

Supreme Court: ಇತ್ತೀಚೆಗೆ ಲಡಾಖ್‌ನಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಗಳಿಗೆ ಸಂಬಂಧಪಟ್ಟಂತೆ ಹವಾಮಾನ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರ ಬಂಧನದ ಕುರಿತು, ಅವರ ಪತ್ನಿ ಗೀತಾಂಜಲಿ ಜೆ ವಾಂಗ್ಮೋಗೆ ಬಂಧನದ ಕಾರಣಗಳ ಕುರಿತು ಈ ಮೊದಲೇ ಏಕೆ ನೋಟಿಸ್ ನೀಡಲಿಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರ (ಅ 6) ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.
ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ದ್ವೀಸದಸ್ಯ ಪೀಠವು, ಸೆಪ್ಟೆಂಬರ್ 26 ರಂದು ಬಂಧನಕ್ಕೊಳಗಾದಾಗಿನಿಂದ ತನ್ನ ಪತಿಯನ್ನು ಭೇಟಿಯಾಗಲು ಅವಕಾಶ ನೀಡಿಲ್ಲ ಎಂದು ಗೀತಾಂಜಲಿ ಅಂಗ್ಮೋ ಸಲ್ಲಿಸಿದ ಅರ್ಜಿಯ ಮೇರೆಗೆ ಕೇಂದ್ರ, ಜಮ್ಮು ಮತ್ತು ಕಾಶ್ಮೀರ ಮತ್ತು ರಾಜಸ್ಥಾನಕ್ಕೆ ನೋಟಿಸ್ ಜಾರಿ ಮಾಡಿದೆ.
ಆರ್ಟಿಕಲ್ 32 ರ ಅಡಿಯಲ್ಲಿ ವಾಂಗ್ಮೊ ಸಲ್ಲಿಸಿರುವ ಅರ್ಜಿಯು ಪ್ರಸ್ತುತ ಜೋಧ್‌ಪುರ ಜೈಲಿನಲ್ಲಿರುವ ವಾಂಗ್‌ಚುಕ್ ಅವರನ್ನು ಬಿಡುಗಡೆ ಮಾಡುವಂತೆ ಕೋರಿ ಸಲ್ಲಿಸಲಾದ ಹೇಬಿಯಸ್ ಕಾರ್ಪಸ್ ಅರ್ಜಿಯಾಗಿದ್ದು, ತನ್ನ ಅರ್ಜಿಯಲ್ಲಿ ಆರ್ಟಿಕಲ್ 22 ರ ಅಡಿಯಲ್ಲಿ ಅವರ ಬಂಧನವನ್ನು ಕಾನೂನುಬಾಹಿರವೆಂದು ಹೇಳಿದ್ದು, ಬಂಧನದ ವಿಷಯದಲ್ಲಿ ತನಗಾಗಲಿ, ತಮ್ಮ ಪತಿಗಾಗಲಿ ಯಾವುದೇ ಕಾರಣಗಳನ್ನು ನೀಡಿಲ್ಲ ಎಂದು ತಿಳಿಸಿದ್ದಾರೆ. ವಾಂಗ್ಮೋ ಪರ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್, ಬಂಧನ ನೋಟಿಸ್‌ನ ಪ್ರತಿಯನ್ನು ಪಡೆಯದೆ ಬಂಧನವನ್ನು ಪ್ರಶ್ನಿಸಲು ಸಾಧ್ಯವಿಲ್ಲ, ಕುಟುಂಬಕ್ಕೆ ಯಾವುದೇ ಪ್ರತಿಯನ್ನು ನೀಡಲಾಗಿಲ್ಲ ಮತ್ತು ಇಂಟರ್‌ಕಾಮ್ ಮೂಲಕ ಮಾತ್ರ ಅವರೊಂದಿಗೆ ಮಾತನಾಡಬಹುದು ಎಂದು ಸಿಬಲ್ ಪ್ರತಿಪಾದಿಸಿದರು, ಬಂಧನದ ಆಧಾರಗಳಿಲ್ಲದೆ, ಸಂಬಂಧಿತ ಮಂಡಳಿಯ ಮುಂದೆ ಅವರು ಸರಿಯಾದ ಪ್ರಾತಿನಿಧ್ಯವನ್ನು ಸಲ್ಲಿಸಲು ಸಾಧ್ಯವಿಲ್ಲ ಎಂದು ಒತ್ತಿ ಹೇಳಿದರು.
ಸರ್ಕಾರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ವಾಂಗ್ಚುಕ್ ಅವರನ್ನು ಬಂಧಿಸಲು ಈಗಾಗಲೇ ಕಾರಣಗಳನ್ನು ನೀಡಲಾಗಿದೆ ಮತ್ತು ಅವರನ್ನು ವಶಕ್ಕೆ ಪಡೆದ ನಂತರ ಅವರ ಸಹೋದರ ಅವರನ್ನು ಭೇಟಿಯಾಗಿದ್ದರು ಎಂದು ನ್ಯಾಯಾಲಯಕ್ಕೆ ತಿಳಿಸಿದರು. ವಾಂಗ್‌ಚುಕ್ ಅವರನ್ನು ಭೇಟಿ ಮಾಡಲು ಈಗಾಗಲೇ 12 ಜನರ ಪಟ್ಟಿಗೆ ಅನುಮತಿ ನೀಡಲಾಗಿದ್ದು, ಅವರ ಭೇಟಿಗೆ ಯಾರೂ ತಡೆಯುತ್ತಿಲ್ಲ ಎಂದರು.
ಇದೆಲ್ಲವೂ ಮಾಧ್ಯಮಗಳಲ್ಲಿ ಸುದ್ದಿಯಾಗಲು, ವೈದ್ಯಕೀಯ ಸೌಲಭ್ಯಗಳಿಗಾಗಿ ಮತ್ತು ಪತ್ನಿಯ ಸಂಪರ್ಕದಿಂದ ವಂಚಿತರಾಗಿದ್ದಾರೆ ಎಂದು ಬಿಂಬಿಸುವ ಭಾವನಾತ್ಮಕ ವಾತಾವರಣವನ್ನು ಸೃಷ್ಟಿಸಲು ಇದನ್ನು ಉದ್ದೇಶಪೂರ್ವಕವಾಗಿಯೇ ಮಾಡಲಾಗುತ್ತಿದೆ ಎಂದು ಹೇಳಿದರು.
ಕಾನೂನಿನ ಪ್ರಕಾರ ಬಂಧಿತರಿಗೆ ಪ್ರಕರಣದ ಆಧಾರಗಳನ್ನು ಒದಗಿಸಬೇಕೆಂದು ಕಡ್ಡಾಯಗೊಳಿಸಿದ್ದರೂ, ಪತ್ನಿಗೆ ಪ್ರತಿಯನ್ನು ಒದಗಿಸುವಲ್ಲಿ ಯಾವುದೇ ಅಡ್ಡಿಯಿಲ್ಲ ಎಂದು ಸುಪ್ರೀಂ ಕೋರ್ಟ್ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿತು, ಆದರೆ ಈ ಹಂತದಲ್ಲಿ ಯಾವುದೇ ಆದೇಶಗಳನ್ನು ಹೊರಡಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು, ವಾಂಗ್‌ಚುಕ್ ತನ್ನ ಯಾವುದೇ ವಸ್ತುಗಳು ಇಲ್ಲದೆ ಬಂಧನಕ್ಕೊಳಗಾಗಿದ್ದರಿಂದ ಮತ್ತು ಬಂಧನಕ್ಕೆ ಮುನ್ನ ಉಪವಾಸವಿದ್ದರಿಂದ, ಅವರಿಗೆ ಅಗತ್ಯ ಔಷಧಿಗಳು, ಬಟ್ಟೆಗಳು ಮತ್ತು ವೈದ್ಯಕೀಯ ಆರೈಕೆಯನ್ನು ಒದಗಿಸಬೇಕೆಂದು ನ್ಯಾಯಾಲಯ ಸೂಚಿಸಿದೆ.
ನಿಮ್ಮ ಪತಿಯ ಭೇಟಿಗೆ ಯಾವಾಗ ವಿನಂತಿಸಿದ್ದೀರಿ ಎಂದು ಸುಪ್ರೀಂ ಕೋರ್ಟ್ ವಾಂಗ್ಮೋ ಅವರನ್ನು ಕೇಳಿದಾಗ, ಕಳೆದ ವಾರ ಜೋಧ್‌ಪುರಕ್ಕೆ ಹೋದಾಗ ಭೇಟಿಯಾಗಲು ಪ್ರಯತ್ನಿಸುತ್ತಿದ್ದೆ, ಆದರೆ ಇಲ್ಲಿಯವರೆಗೆ ಅದಕ್ಕೆ ಅವಕಾಶ ನೀಡಿಲ್ಲ ಎಂದು ಉತ್ತರಿಸಿದರು. ಇದಕ್ಕೆ ಪ್ರತಿಕ್ರಿಯೆಯಾಗಿ ಮಾತನಾಡಿದ ಸಾಲಿಸಿಟರ್ ಜನರಲ್ ಇದು ಸುಳ್ಳು ಪ್ರಚಾರ ಎಂದು ಪುನರುಚ್ಚರಿಸಿದರು. ಇದೇ ವೇಳೆ ಪೀಠವು, ಭಾವನಾತ್ಮಕ ವಾದಗಳನ್ನು ಮಾಡಬೇಡಿ ಎಂದು ಎಚ್ಚರಿಸಿತು. ಸುಪ್ರೀಂ ಕೋರ್ಟ್ ಸಿಬಲ್ರನ್ನು ಉದ್ದೇಶಿಸಿ ವಾಂಗ್ಮೋ ಈ ಮೊದಲು ಹೈಕೋರ್ಟ್ ಅನ್ನು ಏಕೆ ಸಂಪರ್ಕಿಸಲಿಲ್ಲ ಎಂದು ಪ್ರಶ್ನಿಸಿತು, ಇದಕ್ಕೆ ಪ್ರತಿಕ್ರಿಯೆ ನೀಡಿದ ಹಿರಿಯ ವಕೀಲರು, ಯಾವ ಹೈಕೋರ್ಟ್? ಕೇಂದ್ರವು ಬಂಧನ ಆದೇಶವನ್ನು ಅಂಗೀಕರಿಸಿದೆ ಎಂದರು. ಇದಕ್ಕೆ ಉತ್ತರಿಸಿದ ಪೀಠ ಅಕ್ಟೋಬರ್ 14 ರಂದು ವಿಚಾರಣೆಯನ್ನು ಮುಂದೂಡಿತು.(ಏಜೆನ್ಸೀಸ್)