ಸಿದ್ದುಗೆ ಮಠಾಧೀಶರ ಶ್ರೀಕಾರ; ಮುಂದಿನ ಮುಖ್ಯಮಂತ್ರಿ ನೀವೇ ಎಂದು ಹರಸಿದ ಸ್ವಾಮೀಜಿಗಳು

WhatsApp Image 2021-11-14 at 12.19.22 AM
Published on

ಬಾಗಲಕೋಟೆ: ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗಬೇಕು ಎಂದು ಅವರ ಅಭಿಮಾನಿಗಳು ಆಗಾಗ ಕನವರಿಸುತ್ತಲೇ ಇರುತ್ತಾರೆ. ಆ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಸಾಕಷ್ಟು ಪರ- ವಿರೋಧದ ಚರ್ಚೆಗಳು ನಡೆದೇ ಇರುತ್ತವೆ. ಇದೀಗ ಸಿದ್ದರಾಮಯ್ಯ ಮತ್ತೆ ಮುಂದಿನ ಸಿಎಂ ಆಗಬೇಕು ಎಂದು ವಿವಿಧ ಮಠಾಧೀಶರು ಸಿದ್ದು ಸಮ್ಮುಖದಲ್ಲಿ ಹಾಡಿ ಹೊಗಳಿ, ಆಶೀರ್ವದಿಸಿದ ಘಟನೆಯೂ ಬಾದಾಮಿ ಪಟ್ಟಣದಲ್ಲಿ ಶನಿವಾರ ನಡೆದಿದೆ. ಬಾದಾಮಿಯಲ್ಲಿ ಕಲ್ಯಾಣ ಮಂಟಪ ಉದ್ಘಾಟನೆ ಹಾಗೂ ಸಾಮೂಹಿಕ ಮದುವೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಭಾಗವಹಿಸಿದ್ದರು. ಈ ವೇಳೆ ವೇದಿಕೆಯಲ್ಲಿ ಸಾನ್ನಿಧ್ಯ ವಹಿಸಿದ್ದ ವಿವಿಧ ಮಠಾಧೀಶರು ಮಾಜಿ ಸಿಎಂಗೆ ತಮ್ಮ ಭಾಷಣದಲ್ಲಿ ಬಹುಪರಾಕ್ ಹೇಳಿದ್ದಲ್ಲದೆ ಮುಂದಿನ ಸಿಎಂ ಆಗಲಿ ಎಂದು ಆಶೀರ್ವಾದ ಮಾಡಿದರು.

ಹುಬ್ಬಳ್ಳಿ ಮೂರು ಸಾವಿರ ಮಠದ ಗುರುಸಿದ್ದ ರಾಜಯೋಗಿಂದ್ರ ಸ್ವಾಮೀಜಿ ಮಾತನಾಡಿ, ಸಿದ್ದರಾಮಯ್ಯ ರಾಜ್ಯ ಕಂಡ ಒಬ್ಬ ಶ್ರೇಷ್ಠ ಜನನಾಯಕ. ಒಳ್ಳೇಯ ಸಂಸದೀಯ ಪಟು ಸಹ ಆಗಿದ್ದಾರೆ. ಸಿದ್ದರಾಮಯ್ಯ ಮಾತನಾಡುತ್ತಿದ್ದರೆ ವಿಧಾನಸೌಧ ಮೌನವಾಗಿ ಆಲಿಸುತ್ತದೆ. ಸಾರ್ವಜನಿಕವಾಗಿಯೂ ಶ್ರೇಷ್ಠ ವ್ಯಕ್ತಿ. ಹೀಗಾಗಿ ವಿಧಾನಸೌಧ ಸುಂದರವಾಗಿ ಕಾಣಲು ಸಿದ್ದರಾಮಯ್ಯ ಅಲ್ಲಿ ಇರಬೇಕು. ಅವರಿಲ್ಲದ ವಿಧಾನಸೌಧವನ್ನು ನೋಡಲು ಆಗಲ್ಲ. ಅವರ ಉಸಿರು ಇರುವವರೆಗೂ ನಾಡಿನ ನಾಯಕರಾಗಿ ಸೇವೆ ಸಲ್ಲಿಸಲಿ ಎನ್ನುವುದು ನಮ್ಮ ಆಶಯ. ಹಾಗೆಯೇ ಯಾವುದೇ ಕಾರಣಕ್ಕೂ ಬಾದಾಮಿ ಜನರು ಅವರನ್ನು ಕೈಬಿಡಬಾರದು ಎಂದು ಮನವಿ ಮಾಡಿದರು.

ಕಾಣಿಕೆ ಕೊಟ್ಟು ಹರಿಸಿದ ಶ್ರೀಗಳು: ಹುನಗುಂದ ತಾಲೂಕಿನ ಸಿದ್ದನಕೊಳ್ಳದ ಡಾ. ಶಿವಕುಮಾರ ಸ್ವಾಮೀಜಿ ಮಾತನಾಡಿ, ಹಣ ಗಳಿಸುವ ಸಾವಿರಾರು ಜನರು ಇರುತ್ತಾರೆ. ಆದರೆ, ಸಿದ್ದರಾಮಯ್ಯ ಅವರು ಹೃದಯ ಗೆಲ್ಲುವ ಜನನಾಯಕ. ಈ ಹಿಂದೆಯೇ ಅವರು ಮತ್ತೆ ಸಿಎಂ ಆಗುತ್ತಾರೆಂದು ಹೇಳಿದ್ದೆ. ಈಗಲೂ ಅದನ್ನೆ ಹೇಳುತ್ತಿದ್ದೇನೆ. ಮುಂದಿನ ಸಲ ಸಿದ್ದರಾಮಯ್ಯ ಅವರು ಮತ್ತೆ ಸಿಎಂ ಆಗುತ್ತಾರೆ. ಹಿಂದಿನ ಸಲವೂ ಅವರಿಗೆ 500 ರೂ. ಕಾಣಿಕೆ ಕೊಟ್ಟು ಹರಿಸಿದ್ದೆ. ಈಗಲೂ ಅದನ್ನೆ ಮಾಡುತ್ತೇನೆ ಎಂದು ವೇದಿಕೆಯಲ್ಲಿ ಸಿದ್ದರಾಮಯ್ಯ ಅವರಿಗೆ -ಠಿ;500 ಕಾಣಿಕೆ ಕೊಟ್ಟು ಹರಿಸಿದರು. ಬರೀ ಸ್ವಾಮೀಜಿ ಆಶೀರ್ವಾದ ಮಾಡಿದ್ದಾರೆಂದು ನೀವು ಸುಮ್ಮನಿರಬಾರದು. ನೀವೆಲ್ಲ ಆಶೀರ್ವಾದ ಮಾಡಬೇಕು. ಅಂದಾಗ ಅವರು ಬಾದಾಮಿ ಶಾಸಕ, ರಾಜ್ಯದ ಮುಖ್ಯಮಂತ್ರಿ ಆಗಲು ಸಾಧ್ಯ ಎಂದರು.

ಸಿದ್ದು ಖುಷ್!: ವೇದಿಕೆ ಮೇಲೆ ವಿವಿಧ ಮಠಾಧೀಶರು ತಮ್ಮನ್ನು ಮುಂದಿನ ಸಿಎಂ ಎಂದು ಹೇಳುತ್ತಿದ್ದರಿಂದ ಸಿದ್ದರಾಮಯ್ಯ ಅವರು ಸಹಜವಾಗಿ ಖುಷಿ ಆಗಿದ್ದರು. ತಮ್ಮ ಭಾಷಣದಲ್ಲಿ ಸ್ವಾಮೀಜಿಗಳ ಮಾತನ್ನು ಪ್ರಸ್ತಾಪಿಸಿದ ಅವರು, ಎಲ್ಲ ಸ್ವಾಮೀಜಿಗಳು ಶುಭಹಾರೈಸಿ, ಅಭಿಮಾನದ ಮಾತು ಹೇಳಿದ್ದಾರೆ. ಎಲ್ಲ ಸ್ವಾಮೀಜಿಗಳಿಗೆ ಚಿರಋಣಿ ಆಗಿದ್ದೇನೆ ಎಂದು ತಿಳಿಸಿದರು.

ಸಿಎಂ ಆಗೋದು ಪಕ್ಕಾ ಎಂದ ಸ್ವಾಮೀಜಿ: ವಿಜಯಪುರ ಜಿಲ್ಲೆ ಕೊಲ್ಹಾರ ದಿಗಂಬರೇಶ್ವರ ಮಠದ ಕಲ್ಲಿನಾಥ ಸ್ವಾಮೀಜಿ ಮಾತನಾಡಿ, ಸಿದ್ದರಾಮಯ್ಯ ಬಾದಾಮಿಗೆ ಬಂದ ಮೇಲೆ ಇಲ್ಲಿನ ರೈತರ ಅದೃಷ್ಟವೇ ಬದಲಾಗಿ ಹೋಗಿದೆ. ಮೊದಲೆಲ್ಲ ಬಾದಾಮಿಯ ಮಲಪ್ರಭಾ ನದಿಯಲ್ಲಿ ನೀರು ಇರುತ್ತಿರಲಿಲ್ಲ. ಸಿದ್ದರಾಮಯ್ಯ ಶಾಸಕರಾದ ಮೇಲೆ ನಿರಂತರವಾಗಿ ನೀರು ಸಿಗುತ್ತಿದೆ. ಇದರಿಂದ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ ಎಂದು ಇಲ್ಲಿನ ರೈತರು ಹೆಮ್ಮೆಯಿಂದ ಹೇಳುತ್ತಿದ್ದಾರೆ. ನಾನು ಹೇಳುತ್ತೇನೆ, ಸೂರ್ಯ ಉದಯಿಸುವುದು ಎಷ್ಟು ಸತ್ಯವೋ ಮುಂದಿನ ಸಲ ಸಿದ್ದರಾಮಯ್ಯ ಅವರು ಬಾದಾಮಿ ಶಾಸಕ ಹಾಗೂ ರಾಜ್ಯದ ಮುಖ್ಯಮಂತ್ರಿ ಆಗುವುದು ಅಷ್ಟೆ ಸತ್ಯ ಎಂದರು. ಹೀಗೆ ಸ್ವಾಮೀಜಿಗಳು ಒಬ್ಬರ ಹಿಂದೆ ಮತ್ತೊಬ್ಬರು ಸಿದ್ದರಾಮಯ್ಯ ಅವರನ್ನು ಮುಂದಿನ ಸಿಎಂ, ಅವರು ಅಧಿಕಾರದಲ್ಲಿ ಇರಬೇಕು ಎನ್ನುತ್ತಲೇ ಅಲ್ಲಿದ್ದ ಸಿದ್ದು ಅಭಿಮಾನಿಗಳ ಸಂತಸ ಮುಗಿಲು ಮುಟ್ಟಿತ್ತು. ಶಿಳ್ಳೆ, ಕೇಕೆ, ಚಪ್ಪಾಳೆ, ಘೊಷಣೆಗಳು ಪ್ರತಿಧ್ವನಿಸುತ್ತಿತ್ತು.

ಸಿದ್ದು ಅಭಿಮಾನಿಗೆ ಮೇಟಿ ಕಪಾಳ ಮೋಕ್ಷ!: ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರನ್ನು ನೋಡಲು ಅಪಾರ ಪ್ರಮಾಣದ ಅಭಿಮಾನಿಗಳು ಸೇರಿದ್ದರು. ಈ ವೇಳೆ ಉಂಟಾದ ನೂಕು, ನುಗ್ಗಲಲ್ಲಿ ಮಾಜಿ ಸಚಿವ ಎಚ್.ವೈ.ಮೇಟಿ ಅವರನ್ನು ತಳ್ಳಾಡಿದ್ದರಿಂದ ಕೋಪಗೊಂಡು ಶಿರೂರ ಗ್ರಾಮದ ಸಿದ್ದು ಎಂಬಾತನಿಗೆ ಮೇಟಿ ಕಪಾಳಮೋಕ್ಷ ಮಾಡಿದರು. ಸಿದ್ದರಾಮಯ್ಯ ಅವರಿಗೆ ಹೊಟ್ಟೆ ಹಸಿವು ತಾಳಲಾಗದೆ ಸನ್ಮಾನದ ತಟ್ಟೆಯ ಲ್ಲಿನ ಬಾಳೆ ಹಣ್ಣು ಸೇವಿಸಿ ತಾತ್ಕಾಲಿಕ ಹಸಿವು ನೀಗಿಸಿಕೊಂಡ ಪ್ರಸಂಗವೂ ನಡೆಯಿತು.

ಫೋಟೋ ಕ್ಯಾಪ್ಷನ್​: ಬಾದಾಮಿ ಪಟ್ಟಣದಲ್ಲಿ ಶನಿವಾರ ಖಾಸಗಿ ಕಲ್ಯಾಣ ಮಂಟಪ ಉದ್ಘಾಟನೆ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಚಿನ್ನ ಲೇಪಿತ ಚೌಕಟ್ಟು ಇರುವ ಭಾವಚಿತ್ರವನ್ನು ಕಾಣಿಕೆಯಾಗಿ ಕೊಡಲಾಯಿತು. ಇದನ್ನು ಬ್ಯಾಂಕಾಕ್​ನಲ್ಲಿ ಮಾಡಿಸಿದ್ದು, ಇದಕ್ಕೆ ಅಂದಾಜು 40 ಗ್ರಾಂ ಚಿನ್ನ ಬಳಸಲಾಗಿದೆ ಎಂದು ಹೇಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net