ಕರೊನಾ ಪರೀಕ್ಷೆ ಮಾಡುವಾಗ ಮೂಗಿನೊಳಗೆ ಮುರಿದ ಸ್ವಾಬ್​ ಸ್ಟಿಕ್! ಇದು ಬಹಳ ನೋವಿನ ಕಥೆ

corona
Published on

ಕರೀಂನಗರ : ಕೋವಿಡ್​ ಪರೀಕ್ಷೆ ಮಾಡುವಾಗ ಮೂಗಿನೊಳಗೆ ಹಾಕಿದ ಸ್ವಾಬ್​ ಸ್ಟಿಕ್​ ಮುರಿದು ಸಿಕ್ಕಿಹಾಕಿಕೊಂಡು ಹಿಂಸೆ ನೀಡಿದ ಘಟನೆ ತೆಲಂಗಾಣದ ಕರೀಂನಗರ ಜಿಲ್ಲೆಯಲ್ಲಿ ನಡೆದಿದೆ. ಹಳ್ಳಿಯವರಿಗೆ ಕೋವಿಡ್​ ಪರೀಕ್ಷೆ ಆಯೋಜಿಸಿ ಮೊದಲು ತಾವೇ ಪರೀಕ್ಷೆ ಮಾಡಿಸಿಕೊಂಡು ಮಾದರಿಯಾಗಲು ಹೊರಟ ಸರ್​ಪಂಚ್ ಒಬ್ಬರು, ಹೀಗೆ ನರಕಯಾತನೆ ಅನುಭವಿಸಿದ್ದಾರೆ.

ಕರೀಂನಗರ ಜಿಲ್ಲೆಯ ರಾಮಡುಗು ಮಂಡಲದಲ್ಲಿರುವ ವೆಂಕಟರೋಪಲ್ಲಿ ಪಂಚಾಯಿತಿಯ ಅಧ್ಯಕ್ಷ ಜುವಾಜಿ ಶೇಖರ್​ ಅವರು, ಶುಕ್ತವಾರದಂದು ಹಳ್ಳಿಯಲ್ಲಿ ಕರೊನಾ ರಾಪಿಡ್​ ಆ್ಯಂಟಿಜನ್ ಟೆಸ್ಟ್​ ಶಿಬಿರವನ್ನು ಆಯೋಜಿಸಿದ್ದರು. ಸ್ಥಳೀಯ ಗೋಪಾಲ್​ರಾವ್​ಪೇಟ್​ನ ಪ್ರಾಥಮಿಕ ಆರೋಗ್ಯ ಕೇಂದ್ರದವರು ಇದನ್ನು ವ್ಯವಸ್ಥೆ ಮಾಡಿದ್ದರು.

ಕೇಂದ್ರದ ಸಿಬ್ಬಂದಿ ಶೇಖರ್​ ಅವರ ಮೂಗಿಗೆ ಸ್ವಾಬ್ ಸ್ಟಿಕ್​ ಹಾಕಿದಾಗ ಅದು ಮೂಗಿನೊಳಗೇ ಮುರಿದುಹೋಯಿತು. ತದನಂತರ ನರ್ಸ್​ ಮತ್ತು ವೈದ್ಯರು ಏನೂ ಮಾಡಲು ಸಾಧ್ಯವಾಗದಾಗ ಅವರನ್ನು ಕರೀಂನಗರದ ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದೊಯ್ಯಲಾಯಿತು. ಮೂಗಿನಿಂದ ಜಾರಿ ಗಂಟಲಲ್ಲಿ ಸಿಲುಕಿಕೊಂಡಿದ್ದ ಆ ಕಡ್ಡಿಯನ್ನು ಅಲ್ಲಿನ ವೈದ್ಯರು ಎಂಡೋಸ್ಕೋಪಿ ಮಾಡಿ ತೆಗೆದರು ಎನ್ನಲಾಗಿದೆ.

ಅಷ್ಟೂ ಹೊತ್ತು ಭಾರೀ ನೋವು ಅನುಭವಿಸಿದ ಶೇಖರ್​ ಅವರು, ಚೇತರಿಸಿಕೊಂಡ ಮೇಲೆ, ಗ್ರಾಮದ ಕೇಂದ್ರದಲ್ಲಿರುವ ವೈದ್ಯಕೀಯ ಸಿಬ್ಬಂದಿ ಅಗತ್ಯ ಕೌಶಲ್ಯ ಮತ್ತು ತರಬೇತಿ ಹೊಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net