ಶರಣಾಗತಿಯು ಗುಲಾಮಗಿರಿಯಲ್ಲ, ಬಹಳ ಶಕ್ತಿಶಾಲಿ..

Surrender
Published on
ಶರಣಾಗತಿಯನ್ನು ಎರಡು ರೀತಿಯ ದೃಷ್ಟಿಕೋನಗಳಿಂದ ನೋಡಲಾಗá-ತ್ತದೆ. ಒಂದು ಪಾಶ್ಚಾತ್ಯ ದೃಷ್ಟಿಕೋನ. ಸೋತಾಗ ಶರಣಾಗುತ್ತೇವೆ, ಸೋತು ಗುಲಾಮರಾದಾಗ ಶರಣಾಗುವುದು ಹೃದಯದಿಂದ ಶರಣಾಗುವುದಲ್ಲ. ದೈಹಿಕ, ಮಾನಸಿಕ, ಭಾವನಾತ್ಮಕ ದೌರ್ಬಲ್ಯದಿಂದ ಶರಣಾಗುವುದು. ಇದು ಶರಣಾಗತಿಯ ಬಗ್ಗೆ ಪಾಶ್ಚಿಮಾತ್ಯರಲ್ಲಿ ಇರುವ ಭಾವನೆ.

ಆಧ್ಯಾತ್ಮಿಕ ದೃಷ್ಟಿಕೋನದಲ್ಲಿ ಶರಣಾಗತಿಯು ಇದಕ್ಕೆ ಪೂರ್ಣ ವಿರುದ್ಧವಾದ ಅರ್ಥವನ್ನು ತಾಳುತ್ತದೆ. ಆಧ್ಯಾತ್ಮಿಕ ದೃಷ್ಟಿಕೋನದಲ್ಲಿ ನಿಮ್ಮ ನಕಾರಾತ್ಮಕ ಭಾವನೆಗಳು ಮತ್ತು ಗುಣಗಳು ನಿಮ್ಮನ್ನು ಬಾಧಿಸುತ್ತವೆ, ಒಂದು ದೊಡ್ಡ ಹೊರೆಯಾಗುತ್ತವೆ. ನೀವು ಹೊತ್ತುಕೊಳ್ಳಲು ಬಯಸದು, ನಿಮ್ಮಿಂದ ನಿಭಾಯಿಸಲಾರದ ಹೊರೆಯನ್ನು ಸಮರ್ಪಿಸುವುದು. ಪೌರಾತ್ಯ ದೇಶಗಳ ಶರಣಾಗತಿಯ ಭಾವನೆ ಇದಾಗಿದ್ದು, ನಿಮ್ಮ ಮೇಲೆ, ನಿಮ್ಮ ಮನಸ್ಸಿನ ಮೇಲೆ, ನಿಮ್ಮ ನಕಾರಾತ್ಮಕತೆಗಳ ಮೇಲೆ ಜಯ ಸಾಧಿಸುವುದು, ಅವೆಲ್ಲವನ್ನೂ ತ್ಯಜಿಸಿ ಗೆಲ್ಲುವುದಾಗಿದೆ. ಆದ್ದರಿಂದ, ಆಧ್ಯಾತ್ಮಿಕ ದೃಷ್ಟಿಕೋನದಲ್ಲಿ ಶರಣಾಗತಿಯೆಂದರೆ ಗುಲಾಮಗಿರಿಯಲ್ಲ, ಬಲ. ವೈಷ್ಣವ ದೇವಸ್ಥಾನಗಳಲ್ಲಿ ನೀವು ಭಗವಂತನೆದುರು ಶರಣಾದಾಗ ಒಂದು ಬೆಳ್ಳಿಯ ಕಿರೀಟವನ್ನು ನಿಮ್ಮ ತಲೆಯ ಮೇಲೆ ಇಡಲಾಗುತ್ತದೆ. ಇದರ ಹಿಂದಿನ ಅರ್ಥ, ‘ನಿಮ್ಮ ನಕಾರಾತ್ಮಕತೆಯನ್ನು ಅರ್ಪಿಸಿ ಶರಣುಹೋದಲ್ಲಿ, ನೀವು ಒಬ್ಬ ರಾಜನಂತೆ ಬಲಿಷ್ಠರಾಗುವಿರಿ’ ಎಂದು. ಕನ್ನಡದಲ್ಲಿ ‘ಶರಣು ಶರಣಾರ್ಥಿ’ ಎನ್ನುತ್ತಾರೆ. ಸಂತರನ್ನು ಶರಣರೆಂದು ಕರೆಯುತ್ತಾರೆ. ಸಂತರೆಲ್ಲರೂ ತಮ್ಮ ಎಲ್ಲ ನಕಾರಾತ್ಮಕತೆಗಳನ್ನೂ ದೈವಕ್ಕೆ ಸಮರ್ಪಿಸಿ, ಶುದ್ಧರಾಗಿ, ಬಲಿಷ್ಠರಾಗಿರುತ್ತಾರೆ. ಇದರಿಂದಾಗಿ ಅವರು ಬಹಳ ಗೌರವವನ್ನು ಪಡೆದುಕೊಳ್ಳುತ್ತಾರೆ. ನಕಾರಾತ್ಮಕವಾದ ಎಲ್ಲವನ್ನೂ ಬಿಟ್ಟಾಗ ನಮ್ಮ ಬಳಿ ಸಕಾರಾತ್ಮಕತೆ ಮಾತ್ರ ಉಳಿಯುತ್ತದೆ. ಅದೇ ಸಂತರ ಸ್ಥಿತಿ.

ಶರಣಾಗತಿಯಿಲ್ಲದೆ ಸಂತರ ಸ್ಥಿತಿ ಬರುವುದಿಲ್ಲ ಮತ್ತು ಸಂತರ ಸ್ಥಿತಿಯೆಂದರೆ ಗುಲಾಮರಾಗಿರುವುದಲ್ಲ, ಶಕ್ತಿಶಾಲಿಗಳಾಗಿರುವುದು. ಸಂತರು ಮತ್ತು ಗುಲಾಮಗಿರಿಯ ಎರಡೂ ಸ್ಥಿತಿಯಲ್ಲೂ ಶರನಾಗತಿ ಎಂಬ ಪದವನ್ನು ಬಳಸಲಾದರೂ ಸಂತರು ತಮ್ಮ ನಕಾರಾತ್ಮಕ ಗುಣಗಳನ್ನು ಅರ್ಪಿಸಿ ಶರಣಾಗಿದ್ದಾರೆ. ಗುಲಾಮರು ತಮ್ಮ ಬಲಹೀನತೆಗಳನ್ನು ಒಪ್ಪಿಕೊಂಡಿದ್ದಾರೆ. ಹಾಗೆ ನೋಡಿದರೆ ಸಮರ್ಪಣೆ ಮಾಡಲು ನಿಮ್ಮ ಬಳಿ ಏನಿದೆ ? ಸಮರ್ಪಿಸಲು ಏನೂ ಇಲ್ಲ. ಸುಮ್ಮನೆ ವಿಶ್ರಮಿಸಿ. ಎಲ್ಲವೂ ಹೇಗಿದ್ದರೂ ಒಂದೇ ಮಹತ್ ಪ್ರಜ್ಞೆ- ವಿಶ್ವಕ್ಕೆ ಸೇರಿರುವಂಥದ್ದು, ಎಲ್ಲವೂ ಈಗಾಗಲೇ ಭಗವಂತನಿಗೆ ಸೇರಿದ್ದು ಎಂದು ತಿಳಿಯಿರಿ. ಶರಣರಾಗಲು ಕಷ್ಟ ಪಡಬೇಡಿ. ‘ಓ! ನನ್ನಿಂದ ನೂರು ಪ್ರತಿಶತ ಶರಣಾಗಲು ಸಾಧ್ಯವಾಗುತ್ತಿಲ್ಲ’ ಎಂದು ಕೊರಗಬೇಡಿ. ಎಲ್ಲವೂ ಕೇವಲ ಮಾನಸಿಕ ಕಸರತ್ತುಗಳಷ್ಟೆ. ಇವೆಲ್ಲವನ್ನೂ ಬಿಟ್ಟು ವಿಶ್ರಮಿಸಿ, ಸಹಜವಾಗಿರಿ. ನಮಗೆ ಕೋಪ ಬಂದಾಗ ಅಥವಾ ಆಶಾಭಂಗವಾದಾಗ, ‘ಎಲ್ಲವನ್ನೂ ಬಿಟ್ಟುಬಿಡುತ್ತೇನೆ. ಹೋದರೆ ಹೋಗಲಿ’ ಎನ್ನುತ್ತೇವೆ. ಇದು ಶರಣಾಗತಿಯಲ್ಲ. ಶರಣಾಗತಿಯೆಂದರೆ, ‘ಇದು ಬಹಳ ಮುಖ್ಯವಾದರೂ ನನ್ನಿಂದ ಇದು ಸಾಧ್ಯವಾಗುತ್ತಿಲ್ಲ. ಭಗವಂತ ಇದನ್ನು ನೀನೇ ನೋಡಿಕೊ’. ಒಂದು ಉನ್ನತವಾದ ಶಕ್ತಿಯು ಇದನ್ನು ನೋಡಿಕೊಳ್ಳಲಿ ಎಂಬ ಭಾವನೆಯಿಂದ ವಿಶ್ರಮಿಸುವುದು. ಈ ಭಾವನೆ ನಮ್ಮ ಅಂತರಾಳದಿಂದ ಬಂದಾಗ ಅದೇ ಶರಣಾಗತಿ.

ತಮ್ಮ ಶರಣಾಗತಿಯನ್ನು ಕೆಲವರು ಸಂಶಯಿಸುತ್ತಲೇ ಇರುತ್ತಾರೆ. ನಿಮ್ಮ ಸಂಶಯವನ್ನು ಗಮನಿಸಿ. ಸಂಶಯಗಳನ್ನು ತ್ಯಜಿಸಿದಾಗ ವಿಶ್ವಾಸವು ನಿಮ್ಮ ಬಳಿ ಆಗಲೇ ಇರುತ್ತದೆ. ಸಂಶಯ ಎಂದರೆ ಮನಸ್ಸನ್ನು ಆವರಿಸಿಕೊಂಡಿರುವ ಮೋಡ. ‘ಈ ಸಂಶಯದಿಂದ ನಾನು ಎದೆ ಗುಂದುತ್ತಿದ್ದೇನೆೆ, ಅಷ್ಟೆ. ಮನಸ್ಸು ಭಾರವಾಗುತ್ತಿದೆ. ಹಿಂದೆಯೂ ಇಂತಹ ಅನೇಕ ಸಂಶಯಗಳು ಎದ್ದಿತ್ತು. ಇದರ ಬಗ್ಗೆ ಎಚ್ಚೆತ್ತುಕೊಂಡಾಗ ಸಂಶಯಗಳೆಲ್ಲವೂ ಬಿದ್ದು ಹೋದವು’ ಎಂಬ ಅರಿವು ಮೂಡಿದಾಗ, ವಿಶ್ವಾಸವು ತಾನಾಗಿಯೇ ಉದಯವಾಗುತ್ತದೆ. ಸಂಶಯಗಳು ಏಳುತ್ತಲೇ ಇದ್ದಾಗ ನೀವು ದುರ್ಬಲರು ಎಂಬ ಭಾವನೆ ನಿಮ್ಮಲ್ಲಿ ಮೂಡುತ್ತಿರುವುದನ್ನು ಗಮನಿಸಿ. ಅಚಲವಾದ ವಿಶ್ವಾಸವಿದ್ದಾಗ ನೀವು ಬಲಿಷ್ಠರು ಎಂಬ ಭಾವನೆ ನಿಮ್ಮ ಅಂತರಾಳದಲ್ಲಿರುವುದನ್ನು ಗಮನಿಸಿ. ಸಂಶಯಗಳು ಸದಾ ಒಳ್ಳೆಯದರ ಬಗ್ಗೆಯೇ ಆಗಿರುತ್ತವೆ. ನಕಾರಾತ್ಮಕವಾಗಿರುವುದನ್ನು ಸಂಶಯಿಸುವುದೇ ಇಲ್ಲ. ಈ ಅರಿವುಂಟಾದರೆ ಸಾಕು, ಸಂಶಯದಿಂದ ಹೊರಬರುವಿರಿ. ನೀವು ಬಲಿಷ್ಠರಾಗಿರಬೇಕೋ ಅಥವಾ ದುರ್ಬಲರಾಗಿರಬೇಕೋ ಎಂಬುದನ್ನು ನೀವು ಆಯ್ದುಕೊಳ್ಳಬೇಕು.

ಆಳವಾದ ಧ್ಯಾನದಲ್ಲಿ ಹೊಕ್ಕಾಗ ನಿಮ್ಮ ನಕಾರಾತ್ಮಕ ಪ್ರವೃತ್ತಿಗಳನ್ನು, ಸಂಶಯಗಳನ್ನು ಬಿಟ್ಟುಬಿಡುತ್ತೀರಿ, ಶರಣಾಗುತ್ತೀರಿ. ಆಗ ನಿಮ್ಮಿಂದ ಉದಯಿಸುವ ಬಲವನ್ನು, ಸತ್ಯವನ್ನು, ಸಹಿಷ್ಣುತೆಯನ್ನು, ವಿಶ್ವಾಸವನ್ನು ಯಾರಿಂದಲೂ ಅಲುಗಾಡಿಸಲು ಸಾಧ್ಯವಾಗುವುದಿಲ್ಲ. ವಿಚಾರದಲ್ಲಿ್ಲ ಶುದ್ಧತೆ, ಮನಸ್ಸಿನಲ್ಲಿ ಸ್ಪಷ್ಟತೆ ಮತ್ತು ಕಾರ್ಯದಲ್ಲಿ ಪ್ರಾಮಾಣಿಕತೆ -ಇವು ಸದ್ಭಕ್ತರ ಲಕ್ಷಣಗಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net