ಭಾರಿ ಮಳೆಗೆ ಸೋರುತ್ತಿದೆ ತಾಜ್ ಮಹಲ್‌ನ ಮುಖ್ಯ ಗುಮ್ಮಟ! ಅಸಾದುದ್ದೀನ್​ ಓವೈಸಿ ಆಕ್ರೋಶ

Taj Mahal
Published on

ಆಗ್ರಾ: ನಗರದಲ್ಲಿ ಸುರಿದ ಭಾರಿ ಮಳೆಗೆ ಐತಿಹಾಸಿಕ ಸ್ಮಾರಕ ತಾಜ್ ಮಹಲ್ ಹಾನಿಗೊಳಗಾಗಿದೆ. 48 ಗಂಟೆಗಳ ನಿರಂತರ ಮಳೆಯ ನಂತರ ತಾಜ್ ಮಹಲ್‌ನ ಮುಖ್ಯ ಗುಮ್ಮಟ ಸೋರುತ್ತಿರುವುದು ಕಂಡುಬಂದಿದೆ. ಭಾರತೀಯ ಪುರಾತತ್ವ ಇಲಾಖೆಯು ಹೆಚ್ಚಿನ ಮೇಲ್ವಿಚಾರಣೆಗಾಗಿ ಸಿಬ್ಬಂದಿಯನ್ನು ನಿಯೋಜಿಸಿದೆ.

ಸ್ಮಾರಕದ ಸುತ್ತಲಿನ ಉದ್ಯಾನ ಜಲಾವೃತಗೊಂಡಿದೆ. ಅಲ್ಲದೆ, ಮೊಘಲ್ ದೊರೆ ಶಹಜಹಾನ್​ನ ಸಮಾಧಿಗೂ ನೀರು ನುಗ್ಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ತಾಜ್​ ಮಹಲ್​ನಲ್ಲಿ ಎಲ್ಲೆಲ್ಲಿ ಸೋರಿಕೆಯಾಗುತ್ತಿದೆ ಎಂಬುದನ್ನು ಪತ್ತೆ ಹಚ್ಚಲು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪುರಾತತ್ವ ಇಲಾಖೆ ಅಧೀಕ್ಷಕ ಪುರಾತತ್ವಶಾಸ್ತ್ರಜ್ಞ ರಾಜ್‌ಕುಮಾರ್ ಪಟೇಲ್ ಹೇಳಿದ್ದಾರೆ. ಮಳೆ ಕಡಿಮೆಯಾದ ನಂತರ ಅಗತ್ಯ ದುರಸ್ತಿ ಕೈಗೊಳ್ಳಲು ನಿರ್ಧರಿಸಲಾಗಿದೆ.

ಡ್ರೋನ್ ಬಳಸಿ ಮುಖ್ಯ ಗುಮ್ಮಟದ ಸಮೀಕ್ಷೆಯನ್ನು ನಡೆಸಲಾಯಿತು. ಫಿನಿಯಲ್‌ನ ತಳದಲ್ಲಿ ತುಕ್ಕು ಹಿಡಿದಿರುವುದು ಕಂಡುಬಂದಿದೆ. ಈ ತುಕ್ಕಿನಿಂದಾಗಿ ಕಲ್ಲಿನಲ್ಲಿ ಬಿರುಕುಗಳು ಉಂಟಾಗಿ, ನೀರು ಸೋರಿಕೆಯಾಗಿದೆ. ಭವಿಷ್ಯದಲ್ಲಿ ನೀರಿನ ಸೋರಿಕೆಯನ್ನು ತಡೆಗಟ್ಟಲು ಈ ಬಿರುಕಿನ ದುರಸ್ತಿ ಕಾರ್ಯವನ್ನು ಕೈಗೊಳ್ಳಲಾಗುವುದು. ಗುಮ್ಮಟದ ಮೇಲ್ಮೈ ಒಣಗಿದಂತೆ, ಗ್ರೌಟಿಂಗ್ ಮತ್ತು ಪ್ಯಾಕಿಂಗ್ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗುತ್ತದೆ. ಇದು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ರಾಜ್‌ಕುಮಾರ್ ಪಟೇಲ್ ತಿಳಿಸಿದ್ದಾರೆ.

ಅಸಾದುದ್ದೀನ್​ ಓವೈಸಿ ಆಕ್ರೋಶ ತಾಜ್ ಮಹಲ್‌ನ ಮುಖ್ಯ ಗುಮ್ಮಟದಲ್ಲಿ ನೀರು ಸೋರಿಕೆಯಾಗುತ್ತಿರುವ ವಿಡಿಯೋ ವೈರಲ್​ ಆಗುತ್ತಿದ್ದಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ವಿರುದ್ಧ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಸಂಸ್ಥಾಪಕ ಹಾಗೂ ಹೈದರಾಬಾದ್​ ಹಾಲಿ ಸಂಸದರಾಗಿರುವ ಅಸಾದುದ್ದೀನ್​ ಓವೈಸಿ ಆಕ್ರೋಶ ಹೊರಹಾಕಿದ್ದಾರೆ. ಎಕ್ಸ್​ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ಓವೈಸಿ, ಪುರಾತತ್ವ ಇಲಾಖೆಯು ತಾಜ್ ಮಹಲ್‌ನಿಂದ ನೂರಾರು ಕೋಟಿ ಗಳಿಸುತ್ತದೆ. ಆದರೆ, ಭಾರತೀಯ ಸಂಸ್ಕೃತಿಯ ದೊಡ್ಡ ಸಂಕೇತಗಳಲ್ಲಿ ಒಂದಾದ ತಾಜ್​ ಮಹಲ್​ ಅನ್ನು ಪುರಾತತ್ವ ಇಲಾಖೆ ಹೇಗೆ ಪರಿಗಣಿಸುತ್ತದೆ ನೋಡಿ ಎಂದು ಕಿಡಿಕಾರಿದ್ದಾರೆ. ತಮಾಷೆಯೆಂದರೆ, ಅದೇ ಎಎಸ್‌ಐ ವಕ್ಫ್ ಸ್ಮಾರಕಗಳನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳಬೇಕು ಮತ್ತು ಅದನ್ನು ನಿರ್ವಹಿಸಬೇಕು ಎಂದು ವಾದಿಸುತ್ತದೆ. ಇದು 10ನೇ ತರಗತಿ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿ ಪಿಎಚ್‌ಡಿಗೆ ಅರ್ಜಿ ಹಾಕಿದಂತೆ ಎಂದು ಓವೈಸಿ ವ್ಯಂಗ್ಯವಾಡಿದ್ದಾರೆ.

ಅಂದಹಾಗೆ ಕಳೆದ ಗುರುವಾರ ಒಂದೇ ದಿನ ಆಗ್ರಾದಲ್ಲಿ 151 ಮಿ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ನಗರದಲ್ಲಿನ ಇತರ ಐತಿಹಾಸಿಕ ಸ್ಮಾರಕಗಳಾದ ಆಗ್ರಾ ಕೋಟೆ, ಫತೇಪುರ್ ಸಿಕ್ರಿ ಮತ್ತು ರೋಮನ್ ಕ್ಯಾಥೋಲಿಕ್ ಸ್ಮಶಾನಗಳು ಸಹ ಮಳೆಯಿಂದ ತೀವ್ರವಾಗಿ ಹಾನಿಗೊಳಗಾಗಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net