ಕಳಪೆ ಅಡಕೆ ಮಿಶ್ರಣದ ವಿರುದ್ಧ ಕ್ರಮ ಕೈಗೊಳ್ಳಿ

apmc manavi
ಕಲಬೆರಕೆ ಅಡಕೆ ಮಾರಾಟ ಮಾಡುವವರ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿ ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದ ಪದಾಧಿಕಾರಿಗಳು ಸಾಗರದಲ್ಲಿ ಎಪಿಎಂಸಿ ಕಾರ್ಯದರ್ಶಿ ನಿಜಲಿಂಗಪ್ಪ ತೋಟದ್‌ಗೆ ಮನವಿ ಸಲ್ಲಿಸಿದರು. ರಾಮಚಂದ್ರ ಭಟ್, ಚೇತನರಾಜ್ ಕಣ್ಣೂರು, ಆರ್.ಎಸ್.ಗಿರಿ, ಯು.ಎಚ್.ರಾಮಪ್ಪ, ರವಿಕುಮಾರ್ ಇತರರಿದ್ದರು.
Published on

ಸಾಗರ: ಮಾರುಕಟ್ಟೆಗೆ ಕಳಪೆ ಹಾಗೂ ಕಲಬೆರಕೆ ಅಡಕೆ ಬರುತ್ತಿರುವುದರಿಂದ ಮಲೆನಾಡಿನ ಗುಣಮಟ್ಟದ ಅಡಕೆ ಬೆಲೆ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಕಲಬೆರಕೆ ಅಡಕೆ ಮಾರಾಟಗಾರರು ಮತ್ತು ಮಿಶ್ರಣ ಮಾಡಿ ಗುಣಮಟ್ಟ ಹಾಳು ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದ ಪದಾಧಿಕಾರಿಗಳು ಮಂಗಳವಾರ ಎಪಿಎಂಸಿ ಕಾರ್ಯದರ್ಶಿ ನಿಜಲಿಂಗಪ್ಪ ತೋಟದ್ ಅವರಿಗೆ ಮನವಿ ಸಲ್ಲಿಸಿದರು.

ನಮ್ಮ ಭಾಗದಲ್ಲಿ ಸಾಂಪ್ರದಾಯಿಕ ಬೆಳೆಗಾರರಿದ್ದು, ಮಾರುಕಟ್ಟೆಗೆ ಗುಣಮಟ್ಟದ ಅಡಕೆ ತರುತ್ತಿದ್ದಾರೆ. ಆದರೆ ಇತ್ತೀಚೆಗೆ ಕಲಬೆರಕೆ ಹಾಗೂ ಕಳಪೆ ಅಡಕೆ ಪ್ರವೇಶ ಮಾಡುತ್ತಿದೆ. ಬೆಳೆಗಾರರು ಕಳಪೆ ಹಾಗೂ ಕಲಬೆರಕೆ ಮಾಡುತ್ತಿಲ್ಲ. ಕೆಲವು ಮಧ್ಯವರ್ತಿಗಳು ಇಂತಹ ಕೃತ್ಯ ಮಾಡಿ ಕೆಟ್ಟ ಹೆಸರು ತರುತ್ತಿದ್ದಾರೆ. ಅಡಕೆಗೆ ಬಣ್ಣ ಹಾಕಿ ಒಳ್ಳೆಯ ಅಡಕೆ ಜತೆ ಕಲಬೆರಕೆ ಮಾಡುತ್ತಿದ್ದಾರೆ. ಇದರಿಂದ ಅಡಕೆ ಸೇವನೆ ಮಾಡುವವರ ಆರೋಗ್ಯ ಹಾಳಾಗುತ್ತಿದೆ. ಯಾರು ಕಲಬೆರಕೆ ಮಾಡುತ್ತಿದ್ದಾರೋ ಅವರನ್ನು ಬಂಧಿಸಬೇಕು. ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ತೀವ್ರಗೊಳಿಸುತ್ತೇವೆ ಎಂದು ಸಂಘದ ಅಧ್ಯಕ್ಷ ವ.ಶಂ.ರಾಮಚಂದ್ರ ಭಟ್ ಎಚ್ಚರಿಸಿದರು.
ಸಾಗರ ಎಪಿಎಂಸಿ ಮಾಜಿ ಅಧ್ಯಕ್ಷ ಚೇತನರಾಜ್ ಕಣ್ಣೂರು ಮಾತನಾಡಿ, ಅಡಕೆ ಬೆಳೆಗಾರರ ರಕ್ಷಣೆ ನಮ್ಮ ಆದ್ಯ ಕರ್ತವ್ಯ. ಕಲಬೆರೆಕೆಯಿಂದ ಬೆಳೆಗಾರರ ಹೆಸರು ಹಾಳಾಗುವ ಜತೆಗೆ ಅಡಕೆ ಗುಣಮಟ್ಟ ಕೆಡುತ್ತಿದೆ. ಮಾರುಕಟ್ಟೆ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಇಂತಹ ಕೃತ್ಯ ಮಾಡುವವರ ವಿರುದ್ಧ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಆರ್.ಎಸ್.ಗಿರಿ, ಹಿರಿಯ ಸಹಕಾರಿ ಯು.ಎಚ್.ರಾಮಪ್ಪ, ರವಿಕುಮಾರ್, ರಾಜೇಂದ್ರ ಖಂಡಿಕಾ, ವೆಂಕಟೇಶ್, ನಾಗಾನಂದ, ರಾಜಶೇಖರ ಹಂದಿಗೋಡು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net