

ನವದೆಹಲಿ : ಇಂದು ನಡೆದ 44ನೇ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಕರೊನಾ ನಿರ್ವಹಣೆ ಮತ್ತು ಪರಿಹಾರ ಕಾರ್ಯಗಳಲ್ಲಿ ಬಳಸಲಾಗುವ ಹಲವು ವಸ್ತುಗಳ ಮೇಲಿನ ಜಿಎಸ್ಟಿ ದರಗಳನ್ನು ಸೆಪ್ಟೆಂಬರ್ 30 ರವರೆಗೆ ಕಡಿತಗೊಳಿಸಲು ನಿರ್ಧರಿಸಲಾಗಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಕೇಂದ್ರ ಹಣಕಾಸು ವ್ಯವಹಾರಗಳ ರಾಜ್ಯ ಸಚಿವ ಅನುರಾಗ್ ಠಾಕುರ್, ವಿವಿಧ ರಾಜ್ಯಗಳ ಹಣಕಾಸು ಮಂತ್ರಿಗಳು ಮತ್ತು ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ಸೆಪ್ಟೆಂಬರ್ 30 ರವರೆಗೆ ಪರಿಣಾಮಕಾರಿಯಾಗಿರುವಂತೆ, ಜಿಎಸ್ಟಿ ಪ್ರಮಾಣವನ್ನು ಇಳಿಸಲು ಕೌನ್ಸಿಲ್ ಮಾಡಿರುವ ಶಿಫಾರಸ್ಸುಗಳು ಹೀಗಿವೆ -
1) ಕೋವಿಡ್ ಮತ್ತು ಬ್ಲ್ಯಾಕ್ ಫಂಗಸ್ ಚಿಕಿತ್ಸೆಗಾಗಿ ಬಳಸುವ ಟಾಸಿಲಿಜುಮಾಬ್ ಮತ್ತು ಆಂಫೋಟೆರಿಸಿನ್ ಬಿ ಔಷಧಿಗಳ ಮೇಲಿನ ಜಿಎಸ್ಟಿಯನ್ನು ತೆಗೆದುಹಾಕಲಾಗಿದೆ. ಹಾಲಿ ಈ ಔಷಧಗಳ ಮೇಲೆ ಶೇ. 5 ರಷ್ಟು ಜಿಎಸ್ಟಿ ಅನ್ವಯವಾಗುತ್ತಿತ್ತು.
2) ಕೋವಿಡ್ ಚಿಕಿತ್ಸೆಯಲ್ಲಿ ಬಳಸುವ ಇನ್ನಿತರ ಔಷಧಿಗಳಾದ ರೆಮ್ಡೆಸಿವಿರ್, ಹೆಪಾರಿನ್ನಂತಹ ಕೋಆಗುಲೆಂಟ್ಗಳು ಮತ್ತು ಆರೋಗ್ಯ ಸಚಿವಾಲಯ ಕೋವಿಡ್ ಚಿಕಿತ್ಸೆಗೆಂದು ಹೆಸರಿಸುವ ಔಷಧಿಗಳ ಮೇಲಿನ ಜಿಎಸ್ಟಿಯನ್ನು ಶೇ. 12 ರಿಂದ ಶೇ. 5 ಕ್ಕೆ ಇಳಿಸಲಾಗಿದೆ.
3) ಆಕ್ಸಿಜನ್, ಆಕ್ಸಿಜನ್ ಜನರೇಷನ್ ಎಕ್ಷಿಪ್ಮೆಂಟ್ ಮತ್ತು ಸಂಬಂಧಿತ ವೈದ್ಯಕೀಯ ಉಪಕರಣಗಳ ಮೇಲೆ ಹಾಲಿ ಇರುವ ಶೇ.12 ರಷ್ಟು ಜಿಎಸ್ಟಿಯನ್ನು ಶೇ.5 ಕ್ಕೆ ಇಳಿಸಿದೆ. ಇದರಲ್ಲಿ ಮೆಡಿಕಲ್ ಗ್ರೇಡ್ ಆಕ್ಸಿಜನ್, ಆಕ್ಸಿಜನ್ ಕಾನ್ಸಂಟ್ರೇಟರ್ ಮತ್ತು ವೆಂಟಿಲೇಟರ್ ಉಪಕರಣಗಳು ಸೇರಿವೆ.
4) ಕೋವಿಡ್ ಪರೀಕ್ಷೆಗೆ ಬಳಸುವ ಟೆಸ್ಟ್ ಕಿಟ್ಗಳು, ಯಂತ್ರಗಳು ಮತ್ತು ಪಲ್ಸ್ ಆಕ್ಸಿಮೀಟರ್ ಮೇಲಿನ ಜಿಎಸ್ಟಿಯನ್ನು ಶೇ. 12 ರಿಂದ ಶೇ.5 ಕ್ಕೆ ಇಳಿಸಿದೆ.
5) ಹ್ಯಾಂಡ್ ಸ್ಯಾನಿಟೈಸರ್, ಟೆಂಪರೇಚರ್ ಚೆಕಿಂಗ್ ಆ್ಯಪರೇಟಸ್ ಮತ್ತು ಚಿತಾಗಾರಗಳಲ್ಲಿ ಬಳಸುವ ಗ್ಯಾಸ್ ಅಥವಾ ಎಲೆಕ್ಟ್ರಿಕ್ ಫರ್ನೇಸ್ ಯಂತ್ರಗಳ ಮೇಲೆ ಹಾಲಿ ಇರುವ ಶೇ. 18 ಜಿಎಸ್ಟಿಯನ್ನು ಶೇ. 5 ಕ್ಕೆ ಇಳಿಸಿದೆ.
6) ಆ್ಯಂಬುಲೆನ್ಸ್ ಮೇಲಿನ ಹಾಲಿ ಶೇ.28 ರಷ್ಟು ಜಿಎಸ್ಟಿಯನ್ನು ಶೇ. 12 ಕ್ಕೆ ಇಳಿಸಿದೆ.