

Murder Mystery: ಅನಾಮಧೇಯ ಮಹಿಳೆಯ ಬರ್ಬರ ಕೊಲೆ ಘಟನೆ ನಡೆದ ಸ್ಥಳದಲ್ಲಿ ರಕ್ತದ ಕಲೆಯುಳ್ಳ ಶರ್ಟ್ ಬಿಟ್ಟರೇ ಯಾವುದೇ ವಸ್ತು ಅಥವಾ ಮಹಿಳೆ ಹತ್ಯೆ ಹಿಂದಿರುವ ಕೈವಾಡ ಯಾರದ್ದು ಎಂಬುದರ ಬಗ್ಗೆ ಯಾರೊಬ್ಬರೂ ದೂರ ನೀಡದೆ ಇರುವುದು ಪೊಲೀಸರ ತನಿಖೆಗೆ ಬಹಳ ಅಡ್ಡಿಪಡಿಸಿದ್ದೇ ಆದರೂ ಸಿಕ್ಕ ಅದೊಂದು ಸಣ್ಣ ಸುಳಿವು ಇಡೀ ಪ್ರಕರಣವನ್ನೇ ಭೇದಿಸಿದ ಘಟನೆ ಒಡಿಶಾದಲ್ಲಿ ವರದಿಯಾಗಿದೆ.
ಡಿಸೆಂಬರ್ 13ರಂದು ಕಂದರ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕಟಕ್‌ನ ಕತ್ಜೋಡಿ ನದಿಯ ದಡದಲ್ಲಿ 35 ವರ್ಷದ ಮಹಿಳೆಯ ಮೃತದೇಹ ಪತ್ತೆಯಾದ ಸುದ್ದಿ ತಿಳಿದ ಪೊಲೀಸರು, ಸ್ಥಳಕ್ಕೆ ಆಗಮಿಸಿ, ಸ್ಥಳ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದರು. ಅನಾಮಧೇಯ ಮಹಿಳೆಯ ಬಗ್ಗೆ ಯಾರೊಬ್ಬರು ದೂರು ದಾಖಲಿಸದ ವಿಷಯ ಮೊದಲಿಗೆ ಖಾಕಿ ಪಡೆಗೆ ತಲೆಕಡಿಸಿದ್ದೇ ಆದರೂ ಆನಂತರ ಸಿಕ್ಕ ರಕ್ತದ ಕಲೆಯ ಶರ್ಟಿನಲ್ಲಿದ್ದ ಟೈಲರ್ ಟ್ಯಾಗ್ ಮಹಿಳೆಯ ಬರ್ಬರ ಹತ್ಯೆ ಹಿಂದಿದ್ದ ಮೂವರು ಆರೋಪಿಗಳ ಹೆಡೆಮುರಿ ಕಟ್ಟಲು ಸಹಾಯ ಮಾಡಿತು.
ಮೃತರು ಅಪರಿಚಿತರಾಗಿದ್ದು, ರಾಜ್ಯದ ಯಾವುದೇ ಪೊಲೀಸ್ ಠಾಣೆಯಲ್ಲಿ ಯಾರೂ ದೂರು ದಾಖಲಿಸಿರಲಿಲ್ಲ. ಅಪರಾಧಕ್ಕೆ ಸಂಬಂಧಿಸಿದ ದಾಖಲೆಗಳನ್ನು ಬಿಟ್ಟರೆ ಪೊಲೀಸರಿಗೆ ಬೇರೆ ಯಾವುದೇ ಸುಳಿವು ಇರಲಿಲ್ಲ. ಪ್ರಕರಣವನ್ನು ಭೇದಿಸುವುದು ಪೊಲೀಸರಿಗೆ ದೊಡ್ಡ ಸವಾಲಾಗಿತ್ತು ಎಂದು ಕಟಕ್ ಡಿಸಿಪಿ ಜಗಮೋಹನ್ ಮೀನಾ ಹೇಳಿದ್ದಾರೆ. ಕೊಲೆಯಾದ ಮಹಿಳೆಯ ಎರಡೂ ಕೈಗಳಲ್ಲಿ ಟ್ಯಾಟೂ ಕಂಡುಬಂದರೂ ಆಕೆಯನ್ನು ಗುರುತಿಸಲು ನಮ್ಮ ತಂಡಕ್ಕೆ ಸಾಧ್ಯವಾಗಲಿಲ್ಲ. ಘಟನಾ ನಡೆದ ಸ್ಥಳದಲ್ಲಿ ರಕ್ತದ ಬಿದ್ದ ಒಂದು ಅಂಗಿ ಮತ್ತು ಪ್ಯಾಂಟ್ ಪತ್ತೆಯಾಯಿತು. ಧರಿಸಿದ ಎರಡೂ ಉಡುಪುಗಳಲ್ಲಿ 'ನ್ಯೂ ಸ್ಟಾರ್ ಟೈಲರ್ಸ್' ಎಂಬ ಟ್ಯಾಗ್ ಅನ್ನು ಹೊಲಿಯಲಾಗಿತ್ತು ಎಂದು ಮೀನಾ ಹೇಳಿದ್ದಾರೆ.
"ಈ ಸುಳಿವಿನ ಮೇಲೆ ತನಿಖೆ ಚುರುಕುಗೊಳಿಸಿದ ಪೊಲೀಸರು, ಒಡಿಶಾದಲ್ಲಿ ಈ ಹೆಸರು ಅಥವಾ ಇದೇ ಹೆಸರಿನ ಸುಮಾರು 10 ಟೈಲರ್‌ಗಳನ್ನು ಪರಿಶೀಲಿಸಿದ್ದಾರೆ. ಈ ಟ್ಯಾಗ್ ಡಿಸೈನ್ ಹೊಂದುವ ಎಲ್ಲಾ ಅಂಗಿ ಮತ್ತು ಪ್ಯಾಂಟ್‌ನ ಟ್ಯಾಗ್‌ನೊಂದಿಗೆ ಹೋಲಿಸಲಾಗಿದೆ. ಆದಾಗ್ಯೂ, ಯಾವುದೇ ಹೊಂದಾಣಿಕೆ ಕಂಡುಬಂದಿಲ್ಲ. ಗುಜರಾತಿನಲ್ಲಿ ಇಂತಹ ಟ್ಯಾಗ್‌ಗಳನ್ನು ಬಳಸಲಾಗುತ್ತಿದೆ ಎಂದು ಗಂಜಾಂ ಜಿಲ್ಲೆಯ ಟೈಲರ್ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದರು" ಎಂದು ಮೀನಾ ಹೇಳಿದ್ದಾರೆ.
"ಗುಜರಾತ್ ಪೊಲೀಸರನ್ನು ಸಂಪರ್ಕಿಸಿದಾಗ ಸೂರತ್‌ನಲ್ಲಿ ಆ ರೀತಿಯ ಒಬ್ಬ ಟೈಲರ್ ಪತ್ತೆಯಾದ. ಟೈಲರ್‌ನ ಟ್ಯಾಗ್‌ನಲ್ಲಿ '3833' ಸಂಖ್ಯೆ ಹೊಂದಿದ್ದು, ಹುಡುಕಿದಾಗ, ಆ ಶರ್ಟ್ 'ಬಾಬು' ಎಂಬ ವ್ಯಕ್ತಿಗೆ ಹೊಲಿದು ಕೊಟ್ಟಿರುವುದು ವಿಷಯ ನಮ್ಮ ಗಮನಕ್ಕೆ ಬಂದಿತು. ಬೇರೆ ಯಾವುದೇ ವಿವರ ಲಭ್ಯವಿರಲಿಲ್ಲ. ಬಾಬು ಯಾರು, ಎಲ್ಲಿಯವನು? ಎಂದು ವಿಚಾರಿಸಿದಾಗ ಟೈಲರ್ ನನಗೆ ಆತನ ಮಾಹಿತಿಯಿಲ್ಲ. ಆದ್ರೆ ಅವನಿಗೆ ನಾನು 100 ರೂ.ಚಿಲ್ಲರೆ ಕೊಡಬೇಕಿತ್ತು. ಅದಕ್ಕೆ ಬಾಬು ಯಾರದ್ದೋ ಇ-ವ್ಯಾಲೆಟ್ ಸಂಖ್ಯೆ ನೀಡಿದ್ದ, ಅದಕ್ಕೆಯೇ ನಾನು ಹಣ ಹಾಕಿದ್ದೆ. ಆ ನಂಬರ್ ಅನ್ನು ಕೊಡಬಹುದು ಎಂದು ಹೇಳಿದ. ತಕ್ಷಣವೇ ನಾವು ಆ ನಂಬರ್ ಸಂಪರ್ಕಿಸಿದಾಗ ಅವರು ಬಾಬು ಸ್ನೇಹಿತ ಎಂಬುದು ಗೊತ್ತಾಯಿತು" ಎಂದು ಡಿಸಿಪಿ ಹೇಳಿದ್ದಾರೆ.
"ಬಾಬು ಸ್ನೇಹಿತನನ್ನು ವಿಚಾರಣೆ ನಡೆಸಿದಾಗ ಆತ ತಾನು ಜಗನಾಥ್ ದುಹುರಿ (27) ಮೃತ ವ್ಯಕ್ತಿಯ ಸೋದರ ಮಾವ ಎಂಬುದು ತಿಳಿದು ಬಂದಿತು. ಮಹಿಳೆಯ ಕೊಲೆ ಬಗ್ಗೆ ಹೆಚ್ಚಿನ ತನಿಖೆಗೆ ಜಗನಾಥ್ನನ್ನು ಒಳಪಡಿಸಿದಾಗ, ಆತ ಸತ್ಯವನ್ನು ಒಪ್ಪಿಕೊಂಡ. ಸಹೋದರ ಬಲರಾಮ್ ದುಹುರಿ ಮತ್ತು ಸೋದರಸಂಬಂಧಿ ಹಪಿ ದುಹುರಿ ಸಹಾಯದಿಂದ ತಾನು ಹತ್ಯೆಗೈದೆ ಎಂದು ಕಡೆಗೂ ತನ್ನ ತಪ್ಪೊಪ್ಪಿಕೊಂಡ. ಸಾಕ್ಷಿಯನ್ನು ದಾಖಲಿಸಿಕೊಂಡ ಪೊಲೀಸರು, ಈ ಪ್ರಕರಣದಡಿ ಮೂವರನ್ನು ಬಂಧಿಸಿದ್ದಾರೆ" ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ,(ಏಜೆನ್ಸೀಸ್).