ವಿದ್ಯಾರ್ಥಿಗಳಿಗೆ ಸೇವಾ ಭಾವನೆ ಮುಖ್ಯ

sgr sathya narayan shetty
ಸಾಗರದ ಎಲ್ಬಿಎಸ್ ಕಾಲೇಜಿನ ಎನ್‌ಸಿಸಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿನಿ ನಂದಿತಾ ಅವರಿಗೆ ರೋಲಿಂಗ್ ಟ್ರೋಫಿಯನ್ನು ಲೆಫ್ಟಿನೆಂಟ್ ಕರ್ನಲ್ ಸುರೇಂದ್ರ ಸತ್ಯನಾರಾಯಣ ಶೆಟ್ಟಿ ವಿತರಿಸಿದರು. ಎಚ್.ಎಂ.ಶಿವಕುಮಾರ್, ಕವಲಕೋಡು ವೆಂಕಟೇಶ್ ಇತರರಿದ್ದರು.
Published on

ಸಾಗರ: ಕಾಲೇಜು ದಿನಗಳಿಂದಲೇ ಸೇವಾ ಭಾವನೆ ಬೆಳೆಸಿಕೊಳ್ಳಬೇಕು. ಇದಕ್ಕೆ ಪೂರಕವಾದ ಸಂಘಟನೆಗಳಲ್ಲಿ ತೊಡಗಿಕೊಳ್ಳಬೇಕು. ಯೋಚನೆಗಳು ಸ್ಪಷ್ಟವಾಗಿದ್ದು ದೊಡ್ಡದಾಗಿ ಕನಸು ಕಂಡರೆ ಗುರಿ ತಲುಪಲು ಸಾಧ್ಯ ಎಂದು ಲೆಫ್ಟಿನೆಂಟ್ ಕರ್ನಲ್ ಸುರೇಂದ್ರ ಸತ್ಯನಾರಾಯಣ ಶೆಟ್ಟಿ ಹೇಳಿದರು.
ಎಲ್.ಬಿ.ಕಾಲೇಜಿನ ಎನ್‌ಸಿಸಿ ವಿಭಾಗದಿಂದ ಸೋಮವಾರ ಏರ್ಪಡಿಸಿದ್ದ ರಾಷ್ಟ್ರ ನಿರ್ಮಾಣದಲ್ಲಿ ಯುವಜನರ ಪಾತ್ರ ವಿಚಾರ ಸಂಕಿರಣ ಉದ್ಘಾಟಿಸಿ ಎನ್‌ಸಿಸಿ ವಿದ್ಯಾರ್ಥಿನಿಗೆ ರೋಲಿಂಗ್ ಟ್ರೋಫಿ ವಿತರಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಮಾನಸಿಕ ಮತ್ತು ದೈಹಿಕವಾಗಿ ಸದೃಢವಾಗಬೇಕಾದರೆ ಕಾಲೇಜು ದಿನಗಳಲ್ಲಿ ಎನ್‌ಸಿಸಿಯಲ್ಲಿ ಪಾಲ್ಗೊಳ್ಳುವುದು ಅವಶ್ಯ. ಶಿಕ್ಷಣ ಪಡೆಯುವ ಜತೆಗೆ ಇತರೆ ಚಟುವಟಿಕೆಗಳಲ್ಲಿ ಸಹ ವಿದ್ಯಾರ್ಥಿಗಳು ಪಾಲ್ಗೊಂಡಾಗ ಅವರು ಸ್ಪರ್ಧಾತ್ಮಕ ಜಗತ್ತಿಗೆ ತೆರೆದುಕೊಳ್ಳಲು ಸಾಧ್ಯ. ಎನ್‌ಸಿಸಿಯಲ್ಲಿ ಅತಿಹೆಚ್ಚು ಸಾಧನೆಗೈದ ವಿದ್ಯಾರ್ಥಿಗಳಿಗೆ ತಮ್ಮ ಹೆಸರಿನಲ್ಲಿ ರೋಲಿಂಗ್ ಟ್ರೋಫಿ ನೀಡುವುದಾಗಿ ಘೋಷಿಸಿದರು.
2023-24ನೇ ಸಾಲಿನ ರೋಲಿಂಗ್ ಟ್ರೋಫಿಯನ್ನು ತೃತೀಯ ವರ್ಷದ ಎನ್‌ಸಿಸಿ ವಿದ್ಯಾರ್ಥಿನಿ ನಂದಿತಾ ಅವರಿಗೆ ನೀಡಲಾಯಿತು. ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ. ಎಚ್.ಎಂ.ಶಿವಕುಮಾರ್, ಕೋಶಾಧ್ಯಕ್ಷ ಕವಲಕೋಡು ವೆಂಕಟೇಶ್, ಲೆಫ್ಟಿನೆಂಟ್ ಎಚ್.ಡಿ.ನೂತನ್, ಭರತ್‌ರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net