ಈ ಸ್ವೀಡನ್ ಸಚಿವೆಗೆ ಬಾಳೆಹಣ್ಣು ಕಂಡ್ರೆ ಭಯವಂತೆ! ಕಾರಣ ಕೇಳಿದ್ರೆ ನಿಮ್ಮ ಹುಬ್ಬೇರೋದು ಖಚಿತ | Banana Phobia

Banana Phobia
Published on

Banana Phobia : ಬಡವರು, ಮಧ್ಯಮ ವರ್ಗದವರು ಹಾಗೂ ಶ್ರೀಮಂತರು ಎಲ್ಲರಿಗೂ ಸುಲಭವಾಗಿ ಸಿಗುವ ಹಣ್ಣೆಂದರೆ ಅದು ಬಾಳೆಹಣ್ಣು ( Banana ). ಇದರ ಬೆಲೆ ಇತರೆ ಹಣ್ಣುಗಳಿಗೆ ಹೋಲಿಸಿದರೆ ತುಂಬಾ ಕಡಿಮೆ. ದಿನಕ್ಕೊಂದು ಬಾಳೆಹಣ್ಣು ತಿಂದರೆ ಅನೇಕ ಆರೋಗ್ಯ ಸಮಸ್ಯೆಗಳಿಂದ ದೂರ ಇರಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು. ಇದನ್ನು ತಿನ್ನುವುದಕ್ಕೆ ಮಾತ್ರವಲ್ಲ, ಶುಭ ಕಾರ್ಯಗಳಲ್ಲಿಯೂ ಪೂಜೆಗಾಗಿ ವ್ಯಾಪಕವಾಗಿ ಬಳಸಲಾಗುತ್ತದೆ. ದೇವರಿಗೆ ಬಾಳೆ ಹಣ್ಣನ್ನೂ ನೈವೇದ್ಯವಾಗಿ ಅರ್ಪಿಸುತ್ತಾರೆ.

ಆದರೆ, ಇಲ್ಲೋರ್ವ ಮಹಿಳೆ ಬಾಳೆಹಣ್ಣು ಕಂಡರೆ ಸಾಕು ತುಂಬಾ ಭಯಪಡುತ್ತಾರೆ. ಅಯ್ಯೋ ಬಾಳೆಹಣ್ಣಿಗೆ ಯಾರಾದ್ರೂ ಭಯಪಡುತ್ತಾರಾ ಎಂದು ನೀವು ನಂಬದೇ ಇರಬಹುದು. ಆದರೆ, ನಾವು ಹೇಳುತ್ತಿರುವುದು ನೂರಕ್ಕೆ ನೂರು ಸತ್ಯ. ಬಾಳೆಹಣ್ಣಿಗೆ ಹೆದರುವ ಆ ಮಹಿಳೆ ಬೇರೆ ಯಾರೂ ಅಲ್ಲ ಅವರೇ ಸ್ವೀಡನ್​ನ ಸಚಿವೆ ಫೌಲಿನಾ ಬ್ರಾಂಡ್ ಬರ್ಗ್. ಇವರು ಸ್ವೀಡನ್​ ಸರ್ಕಾರದಲ್ಲಿ ಲಿಂಗ ಸಮಾನತೆಯ ಸಚಿವೆಯಾಗಿ ಕೆಲಸ ಮಾಡುತ್ತಿದ್ದಾರೆ. ಆಕೆಗೆ ಬಾಳೆಹಣ್ಣಿನ ಭಯ ( Banana Phobia ) ಇದೆ ಎಂಬ ಸುದ್ದಿ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದರಿಂದ ನೆಟ್ಟಿಗರು ಅಚ್ಚರಿಗೊಂಡಿದ್ದಾರೆ.

ತನಗೆ ಅಪರೂಪದ ಫೋಬಿಯಾ ಇದೆ ಎಂದು ಸ್ವತಃ ಫೌಲಿನಾ ಬ್ರಾಂಡ್ ಬರ್ಗ್ ಅವರೇ ಈ ಹಿಂದೆ ಎಕ್ಸ್‌ನಲ್ಲಿ ಬಹಿರಂಗಪಡಿಸಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಪೋಸ್ಟ್​ ಅನ್ನು ಡಿಲೀಟ್​ ಮಾಡಿದ್ದರು. ಬ್ರಾಂಡ್ ಬರ್ಗ್​ ಅವರು ಎಲ್ಲಿಗಾದರೂ ಹೋದಾಗ, ಊಟದ ವೇಳೆ ಅಥವಾ ಇನ್ನಿತರ ಸಂದರ್ಭಗಳಲ್ಲಿ ಅವರ ಮುಂದೆ ಬಾಳೆಹಣ್ಣು ಇಡದಂತೆ ಅವರ ಸಿಬ್ಬಂದಿ ಮೊದಲೇ ಮಾಹಿತಿ ನೀಡುತ್ತಾರಂತೆ. ಇತ್ತೀಚೆಗಷ್ಟೇ, ಅವರು ಒಂದು ಸ್ಥಳಕ್ಕೆ ಭೇಟಿ ನೀಡಬೇಕಿತ್ತು. ಹೀಗಾಗಿ ಅವರ ಸಚಿವಾಲಯದ ಸಿಬ್ಬಂದಿ ಬಾಳೆಹಣ್ಣು ಇಡದಂತೆ ಇ-ಮೇಲ್ ಕಳುಹಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ.

Banana Phobia 1

ಸಚಿವೆ ಬ್ರಾಂಡ್ ಬರ್ಗ್ ಅವರು ಬಾಲ್ಯದಿಂದಲೂ ಬಾಳೆಹಣ್ಣುಗಳನ್ನು ಇಷ್ಟಪಡುವುದಿಲ್ಲ. ಹೀಗಾಗಿ ಬಾಳೆಹಣ್ಣು ಕಂಡರೆ ಹೆದರುತ್ತಾರೆ. ಇದರಿಂದಾಗಿ ಆಕೆಗಾಗಿ ವ್ಯವಸ್ಥೆ ಮಾಡುವ ಕೊಠಡಿಗಳಲ್ಲಿ ಹಾಗೂ ವೇದಿಕೆಗಳಲ್ಲಿ ಬಾಳೆಹಣ್ಣುಗಳು ಕಾಣಿಸಿಕೊಳ್ಳದಂತೆ ಆಕೆಯ ಇಲಾಖೆಯ ಸಿಬ್ಬಂದಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಾರೆ. ಕೆಲವರಿಗೆ ಚಿಕ್ಕ ವಯಸ್ಸಿನಲ್ಲೇ ಈ ಫೋಬಿಯಾ ಬರುತ್ತಿದ್ದು, ಇದಕ್ಕೆ ನಿರ್ದಿಷ್ಟ ಕಾರಣಗಳು ತಿಳಿದಿಲ್ಲ ಎನ್ನುತ್ತಾರೆ ಆರೋಗ್ಯ ತಜ್ಞರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net