ನೋಡನೋಡುತ್ತಿದ್ದಂತೆ ಧರೆಗುರುಳಿದರು ಸ್ಕೈಡೈವರ್​​ಗಳು....!

skydiving
Published on

ವಾಷಿಂಗ್ಟನ್: ಆ ಇಬ್ಬರು ಸ್ಕೈಡೈವರ್​ಗಳು ಅಂದುಕೊಂಡಂತೆ ಎಲ್ಲವೂ ಆಗಿದ್ದರೆ ತಾವು ಬಯಸಿದಷ್ಟು ಹೊತ್ತು ಆಕಾಶದಲ್ಲಿ ಹಕ್ಕಿಯಂತೆ ಹಾರಾಡಿ ಪ್ರಕೃತಿ ಸೌಂದರ್ಯ ಸವಿಯಬಹುದಿತ್ತು. ಆದರೆ ಅವರಂದುಕೊಂಡದ್ದೇ ಬೇರೆ, ಆಗಿದ್ದೇ ಬೇರೆ.

ಭೂಮಿಯಿಂದ ಅದೆಷ್ಟೋ ಅಡಿ ಎತ್ತರದಲ್ಲಿ ಖುಷಿಯಿಂದ ಸ್ಕೈಡೈವಿಂಗ್ ಮಾಡುತ್ತಿದ್ದ ಅವರಲ್ಲಿ ಆ ಖುಷಿ ಹೆಚ್ಚು ಕಾಲ ಉಳಿಯಲಿಲ್ಲ. ಪ್ಯಾರಾಚೂಟ್​​ನಲ್ಲಿ ಉಂಟಾದ ದೋಷದಿಂದಾಗಿ ನೋಡನೋಡುತ್ತಿದ್ದಂತೆ ಆ ನತದೃಷ್ಟರು ನೆಲಕ್ಕುರುಳಿದರು.

ಇದು ನಡೆದದ್ದು ಫ್ಲೋರಿಡಾದಲ್ಲಿ. ಪ್ಯಾರಾಚ್ಯೂಟ್​​ನಲ್ಲಿ ಉಂಟಾದ ತೊಂದರೆಯಿಂದ ಈ ಇಬ್ಬರು ಸ್ಕೈಡೈವರ್​ಗಳು ಕೆಳಗೆ ಬೀಳುತ್ತಿದ್ದ ದೃಶ್ಯ ಎಂಥ ಗಟ್ಟಿಗರ ಎದೆಯಲ್ಲೂ ನಡುಕ ಹುಟ್ಟಿಸುತ್ತದೆ.

ಘಟನೆಯ ಪ್ರತ್ಯಕ್ಷದರ್ಶಿ ಕ್ರಿಸ್ಟಿನಾ ರೆನ್​ಪ್ರೊ ಈ ವೀಡಿಯೋ ತುಣುಕನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.

ಘಟನೆಯ ಬಗ್ಗೆ ಮಾಹಿತಿಯನ್ನು ಟೈಟಸ್ವಿಲ್ಲೆ ಅಗ್ನಿಶಾಮಕ ಇಲಾಖೆ ತನ್ನ ಫೇಸ್​ಬುಕ್ ಖಾತೆಯಲ್ಲಿ ಹಂಚಿಕೊಂಡಿದೆ.

ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ ಘಟನೆ ನಡೆದ ತಕ್ಷಣ ಈ ಇಬ್ಬರು ಸ್ಕೈಡೈವರ್​​ಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ದುರ್ಘಟನೆಗೆ ಕಾರಣವಾದ ಪ್ಯಾರಾಚೂಟ್​​ನ ದೋಷಗಳ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.

32 ಸೆಕೆಂಡ್​​ಗಳ ಈ ಭಯಾನಕ ವೀಡಿಯೋ ಈಗ ಫೇಸ್​​ಬುಕ್ ಸೇರಿ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು, ಈ ವೀಡಿಯೋ ವೀಕ್ಷಿಸಿದ ನೆಟ್ಟಿಗರು ಈ ಘಟನೆಗೆ ಮರುಕ ವ್ಯಕ್ತಪಡಿಸುತ್ತಿದ್ದು, ಸ್ಕೈಡೈವರ್​ಗಳು ಶೀಘ್ರ ಗುಣಮುಖವಾಗಲೆಂದು ಹಾರೈಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net