ್ನು ಅಂಜದ್​ ಪೋಸ್ಟ್​ ಮಾಡಿದ್ದರು. ಅಲ್ಲದೆ, ಪಾಕಿಸ್ತಾನದಲ್ಲಿನ ಸಮಸ್ಯೆಗಳು ಮತ್ತು ಭಾರತದಲ್ಲಿನ ಒಳ್ಳೆಯ ವಿಷಯಗಳನ್ನು ತೋರಿಸುವ ವಿಡಿಯೋಗಳನ್ನು ಮಾಡಿದ್ದರಿಂದ ಅಂಜದ್​ಗೆ ಈ ತೊಂದರೆಗಳು ಉದ್ಭವಿಸಿವೆ ಎಂದು ಹಲವರು ಭಾವಿಸಿದ್ದಾರೆ.

ಆದರೆ, ಕೆಲವರು ಬೇರೆ ರೀತಿ ಹೇಳಿಕೆಗಳನ್ನು ನೀಡಿದ್ದಾರೆ. ಹೆಚ್ಚಿನ ಭಾರತೀಯ ವೀಕ್ಷಕರು ನೋಡಿದರೆ, ಅವರು ಹೆಚ್ಚು ಹಣ ಗಳಿಸುತ್ತಾರೆ. ಅದಕ್ಕಾಗಿಯೇ ಅವರು ಉದ್ದೇಶಪೂರ್ವಕವಾಗಿ ಪಾಕಿಸ್ತಾನವನ್ನು ಕೀಳಾಗಿ ಮತ್ತು ಭಾರತವನ್ನು ಹೊಗಳುವ ವಿಡಿಯೋಗಳನ್ನು ಹಾಕಿದ್ದಾರೆ ಎಂದಿದ್ದಾರೆ. ಪಾಕಿಸ್ತಾನದಲ್ಲಿ ರಾಜಕೀಯ ಹರಾಜಕತೆ ಉಂಟಾಗಿದ್ದು, ಭ್ರಷ್ಟಾಚಾರ ಮಿತಿಮೀರಿದೆ. ಉದ್ಯೋಗ ಕೊರತೆ ಮತ್ತು ಬಡತನದ ಎಲ್ಲೆ ಮೀರಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಮಾಡುವ ಮೂಲಕ ಸನಾ ಅಂಜದ್​ ಮತ್ತು ಶೋಯೆಬ್ ಚೌಧರಿ ಭಾರತದಲ್ಲಿ ಬಹಳ ಜನಪ್ರಿಯರಾಗಿದ್ದಾರೆ.

ಅಂದಹಾಗೆ ಸನಾ ಮತ್ತು ಶೋಯೆಬ್ ಅವರ ಹಠಾತ್ ಕಣ್ಮರೆ ಪಾಕಿಸ್ತಾನದಲ್ಲಿ ಮಾತ್ರವಲ್ಲದೆ ಭಾರತದಲ್ಲಿಯೂ ಅನೇಕ ಜನರನ್ನು ಚಿಂತಿಸುವಂತೆ ಮಾಡಿದೆ. ಆದಾಗ್ಯೂ, ಅವರು ಕೊಲ್ಲಲ್ಪಟ್ಟಿದ್ದಾರೆ ಎಂಬ ವರದಿಗಳನ್ನು ಬೆಂಬಲಿಸಲು ಯಾವುದೇ ಪುರಾವೆಗಳಿಲ್ಲ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಭಾರಿ ಚರ್ಚೆಗಳು ನಡೆಯುತ್ತಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net