

Pothole : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳ ವಿಚಾರ ಬಹಳ ಸದ್ದು ಮಾಡಿದ್ದು ಎಲ್ಲರಿಗೂ ಗೊತ್ತೇ ಇದೆ. ಜನರಿಂದ ಭಾರಿ ಟೀಕೆ ವ್ಯಕ್ತವಾಗುತ್ತಿದ್ದಂತೆ ಗುಂಡಿ ಮುಚ್ಚಲು ಚೀಫ್ ಇಂಜಿನಿಯರ್ಗಳಿಗೆ ನವೆಂಬರ್ 1ರವರೆಗೆ ಸರ್ಕಾರ ಗಡುವು ನೀಡಿದೆ. ಇದರ ಬೆನ್ನಲ್ಲೇ ಬಿಹಾರವು ಕೂಡ ರಸ್ತೆ ಗುಂಡಿ ವಿಚಾರದಲ್ಲಿ ಬಹಳ ಸುದ್ದಿಯಾಗುತ್ತಿದೆ. ಅಚ್ಚರಿ ಸಂಗತಿ ಏನೆಂದರೆ, ತನ್ನ ಕಾರು ಗುಂಡಿಗೆ ಬಿದ್ದರೂ ಓನರ್ ಮಾತ್ರ ಸರ್ಕಾರದ ವಿರುದ್ಧ ಆರೋಪ ಮಾಡಲಿಲ್ಲ.
ಶುಕ್ರವಾರ (ಸೆ.19) ಸಂಜೆ ಬಿಹಾರ ರಾಜಧಾನಿ ಪಟನಾದಲ್ಲಿ ಐದು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಎಸ್ಯುವಿ ಕಾರೊಂದು ನೀರು ತುಂಬಿದ ಬೃಹತ್ ಗುಂಡಿಗೆ ಬಿದ್ದು, ಅದರೊಳಗೆ ಸಿಲುಕಿಕೊಂಡಿತು. ಈ ಘಟನೆಯ ಬಗ್ಗೆ ಕಾರಿನ ಮಾಲಕಿ ನೀಡಿರುವ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ಒಂದು ಅಪಘಾತವು "ಸರ್ಕಾರದ ಹೆಸರು ಕೆಡಿಸುವ ಪಿತೂರಿಯ" ಭಾಗವಾಗಿದೆ ಎಂದು ಮಾಲಕಿ ಆರೋಪಿಸಿದ್ದಾರೆ.
ಕಪ್ಪು ಬಣ್ಣದ ಸ್ಕಾರ್ಪಿಯೋ-ಎನ್ ಕಾರು ಆಳವಾದ, ನೀರು ತುಂಬಿದ ಗುಂಡಿಗೆ ಬೀಳುತ್ತಿರುವ ದೃಶ್ಯವನ್ನು ತೋರಿಸುವ ವಿಡಿಯೋ ವೈರಲ್ ಆಗಿತ್ತು. ವಿಡಿಯೋದಲ್ಲಿ ಎಸ್ಯುವಿ ಬಹುತೇಕ ಮುಳುಗಿ ಒಂದು ಬದಿಯಷ್ಟೇ ಕಾಣುತ್ತಿದೆ. ಈ ಘಟನೆ ನಡೆದ ಬೆನ್ನಲ್ಲೇ ಸ್ಥಳೀಯರು ಕಾರನ್ನು ನೋಡಲು ಸ್ಥಳಕ್ಕೆ ಜಮಾಯಿಸಿದರು. ಈ ವೇಳೆ ಇಬ್ಬರು ಪುರುಷರು ವಾಹನದ ಮೇಲೆ ನಿಂತು ಚಾಲಕನ ಪಕ್ಕದ ಬಾಗಿಲನ್ನು ತೆರೆಯುವುದನ್ನು ಮತ್ತು ಅದರೊಳಗೆ ಯಾರೂ ಇಲ್ಲ ಎಂದು ಖಚಿತಪಡಿಸಿಕೊಳ್ಳುವುದನ್ನು ವಿಡಿಯೋದಲ್ಲಿ ಕಾಣಬಹುದು.
ಪಟನಾ ರೈಲು ನಿಲ್ದಾಣದ ಬಳಿಯಿರುವ ಹಾಳಾಗಿರುವ ಮತ್ತು ಸಂಪೂರ್ಣ ಗುಂಡಿಗಳಿಂದ ತುಂಬಿರುವ ರಸ್ತೆಯು ದೀರ್ಘಕಾಲದವರೆಗೆ ದುರಸ್ತಿಯನ್ನೇ ಕಂಡಿಲ್ಲ ಎಂಬುದು ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತದೆ.
ಈ ಘಟನೆ ಬಗ್ಗೆ ಭಾಗಲ್ಪುರ ನಿವಾಸಿ ಹಾಗೂ ಕಾರಿನ ಮಾಲಕಿ ನೀತು ಸಿಂಗ್ ಚೌಬೆ ಸುದ್ದಿ ಸಂಸ್ಥೆ ANI ಜೊತೆ ಮಾತನಾಡಿದರು. ನಾವು ಜಿಲ್ಲಾಧಿಕಾರಿ ಜೊತೆ ಮಾತನಾಡಿದ್ದೇವೆ. ಚುನಾವಣಾ ಅವಧಿಯಲ್ಲಿ ಸರ್ಕಾರಕ್ಕೆ ಅಪಖ್ಯಾತಿ ತರುವ ಪಿತೂರಿ ಇದಾಗಿದೆ ಎಂದು ಅವರು ಹೇಳಿದರು. ಇದೆಲ್ಲವೂ ಬಿಹಾರ ನಗರ ಮೂಲಸೌಕರ್ಯ ಅಭಿವೃದ್ಧಿ ನಿಗಮ (BUIDCO) ದ ತಪ್ಪು ಎಂದು ಹೇಳಿದರು. ಅಲ್ಲದೆ, ಇದರಲ್ಲಿ ಸರ್ಕಾರದ ತಪ್ಪಿಲ್ಲ ಎಂದು ಚೌಬೆ ತಿಳಿಸಿದರು.
ಇಲ್ಲಿ ಇಷ್ಟು ದೊಡ್ಡ ಗುಂಡಿ ನಿರ್ಮಾಣವಾಗಿದ್ದರೂ 20 ದಿನಗಳ ಕಾಲ ಅದನ್ನು ಗಮನಿಸದೆ ಬಿಟ್ಟಿದ್ದಾರೆ. ಇದು ಮಳೆಗಾಲ. ಕಾರಿನಲ್ಲಿ ಐದು ಜನರಿದ್ದರು. ಯಾರಾದರೂ ಪ್ರಾಣ ಕಳೆದುಕೊಂಡಿದ್ದರೆ, ಯಾರು ಹೊಣೆ ಹೊರುತ್ತಾರೆ? ಎಂದು ಪ್ರಶ್ನೆ ಮಾಡುವ ಮೂಲಕ ನೀತು ಸಿಂಗ್ ಚೌಬೆ ಆಕ್ರೋಶ ಹೊರಹಾಕಿದರು.
ಇನ್ನು ಪ್ರಯಾಣಿಕರನ್ನು ಎಚ್ಚರಿಸಲು ಯಾವುದೇ ಸುರಕ್ಷತಾ ಕ್ರಮಗಳನ್ನು ಜಾರಿಗೆ ತಂದಿಲ್ಲ. ಸ್ಥಳದಲ್ಲಿ ಯಾವುದೇ ಬ್ಯಾರಿಕೇಡ್ ಇರಲಿಲ್ಲ. ನನ್ನ ಕಾರು ಬಿದ್ದ ನಂತರವೂ, ಇನ್ನೊಬ್ಬ ವ್ಯಕ್ತಿ ಅದೇ ಗುಂಡಿಯಲ್ಲಿ ತನ್ನ ಬೈಕ್ನಿಂದ ಬಿದ್ದಿದ್ದಾನೆ. ಪ್ರತಿದಿನ ಯಾರಾದರು ಒಬ್ಬರು ಈ ಗುಂಡಿಯಲ್ಲಿ ಬೀಳುತ್ತಾರೆ ಎಂದು ಸ್ಥಳೀಯರು ಹೇಳುತ್ತಾರೆ ಎಂದು ನೀತು ಸಿಂಗ್ ಚೌಬೆ ತಿಳಿಸಿದರು. (ಏಜೆನ್ಸೀಸ್)