ಪಠ್ಯದಲ್ಲಿ ವಚನ ಸಾಹಿತ್ಯ ಸೇರಿಸಿ, ಯಾವುದನ್ನು ಸೇರಿಸಬೇಕೆಂಬ ಪಟ್ಟಿ ಕೊಡುತ್ತೇವೆ: ಸಾಣೇಹಳ್ಳಿ ಸ್ವಾಮೀಜಿ

Sanehalli Swamiji
Published on

ಬೆಂಗಳೂರು: ಹೊಸ ಸರ್ಕಾರ ಬಂದ ಬಳಿಕ ಮತ್ತೊಮ್ಮೆ ಪಠ್ಯ ಪರಿಷ್ಕರಣೆಯ ಪ್ರಕ್ರಿಯೆ ಕುರಿತ ಸದ್ದು ಜೋರಾಗಿದ್ದು, ಇದೀಗ ವಚನ ಸಾಹಿತ್ಯವನ್ನೂ ಪಠ್ಯಕ್ಕೆ ಸೇರಿಸಬೇಕು ಎಂಬ ಮಾತು ಕೇಳಿ ಬಂದಿದೆ. ಸಾಣೇಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಈ ಮನವಿ ಮಾಡಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ನಡೆಯುತ್ತಿರುವ ದೇಶದ ಪ್ರಥಮ ವಚನ ಸಂಸ್ಕೃತಿ ಅಭಿಯಾನ‌ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಸ್ಥಿತರಿದ್ದು, ಅವರ ಮುಂದೆ ಸ್ವಾಮೀಜಿ ಈ ಬೇಡಿಕೆ ಇರಿಸಿದ್ದಾರೆ. ಪಠ್ಯದಲ್ಲಿ ಏನೇನೋ ಅನಾಹುತ ಆಗಿರುವುದು ನಿಮಗೆ ಗೊತ್ತಿದೆ. ಬಸವಣ್ಣ, ಅಂಬೇಡ್ಕರ್, ಕುವೆಂಪು, ಕನಕದಾಸರ ವಿಚಾರ ಏನೇನೋ ವ್ಯತ್ಯಾಸ ಆಗಿತ್ತು, ಆ ಸಂದರ್ಭದಲ್ಲಿ ನಾನೇ ಮೊದಲು ಪ್ರತಿಭಟಿಸಿದ್ದೆ, ನಂತರ ಸ್ವಲ್ಪ ಬದಲಾವಣೆ ಮಾಡಿದ್ದರೂ ಇನ್ನೂ ಸಾಕಷ್ಟು ಬದಲಾವಣೆ ಆಗಬೇಕು ಎಂದು ಅವರು ಹೇಳಿದ್ದಾರೆ.

ಪಠ್ಯ ಬದಲಾವಣೆಗೆ ಸರ್ಕಾರ ಈಗಾಗಲೇ ಮುಂದಾಗಿದೆ. ಅದು ಮತ್ತಷ್ಟು ಬದಲಾವಣೆ ಮಾಡುವ ವಿಶ್ವಾಸ ಇದೆ ಎಂದು ಸಾಣೇಹಳ್ಳಿ ಸ್ವಾಮೀಜಿ, ಪಠ್ಯಗಳಲ್ಲಿ ವಚನ ಸಾಹಿತ್ಯವನ್ನೂ ಸೇರಿಸಬೇಕು, ಎಲ್ಲ ವಿದ್ಯಾರ್ಥಿಗಳೂ ವಚನವನ್ನು ಓದುವಂತಾಗಬೇಕು ಎಂದು ಮನವಿ ಮಾಡಿಕೊಂಡರು. ಪಠ್ಯಗಳಲ್ಲಿ ವಚನಗಳನ್ನು ಸೇರಿಸಬೇಕಾದರೆ ಯಾವ್ಯಾವುದನ್ನು ಸೇರಿಸಬೇಕು ಎಂಬುದನ್ನು ನಾವು ಪಟ್ಟಿ ಮಾಡಿಕೊಡುತ್ತೇವೆ ಎಂದೂ ಸ್ವಾಮೀಜಿ ಹೇಳಿದರು.

ಸಿಎಂಗೆ ಕರೆ ಮಾಡಿದರೆ ಕರೆ ಸ್ವೀಕರಿಸಿ ಮಾತನಾಡುತ್ತಾರೆ. ಆದರೆ ಕೆಲವು ಸಚಿವರು ಈಗಲೇ ಫೋನ್​ ಕರೆ ಸ್ವೀಕರಿಸುವುದಿಲ್ಲ ಎಂದು ಮುಖ್ಯಮಂತ್ರಿ ಎದುರೇ ಸ್ವಾಮೀಜಿ ಆರೋಪಿಸಿದರು. ಕಾರ್ಯಕ್ರಮದಲ್ಲಿ ಸಚಿವರಾದ ಎಂ.ಬಿ. ಪಾಟೀಲ್, ಶಿವರಾಜ ತಂಗಡಗಿ, ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net