ವಲಸಿಗ ಕಾರ್ಮಿಕರ ಸಂಚಾರ ನಿಗಾ ನಮ್ಮ ಜವಾಬ್ದಾರಿಯಲ್ಲ: ಸುಪ್ರೀಂ ಕೋರ್ಟ್

Migrant1
Published on

ನವದೆಹಲಿ: ಲಾಕ್​ಡೌನ್​ನಿಂದಾಗಿ ಊರು ಸೇರಲು ಪ್ರಯಾಣ ಬೆಳೆಸಿ ಮಾರ್ಗ ಮಧ್ಯೆ ಸಿಲುಕಿರುವ ವಲಸಿಗರಿಗೆ ಉಚಿತ ಸಾರಿಗೆ ವ್ಯವಸ್ಥೆಗಿಂತಲೂ ಮೊದಲು ಆಹಾರ ಮತ್ತು ಆಶ್ರಯ ಒದಗಿಸುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ತಿಳಿಸಬೇಕೆಂದು ಕೇಂದ್ರಕ್ಕೆ ನಿರ್ದೇಶನ ಕೋರಿ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.

ರಾಷ್ಟ್ರಾದ್ಯಂತ ವಲಸೆ ಕಾರ್ಮಿಕರ ಸಂಚಾರದ ಮೇಲೆ ನಿಗಾವಹಿಸಲು ನ್ಯಾಯಾಲಯಗಳಿಗೆ ಸಾಧ್ಯವಾಗುವುದಿಲ್ಲ. ಅಂತೆಯೇ ನಿಲ್ಲಿಸುವುದೂ ಅಸಾಧ್ಯ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದು ರಾಜ್ಯ ಸರ್ಕಾರಗಳಿಗೆ ಬಿಟ್ಟ ವಿಚಾರ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ನ್ಯಾಯಮೂರ್ತಿ ಎಲ್ ನಾಗೇಶ್ವರ ರಾವ್ ನೇತೃತ್ವದ ಮೂವರು ನ್ಯಾಯಾಧೀಶರ ಪೀಠವು ಈ ವಲಸೆ ಕಾರ್ಮಿಕರನ್ನು ರಸ್ತೆಗಳಲ್ಲಿ ನಡೆಯದಂತೆ ತಡೆಯಲು ಏನಾದರೂ ಮಾರ್ಗೋಪಾಯವಿದೆಯೇ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಕೇಳಿದೆ. ರಾಜ್ಯಗಳು ವಲಸೆ ಕಾರ್ಮಿಕರಿಗೆ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿವೆ ಆದರೆ ಜನರು ಆ ಸೌಲಭ್ಯ ಬಳಸಿಕೊಳ್ಳುವ ಬದಲು ಕಾಲ್ನಡಿಗೆಯಲ್ಲಿ ತೆರಳಲು ಮುಂದಾದರೆ ಏನೂ ಮಾಡಲಾಗುವುದಿಲ್ಲ ಎಂದು ಮೆಹ್ತಾ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net