

ತಾಲಿಬಾನ್: ಅಫ್ಘಾನ್ ಮಹಿಳೆಯರ ಸ್ವಾತಂತ್ರ್ಯವನ್ನು ಮತ್ತಷ್ಟು ನಿರ್ಬಂಧಿಸುವ ವಿವಾದಾತ್ಮಕ ಹೊಸ ಆದೇಶವನ್ನು ತಾಲಿಬಾನ್ ಆಡಳಿತವು(Taliban Regime) ಹೊರಡಿಸಿದೆ. ಈ ಹೊಸ ಆದೇಶದ ಪ್ರಕಾರ ಮಹಿಳೆಯರು ಪರಸ್ಪರರ ಉಪಸ್ಥಿತಿಯಲ್ಲಿ ಜೋರು ಧ್ವನಿಯಲ್ಲಿ ಗಟ್ಟಿಯಾಗಿ ಪ್ರಾರ್ಥನೆ ಮಾಡುವುದನ್ನು ನಿಷೇಧಿಸಲಾಗಿದೆ. ತಾಲಿಬಾನ್ ಸಚಿವ ಮೊಹಮ್ಮದ್ ಖಾಲಿದ್ ಹನಾಫಿ ಹೊಸ ಆದೇಶವನ್ನು ಹೊರಡಿಸಿದ್ದಾರೆ.
ಮಹಿಳೆಯರ ಧ್ವನಿಯನ್ನು ಅವಾರಾ ಎಂದು ಪರಿಗಣಿಸಲಾಗುತ್ತದೆ. ಅಂದರೆ ಅದು ಮರೆಯಾಗಿ ಉಳಿಯಬೇಕು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಯಾರಿಗೂ ಕೇಳಬಾರದು. ಆದ್ದರಿಂದ ಮಹಿಳೆಯರು ಈಗ ಕುರಾನ್ ಅನ್ನು ಜೋರು ಧ್ವನಿಯಲ್ಲಿ ಪಠಿಸಬಾರದು ಎಂದು ಹೇಳುವ ಮೂಲಕ ಮೊಹಮ್ಮದ್ ಖಾಲಿದ್ ಹನಾಫಿ ತಮ್ಮ ಆದೇಶವನ್ನು ಸಮರ್ಥಿಸಿಕೊಂಡಿದ್ದಾರೆ.
ಈ ಹೊಸ ನಿರ್ಬಂಧವು ಮಹಿಳೆಯರಲ್ಲಿ ಮುಕ್ತವಾಗಿ ಮಾತನಾಡುವ ಸಾಮರ್ಥ್ಯವನ್ನು ಕಸಿದುಕೊಳ್ಳುತ್ತದೆ. ಸಾರ್ವಜನಿಕ ಜೀವನದಿಂದ ಅವರನ್ನು ಮತ್ತಷ್ಟು ದೂರ ತಳ್ಳುತ್ತದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಮಹಿಳೆಯರು ಪ್ರಾರ್ಥನೆ ಅಥವಾ ನಮಾಜ್ ಮಾಡುವಾಗ ಅವರ ಮುಂದೆ ಹಾದುಹೋಗುವ ಮತ್ತೊಬ್ಬ ಮಹಿಳೆಗೂ ನಮಾಜ್ ಮಾಡುತ್ತಿರುವ ಮಹಿಳೆಯ ಧ್ವನಿ ಕೇಳಬಾರದು. ಅಂದರೆ ಹೊಸ ಆದೇಶದ ಪ್ರಕಾರ ಮಹಿಳೆಯರು ಯಾರೊಂದಿಗೂ ಮಾತನಾಡಬಾರದು ಎಂದು ಮಾನವ ಹಕ್ಕುಗಳ ಕಾರ್ಯಕರ್ತರು ಹೇಳಿದ್ದಾರೆ.
ತಾಲಿಬಾನ್ ಸರ್ಕಾರದ ಈ ತೀರ್ಪು ಮಹಿಳೆಯರಿಗೆ ಅತ್ಯಂತ ಭಯಾನಕ ಜೈಲು ಶಿಕ್ಷೆಯನ್ನು ಸೂಚಿಸುತ್ತದೆ. ತಾಲಿಬಾನ್ ಸರ್ಕಾರ ಈಗಾಗಲೇ ಮಹಿಳೆಯರ ಎಲ್ಲಾ ಹಕ್ಕುಗಳನ್ನು ಕಸಿದುಕೊಂಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಧ್ವನಿಯನ್ನು ನಿಷೇಧಿಸಿದೆ. ಇದರ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು ಪುರುಷರೊಂದಿಗೆ ಮಾತನಾಡುವಂತಿಲ್ಲ. ಮನೆಯಿಂದ ಹೊರಗೆ ಹೋಗುವಾಗ ದೇಹವನ್ನು ಸಂಪೂರ್ಣವಾಗಿ ಮುಚ್ಚಿಕೊಳ್ಳಬೇಕು. ತಮ್ಮ ಮುಖವನ್ನು ಪುರುಷರಿಂದ ಮರೆಮಾಡಬೇಕು. ಇನ್ನು ಈ ಹೊಸ ಆದೇಶ ಪ್ರಸ್ತುತ ನಮಾಜ್, ಇಬಾದತ್ ಇತ್ಯಾದಿಗಳಿಗೆ ಮಾತ್ರ ಆಗಿದ್ದರೂ ಅದರ ವ್ಯಾಪ್ತಿ ಹೆಚ್ಚಾಗುತ್ತದೆ ಎಂಬ ಆತಂಕವನ್ನು ಹುಟ್ಟುಹಾಕಿದೆ.
ಸಚಿವ ಮೊಹಮ್ಮದ್ ಖಾಲಿದ್ ಹನಾಫಿ ಏನೇ ಹೇಳಿದರೂ ಅದು ತನಗೆ ಮಾನಸಿಕ ಹಿಂಸೆಯಾಗಿದೆ. ಅತ್ಯಂತ ನೋವಿನಿಂದ ಮಹಿಳೆಯರು ಅಫ್ಘಾನಿಸ್ತಾನದಲ್ಲಿ ವಾಸಿಸುವ ಪರಿಸ್ಥಿತಿ ಉಂಟಾಗಿದೆ. ಪ್ರತಿದಿನ ನಮ್ಮನ್ನು ಹಿಂಸಿಸುತ್ತಿದ್ದಾರೆ ಎಂದು ಕಾಬೂಲ್‌ನ ಮಹಿಳೆಯೊಬ್ಬರು ಹೇಳಿರುವುದಾಗಿ ಮೂಲಗಳು ತಿಳಿಸಿವೆ.(ಏಜೆನ್ಸೀಸ್)