

ಬೆಂಗಳೂರು: ಕೋವಿಡ್ನಿಂದಾಗಿ ಹಾಸಿಗೆಗಳ ಕೊರತೆ ಎದುರಿಸಿದ್ದಾಯಿತು, ನಂತರದಲ್ಲಿ ಲಸಿಕೆ ಕೊರತೆ, ಇದೀಗ ಲಸಿಕೆ ಸಮಸ್ಯೆ ಕಡಿಮೆಯಾಗಿದೆ. ಆದರೆ ಲಸಿಕೆ ನೀಡಲು 0.5 ಎಂಎಲ್ ಸಿರಿಂಜ್ಗಳ ಅಭಾವ ಸೃಷ್ಟಿಯಾಗಿದೆ. ದೇಶಾದ್ಯಂತ ಸೆ.17ರಂದು ನಡೆದ ಬೃಹತ್ ಲಸಿಕಾ ಅಭಿಯಾನದಲ್ಲಿ ಕರ್ನಾಟಕ ದಾಖಲೆಯ ಪ್ರಮಾಣದಲ್ಲಿ ಲಸಿಕೆ ನೀಡಿತ್ತು. ಅಲ್ಲದೆ ಎರಡು ವಾರಗಳ ಹಿಂದೆ ಕೇಂದ್ರ ಸರ್ಕಾರವು ಸಿರಿಂಜ್ ಪೂರೈಸಿತ್ತು. ನಂತರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ವಿತರಣೆ ಮಾಡುತ್ತಿರುವುದರಿಂದ ಲಸಿಕೆ ನೀಡಲು ಬಳಸುತ್ತಿದ್ದ 0.5 ಎಂಎಲ್ ಸಿರಿಂಜ್ಗಳ ಕೊರತೆ ಉಂಟಾಗಿದೆ. ಕೇಂದ್ರ ಸರ್ಕಾರ ಹಿಂದುಸ್ತಾನ್ ಸಿರಿಂಜ್ ಮತ್ತು ವೈದ್ಯಕೀಯ ಸಾಧನಗಳು ಹಾಗೂ ಇಸ್ಕಾನ್ ಸರ್ಜಿಕಲ್ಸ್ ಎಂಬ ಎರಡು ಸಂಸ್ಥೆಗಳಿಗೆ 230 ದಶಲಕ್ಷ ಸಿರಿಂಜ್ಗಳಿಗೆ ಬೇಡಿಕೆ ಇಟ್ಟಿತ್ತು. ಬೃಹತ್ ಲಸಿಕೆ ಅಭಿಯಾನದಿಂದಾಗಿ ಪೂರೈಕೆಯಾಗಿದ್ದ ಎಲ್ಲ 0.5 ಸಿರಿಂಜ್ಗಳೂ ಖಾಲಿಯಾಗಿವೆ. ಹೀಗಾಗಿ, 1 ಎಂಎಲ್ ಹಾಗೂ 2 ಎಂಎಲ್ ಸಿರಿಂಜ್ಗಳನ್ನು ಪೂರೈಸಲಾಗುತ್ತಿದೆ. ಆದರೆ ಈ ಮೊದಲು ನೀಡುತ್ತಿದ್ದ 0.5 ಎಂಎಲ್ ಸಿರಿಂಜ್ನಲ್ಲಿ ಅಗತ್ಯವಿದ್ದಷ್ಟು ಲಸಿಕೆ ನೀಡಲು ಅನುಕೂಲವಾಗಿತ್ತು. ದೊಡ್ಡದಾದ ಸಿರಿಂಜ್ಗಳಲ್ಲಿ ಲಸಿಕೆ ವ್ಯರ್ಥವಾಗುವ ಸಾಧ್ಯತೆಗಳಿವೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಮೂರು ಕೋಟಿ ಅಗತ್ಯ: ರಾಜ್ಯದಲ್ಲಿ ಲಸಿಕೆ ಅಭಿಯಾನಕ್ಕೆ ವೇಗ ನೀಡಲು ತಿಂಗಳಿಗೆ ಕನಿಷ್ಠ ಒಂದು ಕೋಟಿ ಸಿರಿಂಜಿನ ಅಗತ್ಯವಿದೆ. ಮುಂದಿನ ಮೂರು ತಿಂಗಳಲ್ಲಿ, 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಎರಡನೇ ಡೋಸ್ ಲಸಿಕೆ ಹಾಕುವ ಗುರಿ ತಲುಪಲು ರಾಜ್ಯಕ್ಕೆ ಮೂರು ಕೋಟಿ 0.5 ಎಂಎಲ್ ಎಲ್ಡಿಎಸ್ ಸಿರಿಂಜ್ಗಳ ಅಗತ್ಯವಿದೆ. ಆದರೆ ಕೇಂದ್ರ ಸರ್ಕಾರದಿಂದ ಬೇಡಿಕೆಗೆ ಅನುಗುಣವಾಗಿ ಸಿರಿಂಜ್ಗಳ ಪೂರೈಕೆಯಾಗುತ್ತಿಲ್ಲ. ಹಾಗಾಗಿ ರಾಜ್ಯದಲ್ಲಿ ಲಭ್ಯ ಇರುವ ಸಿರಿಂಜ್ಗಳನ್ನೇ ಬಳಸಿಕೊಂಡು ಲಸಿಕೆ ನೀಡಲಾಗುತ್ತಿದ್ದು, 0.5 ಎಂಎಲ್ ಸಿರಿಂಜ್ಗಳ ಖರೀದಿ ಪ್ರಕ್ರಿಯೆಯಲ್ಲಿದ್ದೇವೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.
ಲಸಿಕಾಭಿಯಾನದ ಆರಂಭದಿಂದಲೂ 0.5 ಎಂಎಲ್ ಸಿರಿಂಜ್ಗಳಲ್ಲೇ ಲಸಿಕೆ ನೀಡಲಾಗುತ್ತಿತ್ತು. ಇವನ್ನು ಕೇಂದ್ರ ಸರ್ಕಾರವೇ ಪೂರೈಸುತ್ತಿತ್ತು. ಇದೀಗ ಬೇಡಿಕೆಯಷ್ಟು ಪೂರೈಕೆ ಮಾಡಿಲ್ಲ. ಬದಲಿಗೆ 1 ಎಂಎಲ್ 2 ಎಂಎಲ್ ಸಿರಿಂಜ್ಗಳನ್ನು ಒದಗಿಸಲಾಗಿದೆ. ಇದರಲ್ಲಿ ಎಷ್ಟು ಪ್ರಮಾಣ ಎಂಬ ಗುರುತು ಇರುವುದರಿಂದ ಹಾಗೂ ಲಸಿಕೆ ನೀಡುವ ಆರೋಗ್ಯ ಕಾರ್ಯಕರ್ತರು ನುರಿತ ತರಬೇತಿ ಹೊಂದಿರುವುದರಿಂದ ಲಸಿಕೆ ವ್ಯರ್ಥವಾಗುವುದಿಲ್ಲ.
| ಕೆ.ವಿ.ತ್ರಿಲೋಕ್ ಚಂದ್ರ ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
ಬೆಂಗಳೂರು: ರಾಜ್ಯದಲ್ಲಿ ಶನಿವಾರ 775 ಜನರು ಕೋವಿಡ್ ಸೋಂಕಿತರಾಗಿದ್ದು, 11 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ಮೃತರ ಒಟ್ಟು ಸಂಖ್ಯೆ 37,717 ತಲುಪಿದೆ. ಕಳೆದ 24 ಗಂಟೆಗಳಲ್ಲಿ 775 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಗುಣಮುಖರ ಸಂಖ್ಯೆ 29.21 ಲಕ್ಷ ಮೀರಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 13,307ಕ್ಕೆ ಇಳಿಕೆಯಾಗಿದೆ. ಬೆಂಗಳೂರು ನಗರದಲ್ಲಿ ಶನಿವಾರ 276 ಮತ್ತು ದಕ್ಷಿಣ ಕನ್ನಡದಲ್ಲಿ 127 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. 11 ಜಿಲ್ಲೆಗಳಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ ಎರಡಂಕಿಗೆ ಹಾಗೂ 12 ಜಿಲ್ಲೆಗಳಲ್ಲಿ ಒಂದಂಕಿಗೆ ತಲುಪಿದೆ. ಬಾಗಲಕೋಟೆ, ಬೀದರ್, ಗದಗ, ಕೊಪ್ಪಳ ಮತ್ತು ವಿಜಯಪುರದಲ್ಲಿ ಯಾವುದೇ ಪ್ರಕರಣ ವರದಿಯಾಗಿಲ್ಲ. ಬೆಂಗಳೂರು ನಗರದಲ್ಲಿ 4, ಬೆಳಗಾವಿ ಮತ್ತು ಚಿಕ್ಕಮಗಳೂರಿನಲ್ಲಿ ತಲಾ ಇಬ್ಬರು, ದಕ್ಷಿಣ ಕನ್ನಡ, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ತಲಾ ಒಬ್ಬರಂತೆ 11 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.