

ಚನ್ನಪಟ್ಟಣ
ನೇಣು ಬಿಗಿದುಕೊಂಡು ಪತಿ ಪತ್ನಿ ಇಬ್ಬರೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಕರಲಹಳ್ಳಿ ಗ್ರಾಮದಲ್ಲಿ ಗುರುವಾರ ನಡೆದಿದೆ.
ಕೆ.ಟಿ.ಚೆಲುವರಾಜು (34) ಹಾಗೂ ಲಕ್ಷ್ಮೀ (29) ಮೃತ ದಂಪತಿಗಳು. ಕುಟುಂಬದೊಂದಿಗಿನ ಹಣಕಾಸಿನ ಮನಸ್ತಾಪದಿಂದ ಬೇಸತ್ತು ಈ ದಂಪತಿಗಳು ತಮ್ಮ ಮನೆಯ ದನದ ಕೊಟ್ಟಿಗೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ಥಳಕ್ಕೆ ಅಕ್ಕೂರು ಪೊಲೀಸರ ಭೇಟಿ, ಪರಿಶೀಲನೆ ನಡೆಸಿದ್ದಾರೆ
ಕರಲಹಳ್ಳಿ ಗ್ರಾಮದ ತಿಮ್ಮಯ್ಯ ಎಂಬುವರ ಮಗನಾದ ಚೆಲುವರಾಜು ಕಳೆದ ಎಂಟು ವರ್ಷ ಹಿಂದೆ ಕಾರೆಕೊಪ್ಪ ಗ್ರಾಮದ ಲಕ್ಷ್ಮಿ ಎಂಬುವವರನ್ನು ಮದುವೆಯಾಗಿದ್ದರು. ಈ ದಂಪತಿಗೆ ಎರಡೂವರೆ ವರ್ಷದ ಗಂಡುಮಗುವಿದೆ. ಮೃತ ಚೆಲುವರಾಜು ಗ್ರಾಮದಲ್ಲಿಯೇ ವ್ಯವಸಾಯ ಮಾಡಿಕೊಂಡು ತನ್ನ ತಂದೆತಾಯಿ, ಪತ್ನಿ ಹಾಗೂ ಮಗುವಿನೊಂದಿಗೆ ಜೀವನ ಸಾಗಿಸುತ್ತಿದ್ದರು. ಇವರ ಇನ್ನಿಬ್ಬರು ಸಹೋದರರು ಬೆಂಗಳೂರಿನಲ್ಲಿ ನೆಲೆಸಿದ್ದರು. ಮನೆಯಲ್ಲಿ ಹಣಕಾಸಿನ ವಿಚಾರವಾಗಿ ಇತ್ತೀಚೆಗೆ ಮನಸ್ತಾಪ ಉಂಟಾಗಿತ್ತು ಎನ್ನಲಾಗಿದೆ. ಮೃತನ ತಂದೆ ಅನಾರೋಗ್ಯದ ಕಾರಣದಿಂದ ಬೆಂಗಳೂರಿನಲ್ಲಿದ್ದರು. ಕುಟುಂಬದಲ್ಲಿನ ಈ ಮನಸ್ತಾಪದಿಂದ ನೊಂದು ದಂಪತಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.
ಹೃದಯ ವಿದ್ರಾಯಕ ಘಟನೆ!
ಎರಡೂವರೆ ವರ್ಷದ ಗಂಡುಮಗುವನ್ನು ಬಿಟ್ಟು
ಪತಿಪತ್ನಿ ಇಬ್ಬರೂ ಆತ್ಮಹತ್ಯೆ ಶರಣಾಗಿದ್ದಾರೆ. ಗುರುವಾರ ಬೆಳಿಗ್ಗೆ ಮಗು ಎದ್ದು ತಂದೆತಾಯಿಗಾಗಿ ಮನೆಯಲ್ಲಿ ಹುಡುಕಾಡಿದೆ. ತಂದೆತಾಯಿಯನ್ನು ಕಾಣದೇ ಮಗು ಚೀರಾಟ ಮಾಡಲು ಆರಂಭಿಸಿದೆ. ಆಗ ಅಕ್ಕಪಕ್ಕದವರು ಮನೆಯ ಬಳಿ ಬಂದಾಗ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ತಿಳಿದುಬಂದಿದೆ. ಯಾವುದೋ ಕ್ಷುಲ್ಲಕ ಕಾರಣಕ್ಕೆ ಏನು ಅರಿಯದ ಮುದ್ದಾದ ಮಗುವನ್ನು ದಂಪತಿಗಳು ಅನಾಥವಾಗಿಸಿದ್ದಾರೆ.