ಕಾಶ್ಮೀರ, ಚೀನಾದತ್ತ ತಾಲಿಬಾನ್ ಚಿತ್ತ: ತಾಲಿಬಾನ್ ಸರ್ಕಾರ ರಚನೆ ಅಧಿಕೃತ ಘೋಷಣೆ ಇಂದು; ಮುಲ್ಲಾ ಬರಾದರ್ ನೇತೃತ್ವ?

Kabul
Published on

ಕಾಬುಲ್/ಇಸ್ಲಾಮಾಬಾದ್: ಅಫ್ಘನ್​ನಲ್ಲಿ ಹೊಸ ಸರ್ಕಾರ ರಚನೆ ಕಸರತ್ತು ಅಂತಿಮ ಹಂತದಲ್ಲಿರುವಾಗಲೇ ತಾಲಿಬಾನ್ ನಿಲುವು ಸ್ಪಷ್ಟವಾಗತೊಡಗಿದೆ. ಚೀನಾವನ್ನು ತನ್ನ ಅತ್ಯಂತ ಪ್ರಮುಖ ಪಾಲುದಾರ ರಾಷ್ಟ್ರವೆಂದು ತಾಲಿಬಾನ್ ಶುಕ್ರವಾರ ಘೋಷಿಸಿದೆ. ಕಾಶ್ಮೀರಿ ಮುಸಲ್ಮಾನರು ಸೇರಿ ಜಗತ್ತಿನ ಯಾವುದೇ ಭಾಗದ ಮುಸ್ಲಿಮರ ಪರ ಮಾತನಾಡುವುದು ನಮ್ಮ ಹಕ್ಕು ಎಂದು ತಾಲಿಬಾನಿಗಳು ಘೋಷಿಸಿದ್ದಾರೆ. ಇದರೊಂದಿಗೆ ಭಾರತ ಎದುರಿಸಬೇಕಾಗಿರುವ ಸವಾಲು ಸ್ಪಷ್ಟವಾಗಿದೆ.

ಸರ್ಕಾರ ರಚನೆ ಅಧಿಕೃತ ಘೋಷಣೆ ಶುಕ್ರವಾರ ಆಗಬಹುದೆಂಬ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದ ತಾಲಿಬಾನ್, ಶನಿವಾರ ಈ ಕಾರ್ಯ ಮಾಡುವುದಾಗಿ ಸ್ಪಷ್ಟಪಡಿಸಿದೆ. ತಾಲಿಬಾನ್ ಮೂಲಗಳ ಪ್ರಕಾರ, ಸರ್ಕಾರ ರಚನೆಗೆ ಸಂಬಂಧಿಸಿದ ಶೇಕಡ 80 ಕೆಲಸಗಳು ಪೂರ್ಣಗೊಂಡಿವೆ. ನಾಯಕತ್ವದ ವಿಚಾರದಲ್ಲಿ ಸ್ಪಷ್ಟತೆ ಮೂಡಿದಂತೆ ಕಾಣುತ್ತಿಲ್ಲ ಎಂದು ಮೂಗಳು ತಿಳಿಸಿವೆ.

ಚೀನಾ ಆಪ್ತ ಪಾಲುದಾರ ರಾಷ್ಟ್ರ: ಚೀನಾದ ಒನ್ ಬೆಲ್ಟ್ ಒನ್ ರೋಡ್ ಉಪಕ್ರಮ ಚೀನಾವನ್ನು ಆಫ್ರಿಕಾ, ಏಷ್ಯಾ ಮತ್ತು ಯುರೋಪ್​ಗಳನ್ನು ರಸ್ತೆ, ರೈಲು, ಬಂದರು ಮತ್ತು ಕೈಗಾರಿಕಾ ಪಾರ್ಕ್​ಗಳ ಮೂಲಕ ಒಗ್ಗೂಡಿಸುತ್ತದೆ. ಈ ಯೋಜನೆಯನ್ನು ತಾಲಿಬಾನ್ ಬೆಂಬಲಿಸುತ್ತದೆ. ‘ಚೀನಾ ನಮ್ಮ ಪಾಲಿಗೆ ಅತ್ಯಂತ ಆಪ್ತ ಪಾಲುದಾರ ರಾಷ್ಟ್ರವಾಗಿದೆ. ನಮ್ಮ ದೇಶದ ಅಭಿವೃದ್ಧಿಗೆ, ಅದರ ಪುನರುತ್ಥಾನಕ್ಕೆ ಹೂಡಿಕೆ ಮಾಡುವುದಕ್ಕೆ ಆ ರಾಷ್ಟ್ರ ಸಿದ್ಧವಾಗಿದೆ. ಇದು ನಮ್ಮ ಪಾಲಿಗೆ ಅತ್ಯದ್ಭುತವಾದ ಅವಕಾಶ’ ಎಂದು ತಾಲಿಬಾನ್ ವಕ್ತಾರ್ ಜಬೀವುಲ್ಲಾ ಮುಜಾಹಿದ್ ಹೇಳಿದ್ದಾನೆ.

ರಷ್ಯಾ ಕೂಡ ಆಪ್ತ ರಾಷ್ಟ್ರ: ತಾಲಿಬಾನ್ ಮಟ್ಟಿಗೆ ರಷ್ಯಾ ಕೂಡ ಆಪ್ತ ರಾಷ್ಟ್ರವಾಗಿದೆ. ಈ ಭಾಗದಲ್ಲಿ ಅದು ಬಹಳಷ್ಟು ನೆರವನ್ನು ತಾಲಿಬಾನಿಗಳಿಗೆ ನೀಡಿದೆ. ಮಾಸ್ಕೊ ಜತೆಗೆ ಉತ್ತಮ ಬಾಂಧವ್ಯವನ್ನು ಮುಂದು ವರಿಸಲಾಗುತ್ತದೆ ಎಂದು ಜಬೀವುಲ್ಲಾ ಮುಜಾಹಿದ್ ಸ್ಪಷ್ಟಪಡಿಸಿದ್ದಾನೆ.

ತಾಮ್ರದ ಗಣಿ ಚೀನಾ ಪಾಲು?: ಅಫ್ಘಾನಿಸ್ತಾನ ತಾಮ್ರದ ಗಣಿಗಳಿಂದ ಕೂಡಿದ್ದು, ಅಲ್ಲಿ ಕಾರ್ಯಾಚರಣೆ ಶುರುವಾಗಲಿದೆ. ಎಲ್ಲವನ್ನೂ ಆಧುನೀಕರಣಗೊಳಿಸಲಾಗುವುದು. ನಮ್ಮ ಉತ್ಪನ್ನಗಳನ್ನು ಜಾಗತಿಕ ಮಾರುಕಟ್ಟೆಗೆ ಚೀನಾ ತಲುಪಿಸಲಿದೆ. ತಾಲಿಬಾನ್ ಬಗ್ಗೆ ಚೀನಾಕ್ಕೆ ಉತ್ತಮ ಭಾವನೆ ಇದೆ. ಹೀಗಾಗಿ ಅದು ಕೂಡ ಎಲ್ಲ ರೀತಿಯ ನೆರವು ಒದಗಿಸುವುದಕ್ಕೂ ಸಿದ್ಧವಾಗಿದೆ ಎಂದು ಜಬೀವುಲ್ಲಾ ಮುಜಾಹಿದ್ ತಿಳಿಸಿದ್ದಾನೆ.

ಮಹಿಳಾ ಜಡ್ಜ್​ಗಳಿಗೆ ಪ್ರಾಣಭೀತಿ: ಅಫ್ಘನ್​ನಲ್ಲಿ 250ಕ್ಕೂ ಹೆಚ್ಚು ಮಹಿಳಾ ಜಡ್ಜ್​ಗಳಿದ್ದು, ಎಲ್ಲರಿಗೂ ಈಗ ಪ್ರಾಣಭೀತಿ ಕಾಡಿದೆ. ಕಳೆದ ಕೆಲವು ದಿನಗಳ ಅವಧಿಯಲ್ಲಿ ಕೆಲವು ಮಹಿಳಾ ಜಡ್ಜ್​ಗಳು ದೇಶ ಬಿಟ್ಟು ಪರಾರಿಯಾಗಿದ್ದಾರೆ. ತಾಲಿಬಾನಿಗಳು ಎಲ್ಲ ಜೈಲುಗಳಿಂದ ಉಗ್ರರನ್ನು, ಅಪರಾಧಿಗಳನ್ನು ಬಿಡುಗಡೆ ಮಾಡಿದ್ದಾರೆ. ಹೊರಬಂದವರು ತಾಲಿಬಾನಿಗಳ ಜತೆ ಸೇರಿ ಮಹಿಳಾ ಜಡ್ಜ್​ಗಳಿಗಾಗಿ ಶೋಧ ಶುರುಮಾಡಿದ್ದಾರೆ. ಜನವರಿಯಲ್ಲಿ ಇಬ್ಬರು ಮಹಿಳಾ ಜಡ್ಜ್​ಗಳನ್ನು ತಾಲಿಬಾನಿಗಳು ಹತ್ಯೆ ಮಾಡಿದ್ದರು.

ಕಾಶ್ಮೀರಿ ಮುಸ್ಲಿಮರು ನಮ್ಮವರು!: ಕಾಶ್ಮೀರಿ ಮುಸ್ಲಿಮರು ನಮ್ಮವರು. ಅವರ ಪರವಾಗಿ ಮಾತನಾಡುವುದು ನಮ್ಮ ಹಕ್ಕು. ಕಾಶ್ಮೀರ ಸೇರಿದಂತೆ ಜಗತ್ತಿನ ಯಾವುದೇ ಭಾಗದಲ್ಲಿ ಮುಸ್ಲಿಮರಿದ್ದರೂ ಅವರ ಪರವಾಗಿ ನಾವು ಮಾತನಾಡುತ್ತೇವೆ. ಅವರು ನಮ್ಮ ಪೌರರು ಮತ್ತು ಅವರಿಗೆ ನಮ್ಮ ಕಾನೂನು ಪ್ರಕಾರ ಸಮಾನ ಹಕ್ಕು ಲಭ್ಯವಾಗುತ್ತದೆ. ಆದಾಗ್ಯೂ, ಯಾವುದೇ ದೇಶದ ಮೇಲೆ ಸಶಸ್ತ್ರ ದಾಳಿ ನಡೆಸುವುದು ಸಂಘಟನೆಯ ಉದ್ದೇಶವಲ್ಲ ಎಂದು ತಾಲಿಬಾನ್ ವಕ್ತಾರ ಸುಹೈಲ್ ಷಹೀನ್ ದೋಹಾದಲ್ಲಿ ತಿಳಿಸಿದ್ದಾನೆ.

ಉಗ್ರರ ನೆಲೆಯಾಗದಿರಲಿ ಅಫ್ಘಾನಿಸ್ತಾನ: ಅಫ್ಘನ್ ನೆಲವನ್ನು ಉಗ್ರರು ಇತರೆ ದೇಶಗಳ ಮೇಲೆ ದಾಳಿ ನಡೆಸುವುದಕ್ಕೆ ಬಳಸದಿರಲಿ ಎಂಬುದು ಭಾರತದ ಕಾಳಜಿ. ತಾಲಿಬಾನ್ ನಾಯಕರಿಗೂ ಇದನ್ನು ಮನವರಿಕೆ ಮಾಡಿದ್ದೇವೆ. ಅವರಿಂದಲೂ ಧನಾತ್ಮಕ ಪ್ರತಿಕ್ರಿಯೆ ಲಭ್ಯವಾಗಿದೆ. ಹಕ್ಕಾನಿ ನೆಟ್​ವರ್ಕ್ ಈಗ ಒಂದು ಗುಂಪಾಗಿ ಉಳಿದಿಲ್ಲ. ಅದು ಇಸ್ಲಾಮಿಕ್ ಎಮಿರೇಟ್ ಆಫ್ ಅಫ್ಘಾನಿಸ್ಥಾನದ ಭಾಗವಾಗಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಗ್ಚಿ ಗುರುವಾರ ತಿಳಿಸಿದ್ದಾರೆ.

ಕಾಬುಲ್ ಪ್ಯಾಲೇಸ್ ಎದುರು ಸ್ತ್ರೀಯರ ಪ್ರತಿಭಟನೆ: ಕಾಬುಲ್​ನಲ್ಲಿರುವ ಪ್ರೆಸಿಡೆನ್ಶಿಯಲ್ ಪ್ಯಾಲೇಸ್ ಎದುರು ಹನ್ನೆರಡಕ್ಕೂ ಹೆಚ್ಚು ಮಹಿಳೆಯರು ಶುಕ್ರವಾರ ಪ್ರತಿಭಟನೆ ನಡೆಸಿದರು. ಹೊಸ ಸರ್ಕಾರದಲ್ಲಿ ಮಹಿಳೆಯರಿಗೂ ಪ್ರಾತಿನಿಧ್ಯ ನೀಡಬೇಕು ಎಂದು ಆಗ್ರಹಿಸಿದ ಅವರು, ಮಾನವ ಹಕ್ಕುಗಳ ರಕ್ಷಣೆ ಮಾಡಬೇಕು ಎಂದು ಘೋಷಣೆ ಕೂಗಿದರು. ಮಹಿಳೆಯರಿಗೆ ಶಿಕ್ಷಣ, ಸಾಮಾಜಿಕ ಮತ್ತು ರಾಜಕೀಯ ಸ್ವಾತಂತ್ರ್ಯ ಸಿಗಬೇಕು ಎಂದು ಆಗ್ರಹಿಸಿದರು.

ನಿರಾಶ್ರಿತರಿಗೆ ಆಶ್ರಯ ಅಪಾಯ ತಪ್ಪಿದ್ದಲ್ಲ: ಅಫ್ಘನ್​ನ ನಿರಾಶ್ರಿತರಿಗೆ ರಾಜಕೀಯ ಆಶ್ರಯ ನೀಡಿದರೆ ಭಾರತ ಕಠಿಣ ಪರಿಸ್ಥಿತಿಗಳನ್ನು ಎದುರಿಸಬೇಕಾದೀತು. ಈ ನಿರಾಶ್ರಿತರು ಭಾರತದಲ್ಲಿದ್ದುಕೊಂಡು ಅಫ್ಘನ್ ವಿರೋಧಿ ಕೃತ್ಯಗಳಲ್ಲಿ ತೊಡಗಿದರೆ ಆಗ ತಾಲಿಬಾನ್ ಅದಕ್ಕೆ ಪ್ರತಿಕ್ರಿಯಿಸಬೇಕಾದೀತು ಎಂದು ಬಚರ್ ಆಫ್ ಕಾಬುಲ್ ಎಂದು ಗುರುತಿಸಿಕೊಂಡಿರುವ ಗುಲ್ಬುದ್ದೀನ್ ಹೆಕ್ಮತ್ಯಾರ್ ಎಚ್ಚರಿಸಿದ್ದಾನೆ. ಹೆಕ್ಮತ್ಯಾರ್ (72) ಪಾಕ್ ಮೂಲದ ಹಿಜ್ಬ ಏ ಇಸ್ಲಾಮಿ ಗೆರಿಲ್ಲಾ ಗ್ರೂಪ್​ಗೆ ಕೆಲಸ ಮಾಡಿ, ಬಂಧನಕ್ಕೆ ಒಳಗಾಗಿದ್ದ. 2017ರಲ್ಲಿ ಅಶ್ರಫ್ ಘನಿ ಅಧ್ಯಕ್ಷರಾಗಿದ್ದ ವೇಳೆ ಕ್ಷಮಾದಾನ ಪಡೆದುಕೊಂಡು ಸಮಾಜದ ಮುಖ್ಯವಾಹಿನಿಗೆ ಸೇರ್ಪಡೆ ಗೊಂಡ ವ್ಯಕ್ತಿ.

ಅಫ್ಘನ್-ತಾಲಿಬಾನ್ ಧ್ವಜ ಅಕ್ಕಪಕ್ಕ: ಅಫ್ಘಾನಿಸ್ತಾನದ ಟಾಪ್ ಕ್ರಿಕೆಟರ್​ಗಳು ಶುಕ್ರವಾರ ಕಾಬುಲ್​ನಲ್ಲಿ ಟ್ರಯಲ್ ಮ್ಯಾಚ್ ಆಡಿದ ಸಂದರ್ಭದಲ್ಲಿ ಪ್ರೇಕ್ಷಕರ ಗ್ಯಾಲರಿಯಲ್ಲಿ ಅಫ್ಘಾನಿಸ್ತಾನದ ರಾಷ್ಟ್ರಧ್ವಜ ಮತ್ತು ತಾಲಿಬಾನ್ ಧ್ವಜಗಳನ್ನು ಹಿಡಿದವರು ಅಕ್ಕಪಕ್ಕ ಕುಳಿತಿದ್ದುದು ಛಾಯಾಚಿತ್ರಕಾರರ ಗಮನಸೆಳೆದಿತ್ತು.

ಪಂಜ್​ಶೀರ್​ನಲ್ಲಿ ಪ್ರತಿರೋಧ ತೀವ್ರ: ಪಂಜ್​ಶೀರ್ ಅನ್ನು ವಶಪಡಿಸುವ ತಾಲಿಬಾನಿಗಳ ಇರಾದೆಗೆ ಭಾರಿ ಹಿನ್ನಡೆ ಉಂಟಾಗಿದೆ. ಮಾಜಿ ಮುಜಾಹಿದ್ದೀನ್ ಕಮಾಂಡರ್ ಅಹಮದ್ ಷಾ ಮಸೂದ್​ನ ಪುತ್ರ ಅಹ್ಮದ್ ಮಸೂದ್ ನೇತೃತ್ವದ ತಂಡ ತಾಲಿಬಾನಿಗಳಿಗೆ ತಲೆನೋವು ಉಂಟುಮಾಡಿದೆ. ಈ ತಂಡದಲ್ಲಿ ಪ್ರಾದೇಶಿಕ ಮಟ್ಟದ ಸಾವಿರಾರು ಬಂಡುಕೋರರು, ಸರ್ಕಾರದ ಸಶಸ್ತ್ರ ಪಡೆಗಳಿಂದ ಹೊರಬಿದ್ದ ಯೋಧರು ಸೇರಿಕೊಂಡು ಹೋರಾಟ ಮುಂದುವರಿಸಿದ್ದಾರೆ. ಇವರ ಜತೆಗಿನ ಸಂಧಾನ ಮಾತುಕತೆ ಮುರಿದು ಬಿದ್ದ ಕಾರಣ, ಸಮರ ಶುರುವಾಗಿದೆ.

ಭಾರತದ ರಾಯಭಾರ ಕಚೇರಿ ಸೇಫ್: ಕಾಬುಲ್​ನಲ್ಲಿರುವ ಭಾರತದ ರಾಯಭಾರ ಕಚೇರಿ ಸುರಕ್ಷಿತವಾಗಿದ್ದು, ಕಾರ್ಯನಿರ್ವಹಿಸುತ್ತಿದೆ. ಅಲ್ಲಿ ಕೆಲಸ ಮಾಡುತ್ತಿರುವ ಸ್ಥಳೀಯ ಉದ್ಯೋಗಿಗಳಿಗೆ ಸರಿಯಾದ ಸಮಯಕ್ಕೆ ವೇತನವನ್ನೂ ವಿಲೇವಾರಿ ಮಾಡಲಾಗಿದೆ. ಇನ್ನೂ ಕೆಲವು ಭಾರತೀಯರು ಅಫ್ಘನ್​ನಲ್ಲಿ ಇದ್ದು, ಅವರನ್ನು ಭಾರತಕ್ಕೆ ಕರೆ ತರುವ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

ತಾಲಿಬಾನ್ ಸರ್ಕಾರಕ್ಕೆ ಯಾರ ನೇತೃತ್ವ?: ಅಫ್ಘಾನಿಸ್ತಾನ ಸರ್ಕಾರ ರಚನೆ ಕಸರತ್ತು ನಡೆದಿದ್ದು, ನಾಯಕತ್ವದ ವಿಚಾರದಲ್ಲಿ ತಾಲಿಬಾನಿಗಳಲ್ಲಿ ಇನ್ನೂ ಹೊಂದಾಣಿಕೆ ಏರ್ಪಟ್ಟಿಲ್ಲ. ಸರ್ಕಾರದ ಸುಪ್ರೀಂ ಲೀಡರ್ ಆಗಿ ಮುಲ್ಲಾ ಹೆಬತುಲ್ಲಾ ಅಖುಂಡ್​ರೆದಾ ಇರಲಿದ್ದಾರೆ ಎಂದು ಗುರುವಾರ ಹೇಳಿದ್ದ ತಾಲಿಬಾನಿಗಳು, ಶುಕ್ರವಾರ ಮುಲ್ಲಾ ಬರದಾರ್ ಹೆಸರು ಹೇಳಿದ್ದಾರೆ. ಸುಪ್ರೀಂ ನಾಯಕತ್ವದ ವಿಚಾರವಾಗಿ ಇನ್ನೂ ಸ್ಪಷ್ಟತೆ ಮೂಡಿಲ್ಲ. ಇಷ್ಟಾಗ್ಯೂ ಸರ್ಕಾರ ರಚನೆಯ ಮಹತ್ವದ ತೀರ್ವನವನ್ನು ಶನಿವಾರ ಪ್ರಕಟಿಸುವುದಾಗಿ ತಾಲಿಬಾನ್ ಹೇಳಿದೆ.

ತಾಲಿಬಾನ್ ಸಹ ಸಂಸ್ಥಾಪಕ ಮುಲ್ಲಾ ಬರದಾರ್ ಹೊಸ ಸರ್ಕಾರದ ನೇತೃತ್ವ ವಹಿಸಲಿದ್ದಾರೆ. ಬರದಾರ್ ತಾಲಿಬಾನ್​ನ ರಾಜಕೀಯ ಘಟಕದ ನೇತೃತ್ವವಹಿಸಿದ್ದಾರೆ. ಇವರ ಜತೆಗೆ ತಾಲಿಬಾನ್ ಸಂಸ್ಥಾಪಕ ದಿವಂಗತ ಮುಲ್ಲಾ ಒಮರ್ ಪುತ್ರ ಮೊಹಮ್ಮದ್ ಯಾಕೂಬ್ ಕೂಡ ಸಂಪುಟ ಸೇರಲಿದ್ದಾರೆ. ಶೇರ್ ಮೊಹಮ್ಮದ್ ಅಬ್ಬಾಸ್ ಸ್ಟಾನೆಕ್​ರೆೈ ಕೂಡ ಪ್ರಮುಖ ಸ್ಥಾನ ಹೊಂದಲಿದ್ದಾರೆ ಎಂದು ತಾಲಿಬಾನ್​ನ ಮೂರು ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.

ಹಿಬತುಲ್ಲಾ ಸುಪ್ರೀಂ ಲೀಡರ್?: ಹಿಬತುಲ್ಲಾ ಅಖುಂಡ್​ರೆದಾ ತಾಲಿಬಾನ್​ನ ಸವೋನ್ನತ ಧಾರ್ವಿುಕ ನಾಯಕರಾಗಿದ್ದು, ಅವರು ಧಾರ್ವಿುಕ ವಿಚಾರಗಳಿಗೆ ಹೆಚ್ಚಿನ ಗಮನಹರಿಸಲಿದ್ದಾರೆ. ಅದರ ಜತೆಗೆ ರಾಜಕೀಯ ನಾಯಕತ್ವವನ್ನೂ ತಿದ್ದಿತೀಡಲಿದ್ದಾರೆ ಎಂದು ತಾಲಿಬಾನ್ ಮೂಲಗಳು ಹೇಳಿವೆ.

ಸರ್ಕಾರ ರಚನೆ, ಸಚಿವ ಸಂಪುಟ ಹೇಗಿರಲಿದೆ?: ಸರ್ಕಾರದಲ್ಲಿ ಕನ್ಸಲ್ಟೇಟಿವ್ ಕೌನ್ಸಿಲ್ ಅಥವಾ ಶುರಾದಲ್ಲಿ 25 ಸಚಿವಾಲಯಗಳು ಇರಲಿವೆ. 12 ಮುಸ್ಲಿಂ ವಿದ್ವಾಂಸರು ಸಂಪುಟದಲ್ಲಿ ಸ್ಥಾನಪಡೆಯಲಿದ್ದಾರೆ. ಸದ್ಯ ರಚನೆಯಾಗುತ್ತಿರುವುದು ಮಧ್ಯಂತರ ಸರ್ಕಾರವಾಗಿರಲಿದೆ. ಆರರಿಂದ ಎಂಟು ತಿಂಗಳ ಅವಧಿಯಲ್ಲಿ ಒಂದು ಲೋಯಾ ಜಿರ್ಗಾ ಅಥವಾ ಬೃಹತ್ ಅಸೆಂಬ್ಲಿ ಆಯೋಜಿಸುವ ತೀರ್ಮಾನ ನಡೆದಿದೆ. ಇದರಲ್ಲಿ ಹಿರಿಯರು ಮತ್ತು ಅಫ್ಘನ್ ಸಮಾಜದ ಪ್ರತಿಯೊಂದು ಸಮುದಾಯದ ಹಿರಿಯ ನಾಯಕರು ಸೇರಲಿದ್ದು, ದೇಶದ ಸಂವಿಧಾನ ರಚನೆ ಮತ್ತು ಭವಿಷ್ಯದ ಸರ್ಕಾರ ರಚನೆಯ ವಿನ್ಯಾಸದ ಕುರಿತು ಮಾತುಕತೆ ನಡೆಸಲಿದ್ದಾರೆ.

ಸರ್ಕಾರದ ಮೊದಲ ಆದ್ಯತೆ: ಎರಡು ದಶಕಗಳ ಸಂಘರ್ಷದ ಕಾರಣ ಕುಸಿದ ಆರ್ಥಿಕತೆಯನ್ನು ಸುಧಾರಿಸುವುದು, ಬರ ಪರಿಸ್ಥಿತಿ, ಇತರೆ ಸಾಮಾಜಿಕ ಪರಿಸ್ಥಿತಿಯನ್ನು ನಿಭಾಯಿಸುವುದು ಸದ್ಯ ಹೊಸ ಸರ್ಕಾರದ ಮುಂದಿರುವ ಆದ್ಯತೆ ಮತ್ತು ಸವಾಲಿನ ವಿಚಾರ ಎಂದು ತಾಲಿಬಾನ್ ನಾಯಕರು ಹೇಳಿಕೊಂಡಿದ್ದಾರೆ. ಸಂಘರ್ಷಕ್ಕೆ 2.40 ಲಕ್ಷ ಅಫ್ಘನ್ನರು ಮೃತಪಟ್ಟಿದ್ದಾರೆ.

ತಾಲಿಬಾನ್ ಸರ್ಕಾರವನ್ನು ಮಾನ್ಯ ಮಾಡುವ ಇರಾದೆ ಇಲ್ಲ. ಆದರೆ, ಅವರೊಂದಿಗೆ ರಚ ನಾತ್ಮಕ ಸಂಬಂಧ ಹೊಂದಲು ಮಾತುಕತೆ ನಡೆಸಲು ಸಿದ್ಧ.

| ಡಾಮಿನಿಕ್ ರಾಬ್ ಬ್ರಿಟನ್ ವಿದೇಶಾಂಗ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net