

ನವದೆಹಲಿ: ಭಾರತ್ ಸ್ಟೇಜ್-4 (ಬಿಎಸ್-4) ಶ್ರೇಣಿಯ ವಾಹನಗಳ ಮಾರಾಟಕ್ಕೆ ನೀಡಿದ್ದ ಹತ್ತು ದಿನಗಳ ಹೆಚ್ಚುವರಿ ಅವಧಿಯ ಅನುಮತಿಯನ್ನು ಬುಧವಾರ ಹಿಂಪಡೆದಿರುವ ಸುಪ್ರೀಂಕೋರ್ಟ್ ಆ ಅವಧಿಯಲ್ಲಿ ಮಾರಾಟವಾದ ವಾಹನಗಳ ನೋಂದಣಿ ಮಾಡದಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಇದರಿಂದಾಗಿ ನ್ಯಾಯಾಲಯ ಹಿಂಪಡೆದಿರುವ ಅವಧಿಯಲ್ಲಿ ವಾಹನಗಳನ್ನು ಖರೀದಿಸಿದ ಗ್ರಾಹಕರು ಸಂಕಷ್ಟಕ್ಕೆ ಸಿಲುಕಿದಂತಾಗಿದೆ.
ಕರೊನಾ ಹಿನ್ನೆಲೆಯಲ್ಲಿ ವಿಧಿಸಲಾಗಿದ್ದ ಮೊದಲ ಲಾಕ್‌ಡೌನ್ ಅವಧಿಯ ನಂತರ 10 ಹೆಚ್ಚುವರಿ ದಿನಗಳ ಕಾಲ ಬಿಎಸ್-4 ವಾಹನಗಳ ಮಾರಾಟಕ್ಕೆ ವಾಹನ ವರ್ತಕರು ಅನುಮತಿ ಕೋರಿದ್ದನ್ನು ಸರ್ವೋಚ್ಚ ನ್ಯಾಯಾಲಯ ಮಾನ್ಯ ಮಾಡಿತ್ತು. ಆದರೆ ಲಾಕ್‌ಡೌನ್ ಅವಧಿಯಲ್ಲಿ ಮಾ. 31ರವರೆಗೂ ಹಲವು ವಾಹನಗಳನ್ನು ಮಾರಾಟ ಮಾಡಿದ ಪ್ರಕರಣಗಳು ಬೆಳಕಿಗೆ ಂದಿವೆ. ಇದನ್ನೂ ಓದಿ: ನವೆಂಬರ್ ಅಂತ್ಯದವರೆಗೂ ಉಚಿತ ಪಡಿತರ- ಸಚಿವ ಸಂಪುಟ ಅನುಮೋದನೆ
ಈ ಮೂಲಕ ವಾಹನ ವ್ಯಾಪಾರಿಗಳು ಕೋರ್ಟ್ ಆದೇಶಕ್ಕೆ ‘ವಂಚನೆ’ ಎಸಗಿದ್ದಾರೆಂದು ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಪೀಠ ಅಸಮಾಧಾನ ವ್ಯಕ್ತಪಡಿಸಿದೆ. ಲಾಕ್‌ಡೌನ್ ಅವಧಿಯಲ್ಲಿ ವಾಹನಗಳನ್ನು ಮಾರಾಟ ಮಾಡಿದ್ದು ಲಾಕ್‌ಡೌನ್ ನಿಯಮಗಳ ಉಲ್ಲಂಘನೆ ಮಾತ್ರವೇ ಅಲ್ಲ, ಕೋರ್ಟ್ ಆದೇಶದ ಉಲ್ಲಂಘನೆಯೂ ಆಗಿದೆ ಎಂದು ಪೀಠ ಹೇಳಿದೆ.