ಐಪಿಎಸ್ ಅಧಿಕಾರಿ ವಿರುದ್ಧ ಕ್ರಮ ಜರುಗಿಸಿ

tth pro
ಎಚ್.ಡಿ.ಕುಮಾರಸ್ವಾಮಿಯನ್ನು ನಿಂದಿಸಿರುವ ಅಧಿಕಾರಿ ಎಂ.ಚಂದ್ರಶೇಖರ್ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿ ಜೆಡಿಎಸ್‌ನಿಂದ ಪ್ರತಿಭಟನೆ ನಡೆಸಲಾಯಿತು. ಕುಡುವಳ್ಳಿ ಗುರುದತ್ತ ಕುಮಾರ್, ತಲುಬಿ ರಾಘವೇಂದ್ರ, ಶೈಲಾ ಮತ್ತಿತರರಿದ್ದರು.
Published on

ತೀರ್ಥಹಳ್ಳಿ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಏಕವಚನ ಬಳಸಿ ನಿಂದಿಸಿರುವ ಐಪಿಎಸ್ ಅಧಿಕಾರಿ ಎಂ.ಚಂದ್ರಶೇಖರ್ ವಿರುದ್ಧ ಕ್ರಮ ಜರುಗಿಸಬೇಕು ಎಂದು ತಾಲೂಕು ಜಾತ್ಯತೀತ ಜನತಾದಳದ ಅಧ್ಯಕ್ಷ ಕುಣಜೆ ಕಿರಣ್ ಪ್ರಭಾಕರ್ ಸರ್ಕಾರವನ್ನು ಆಗ್ರಹಿಸಿದರು.

ತಾಲೂಕು ಜಾತ್ಯತೀತ ಜನತಾದಳದಿಂದ ಗುರುವಾರ ತಾಲೂಕು ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಮಾತನಾಡಿ, ತಾನೊಬ್ಬ ಐಪಿಎಸ್ ಅಧಿಕಾರಿ ಎಂಬ ದರ್ಪದಿಂದ ಕೇಂದ್ರ ಸರ್ಕಾರದ ಭಾರಿ ಕೈಗಾರಿಕೆ ಸಚಿವರಾಗಿರುವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಅವಹೇಳನಕಾರಿಯಾಗಿ ಪತ್ರ ಬರೆದಿರುವುದು ಖಂಡನೀಯ ಎಂದು ದೂರಿದರು.
ಭೂ ವ್ಯವಹಾರವೊಂದರಲ್ಲಿ 20 ಕೋಟಿ ರೂ. ಲಂಚದ ಬೇಡಿಕೆ ಇಟ್ಟಿರುವ ಈ ಅಧಿಕಾರಿ ವಿರುದ್ಧ ಒರ್ವ ಇನ್‌ಸ್ಪೆೆಕ್ಟರ್ ದೂರು ನೀಡಿರುವುದಾಗಿ ತಿಳಿದು ಬಂದಿದೆ. ಬೆಂಗಳೂರಿನಲ್ಲಿ ಪತ್ನಿಯ ಹೆಸರಿನಲ್ಲಿ ರಾಜಕಾಲುವೆ ಮೇಲೆ ಬಹುಮಹಡಿಯ ವಾಣಿಜ್ಯ ಕಟ್ಟಡ ಕಟ್ಟಲಾಗುತ್ತಿದೆ. ಕೆರೆ ಒತ್ತುವರಿ ಮಾಡಿಕೊಂಡಿರುವ ಅಕ್ರಮಗಳ ಬಗ್ಗೆಯೂ ತನಿಖೆ ನಡೆಯಬೇಕಲ್ಲವೇ ಎಂದು ಪ್ರಶ್ನಿಸಿದರು.
ಲೋಕಾಯುಕ್ತ ಇಲಾಖೆಯ ವಿಶೇಷ ತನಿಖಾದಳದ ಎಡಿಜಿಪಿ ಎಂ.ಚಂದ್ರಶೇಖರ್ ವಿರುದ್ಧ ಹಲವು ಭ್ರಷ್ಟಾಚಾರದ ದೂರುಗಳು ದಾಖಲಾಗಿರುವ ಬಗ್ಗೆ ದಾಖಲೆಗಳ ಸಹಿತ ಮಾಧ್ಯಮಗಳ ಮುಂದೆ ಬಯಲು ಮಾಡಲಾಗಿದೆ. ಒಂದೊಮ್ಮೆ ತಮ್ಮ ಮೇಲಿನ ಆರೋಪಗಳು ನಿಜವಲ್ಲವಾದರೆ ಈ ಅಧಿಕಾರಿ ಕಾನೂನಿನಡಿ ಉತ್ತರಿಸಬಹುದಾಗಿತ್ತು. ಬದಲಾಗಿ ಕೀಳು ಮಟ್ಟದಿಂದ ವರ್ತಿಸಿದ ಈ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಪಕ್ಷದ ಕಾರ್ಯದರ್ಶಿ ಕುಡುವಳ್ಳಿ ಗುರುದತ್ತ ಕುಮಾರ್, ತಾಲೂಕು ಯುವ ಜೆಡಿಎಸ್ ಅಧ್ಯಕ್ಷ ತಲುಬಿ ರಾಘವೇಂದ್ರ, ಮಹಿಳಾ ಘಟಕದ ಅಧ್ಯಕ್ಷೆ ಶೈಲಾ, ಮೇಧೋಳಿಗೆ ರಾಮಸ್ವಾಮಿ, ಡಾಕಪ್ಪ, ಜೆಡಿಎಸ್ ಪರಿಶಿಷ್ಟ ವಿಭಾಗದ ಅಧ್ಯಕ್ಷ ಆನಂದ್ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net