ಅ.2ರಂದು ಸ್ವಚ್ಛ ಭಾರತ ದಿನಾಚರಣೆ

29 ckm 1
ಚಿಕ್ಕಮಗಳೂರು ಜಿಪಂ ಮಿನಿ ಸಭಾಂಗಣದಲ್ಲಿ ಸ್ವಚ್ಛತೆಯೇ ದೈವತ್ವ ಎಂಬ ಘೋಷವಾಕ್ಯದ ಪೋಸ್ಟರ್‌ಗಳನ್ನು ಜಿಪಂ ಸಿಇಒ ಡಾ. ಬಿ.ಗೋಪಾಲಕೃಷ್ಣ ಅನಾವರಣಗೊಳಿಸಿದರು.
Published on

ಚಿಕ್ಕಮಗಳೂರು: ಮಹಾತ್ಮ ಗಾಂಧೀಜಿ ಜನ್ಮದಿನವನ್ನು ಸ್ವಚ್ಛ ಭಾರತ ದಿನ ಘೋಷಣೆಯೊಂದಿಗೆ ಆಚರಿಸಲಾಗುತ್ತಿದೆ. ಈ ಅವಧಿಯಲ್ಲಿ ಜಿಲ್ಲಾದ್ಯಂತ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಪಂ ಸಿಇಒ ಡಾ. ಬಿ.ಗೋಪಾಲಕೃಷ್ಣ ತಿಳಿಸಿದರು.

ಸೆ.15ರಿಂದ ಅ.2ರವರೆಗೆ ದೇಶಾದ್ಯಂತ ಸ್ವಚ್ಛ ಭಾರತ ಆಂದೋಲನ ಹಮ್ಮಿಕೊಳ್ಳಲಾಗಿದೆ. ಸ್ವಚ್ಛತೆಯೇ ದೈವತ್ವ ಎಂಬ ಘೋಷವಾಕ್ಯದೊಂದಿಗೆ ಜಿಲ್ಲೆಯಲ್ಲಿ ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅ.2ರಂದು ಗಾಂಧಿ ಜಯಂತಿ ದಿನ ಸ್ವಚ್ಛತಾ ಆಂದೋಲನ ಮುಕ್ತಾಯವಾಗಲಿದೆ. ಈ ಕಾರ್ಯಕ್ರಮ ಅನುಷ್ಠಾನದಲ್ಲಿ ರಾಜ್ಯದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ದೊರೆತಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸೆ.15ರಂದು ಸ್ವಚ್ಛತೆಯೇ ಸೇವೆ ಎಂಬ ಘೋಷಣೆಯೊಂದಿಗೆ ಕಾರ್ಯಕ್ರಮ ಉದ್ಘಾಟಿಸಲಾಗಿತ್ತು. ಈವರೆಗೆ ಜಿಲ್ಲಾದ್ಯಂತ ಋತುಚಕ್ರ ನಿರ್ವಹಣೆ, ವೈಯಕ್ತಿಕ ಹಾಗೂ ಪರಿಸರ ಸ್ವಚ್ಛತೆ ಬಗ್ಗೆ ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ಮೂಡಿಸಲಾಗಿದೆ. ಸರ್ಕಾರದ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ, ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಸ್ವಚ್ಛತೆ ನಿರ್ವಹಣೆ ಕುರಿತು ರಸಪ್ರಶ್ನೆ, ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು ಎಂದರು.
ಸ್ವಚ್ಛತಾ ಆಂದೋಲನದ ಅಂಗವಾಗಿ ಅ. 1ರಂದು ನಗರಕ್ಕೆ ಸಮೀಪದ ಕೈಮರ ತನಿಖಾ ಠಾಣೆಯಿಂದ ದತ್ತಪೀಠದವರೆಗೆ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಗುವುದು. ನಗರದ ಪಾಲಿಟೆಕ್ನಿಕ್ ಬಳಿ ಉದ್ಘಾಟನೆಯಾಗಲಿದ್ದು, ಸಾರ್ವಜನಿಕರು, ಸಂಘಸಂಸ್ಥೆಗಳು, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ, ಲಯನ್ಸ್ ಸಂಸ್ಥೆ ಭಾಗವಹಿಸಲಿವೆ. ಜಿಲ್ಲೆ, ತಾಲೂಕು, ಗ್ರಾಪಂ ವ್ಯಾಪ್ತಿಯಲ್ಲಿ ಬಸ್, ರೈಲು ನಿಲ್ದಾಣ, ಕೆರೆ, ಹಳ್ಳ, ನದಿತೀರ, ಸಮುದಾಯ ಭವನ, ಪ್ರವಾಸಿ ತಾಣಗಳು, ಐತಿಹಾಸಿಕ ಸ್ಮಾರಕಗಳು, ಕಲ್ಯಾಣಿಗಳ ಬಳಿ ಏಕಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ನಿಷೇಧಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಜಿಪಂ ಯೋಜನಾ ನಿರ್ದೇಶಕಿ ಅಪೂರ್ವಾ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಇಲಾಖೆ ಜಿಲ್ಲಾ ಅಧಿಕಾರಿ ಸೋಮಶೇಖರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net