ರಾಜಧಾನಿಯಲ್ಲಿ ಅನುಮಾನಾಸ್ಪದ ಡ್ರೋಣ್ ಹಾರಾಟ; ಬರ್ತ್​​ಡೇ ಪಾರ್ಟಿ ಸೆರೆ ಹಿಡಿಯಲು ಹೋಗಿ ಎಡವಟ್ಟು

Drone
Published on

ನವದೆಹಲಿ: ಭಾರತದ ಆತಿಥ್ಯದಲ್ಲಿ ನವದೆಹಲಿಯಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಯ ಭದ್ರತಾ ದೃಷ್ಟಿಯಿಂದ ಹಲವು ನಿರ್ಬಂಧಗಳನ್ನು ಹೇರಲಾಗಿದೆ. ಆದರೂ ಡ್ರೋಣ್ ಹಾರಾಟ ನಡೆಸಿ ಪೊಲೀಸರು ಗಾಬರಿಗೊಳ್ಳುವಂತೆ ಮಾಡಿತ್ತು.

ಶುಕ್ರವಾರ ಪಟೇಲ್ ನಗರ ಸಮೀಪದಲ್ಲಿ ಡ್ರೋಣ್ ಕ್ಯಾಮರಾವೊಂದು ಅನುಮಾನಾಸ್ಪದವಾಗಿ ಹಾರಾಡಿದ ಬಗ್ಗೆ ದೆಹಲಿ ಪೊಲೀಸರ ಕಂಟ್ರೋಲ್ ರೂಮಿಗೆ ಮಾಹಿತಿ ಬಂದಿದೆ. ಗಾಬರಿಗೊಂಡ ಪೊಲೀಸ್ ತಂಡವು ಡ್ರೋಣ್ ಕ್ಯಾಮರಾದ ಮೂಲವನ್ನು ಹುಡುಕಿದ್ದಾರೆ.

ಶನಿವಾರ ಸ್ಥಳಕ್ಕೆ ತಲುಪಿದಾಗ ಫೋಟೋಗ್ರಾಫರ್ ಮಾಡಿದ ಯಡವಟ್ಟು ಬೆಳಕಿಗೆ ಬಂದಿದೆ. ಹುಟ್ಟುಹಬ್ಬದ ಪಾರ್ಟಿಯ ಸಂಭ್ರಮವನ್ನು ಸೆರೆ ಹಿಡಿಯಲು ಫೋಟೋಗ್ರಾಫರ್ ಡ್ರೋಣ್ ಬಳಸಿದ್ದು, ಇದರಲ್ಲಿ ಇನ್ಯಾವ ಉದ್ದೇಶವೂ ಇರಲಿಲ್ಲ ಎಂದು ವಿಚಾರಣೆಯ ವೇಳೆ ತಿಳಿದುಬಂದಿದೆ.

ನಂತರ ಸರ್ಕಾರಿ ಅಧಿಕಾರಿಗಳು ವಿಧಿಸಿದ್ದ ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ ಫೋಟೋಗ್ರಾಫರ್ ವಿರುದ್ಧ ಸೆಕ್ಷನ್ 188 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ನವದೆಹಲಿಯಲ್ಲಿ ಜಿ-20 ಶೃಂಗಸಭೆ ಹಿನ್ನೆಲೆ ಭದ್ರತಾ ದೃಷ್ಟಿಯಿಂದ ಹಲವು ನಿರ್ಬಂಧಗಳನ್ನು ಹೇರಲಾಗಿದೆ. ಫುಡ್ ಡೆಲಿವರಿ, ಡ್ರೋಣ್ ಹಾರಾಟ ಸೇರಿದಂತೆ ಹಲವು ವ್ಯಾಪಾರಗಳಿಗೆ ತಾತ್ಕಾಲಿಕವಾಗಿ ನಿರ್ಬಂಧ ಹೇರಲಾಗಿದೆ. ಯಾವುದೇ ಅವಘಡಗಳು ಸಂಭವಿಸದಂತೆ 50,000 ಭದ್ರತಾ ಸಿಬ್ಬಂದಿ, 9 ಶ್ವಾನ ತುಕಡಿ ಸೇರಿದಂತೆ ದೊಡ್ಡ ಪಡೆಯೇ ಕಾವಲು ನಿಂತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net