ಕುಷ್ಠರೋಗಕ್ಕೆ ಚಿಕಿತ್ಸೆ ಪಡೆಯದಿದ್ದರೆ ಅಂಗವೈಕಲ್ಯ

IMG_20231215_115528385
Published on

ತಿ.ನರಸೀಪುರ: ಸ್ಪರ್ಶ ಜ್ಞಾನವಿಲ್ಲದ ತಿಳಿ ಬಿಳಿ, ತಾಮ್ರ ಬಣ್ಣದ ಮಚ್ಚೆಯೇ ಕುಷ್ಠರೋಗವಾಗಿರಬಹುದು. ದೇಹದ ಮೇಲೆ ಯಾವುದೇ ರೀತಿಯ ಮಚ್ಚೆಗಳು ಕಾಣಿಸಿಕೊಂಡಲ್ಲಿ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಚಿಕಿತ್ಸೆ ಪಡೆಯಬೇಕು ಎಂದು ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಬೃಂದಾ ಹೇಳಿದರು.


ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ, ಜಿಲ್ಲಾ ಕುಷ್ಠರೋಗ ನಿರ್ಮೂಲನಾ ವಿಭಾಗದಿಂದ ಹಮ್ಮಿಕೊಂಡಿದ್ದ ಕುಷ್ಠರೋಗಿಗಳಿಗೆ ಉಚಿತ ಔಷಧ, ಪರಿಕರಗಳನ್ನು ವಿತರಿಸಿ ಅವರು ಮಾತನಾಡಿದರು.
ಕುಷ್ಠರೋಗ ಸಾಂಕ್ರಾಮಿಕ ಕಾಯಿಲೆ. ಇದನ್ನು ಸಂಪೂರ್ಣವಾಗಿ ಚಿಕಿತ್ಸೆ ಮೂಲಕ ಗುಣಪಡಿಸಬಹುದು. ಚಿಕಿತ್ಸೆ ಪಡೆಯದ ರೋಗಿಗಳು ಕೆಮ್ಮುವುದರಿಂದ, ಅವರ ಉಗುಳಿನಿಂದ ಇತರರಿಗೂ ರೋಗ ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದರು.


ಕುಷ್ಠರೋಗಕ್ಕೆ ಚಿಕಿತ್ಸೆ ಪಡೆಯದಿದ್ದರೆ ಶಾಶ್ವತ ಅಂಗವೈಕಲ್ಯಕ್ಕೆ ಕಾರಣವಾಗಬಹುದು. ಸಾಧಾರಣ ಗತಿಯಲ್ಲಿ 6 ತಿಂಗಳಲ್ಲಿ ರೋಗ ಗುಣಮುಖವಾಗುತ್ತದೆ. ಗಂಭೀರ ಸ್ಥಿತಿ ಇದ್ದರೆ 9 ರಿಂದ 12 ತಿಂಗಳ ಚಿಕಿತ್ಸೆ ನೀಡಬೇಕಾಗುತ್ತದೆ. ಒಂದೊಮ್ಮೆ ರೋಗ ನಿರ್ಣಯವಾದರೂ ಕೆಲವರು ಚಿಕಿತ್ಸೆ ಪಡೆಯಲು ಹಿಂದೇಟು ಹಾಕುವುದರಿಂದ ರೋಗ ಹರಡಲು ಪ್ರಧಾನ ಕಾರಣವಾಗುತ್ತದೆ. ಪುಟ್ಟ ಮಕ್ಕಳಲ್ಲೂ ಈ ರೋಗ ಕಂಡುಬರುತ್ತಿರುವುದು ದುರಂತ ಎಂದು ವಿಷಾದಿಸಿದರು.


ಇದೇ ವೇಳೆ ಕುಷ್ಠರೋಗ ಬಾಧಿತರಿಗೆ ಪಾದರಕ್ಷೆ, ಔಷಧ ಮತ್ತಿತರ ಪರಿಕರಗಳನ್ನು ವಿತರಿಸಲಾಯಿತು. ತಾಲೂಕು ಆರೋಗ್ಯಾಧಿಕಾರಿ ಎಂ.ಕೆ.ರವಿಕುಮಾರ್, ಆಡಳಿತಾಧಿಕಾರಿ ಡಾ.ಜಗನ್ನಾಥ್, ಚರ್ಮರೋಗ ತಜ್ಞ ಡಾ. ಪದ್ಮರಾಜು, ಡಾ.ರಾಮಚಂದ್ರ, ಆರೋಗ್ಯ ನಿರೀಕ್ಷಣಾಧಿಕಾರಿ ರಾಜಣ್ಣ, ಫಿಜಿಯೋಥೆರಪಿ ವಿಭಾಗದ ಸಿಬ್ಬಂದಿ ಶ್ರುತಿ, ಸುಮಂತ್, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net