ಕಲುಷಿತ ನೀರು ಪೂರೈಸಿ ಸಾವಿಗೆ ಕಾರಣ ಆಗುವುದು ಕಡಿಮೆ ಅಪರಾಧ ಅಲ್ಲ; ನಾಚಿಕೆಗೇಡಿನ ಸಂಗತಿ

Polluted Water
Published on

ಶುದ್ಧ ಕುಡಿಯುವ ನೀರನ್ನು ಪಡೆಯುವುದು ಮೂಲಭೂತ ಹಕ್ಕುಗಳಿಗೆ ಸಮನಾದದ್ದು ಎಂದು ಈ ಹಿಂದೆ ಹಲವು ಸಂದರ್ಭಗಳಲ್ಲಿ ಸುಪ್ರೀಂ ಕೋರ್ಟ್ ತನ್ನ ತೀರ್ಪಗಳಲ್ಲಿ ಸ್ಪಷ್ಟವಾಗಿ ಹೇಳಿದೆ. ಅಷ್ಟೇ ಅಲ್ಲ, ನಾಗರಿಕರಿಗೆ ಕುಡಿಯಲು ಯೋಗ್ಯವಾದ ನೀರನ್ನು ಪೂರೈಸುವುದು ಆಯಾ ರಾಜ್ಯ ಸರ್ಕಾರಗಳ ಹೊಣೆಗಾರಿಕೆ ಎಂಬ ಅಂಶವನ್ನೂ ಸ್ಪಷ್ಟಪಡಿಸಿದೆ. ಆದರೂ ಕರ್ನಾಟಕದ ಹಲವು ಪ್ರದೇಶಗಳಲ್ಲಿ ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರು ಈಗಲೂ ಮರೀಚಿಕೆಯಾಗಿದೆ. ಮಾಹಿತಿ ತಂತ್ರಜ್ಞಾನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿ ಇದ್ದೇವೆಂದು ಹೇಳಿಕೊಳ್ಳುವ ಒಂದು ರಾಜ್ಯ, ತನ್ನ ಜನರಿಗೆ ಶುದ್ಧ ನೀರು ಕೊಡುವುದರಲ್ಲೂ ಸೋತಿದೆ ಎನ್ನುವುದು ನಾಚಿಕೆಗೇಡಿನ ಸಂಗತಿ.

ಇದು ಯಾವುದೇ ಒಂದು ಪಕ್ಷ ಅಥವಾ ಒಂದು ಅವಧಿಯ ಸರ್ಕಾರದ ವೈಫಲ್ಯವಲ್ಲ. ಈವರೆಗೆ ಆಳಿಕೊಂಡು ಬಂದಿರುವ ಎಲ್ಲ ಸರ್ಕಾರಗಳೂ ಇದರ ಹೊಣೆ ಹೊರಬೇಕಾಗುತ್ತದೆ. ಏಕೆಂದರೆ, ಕರ್ನಾಟಕದಲ್ಲಿ ಪ್ರತಿ ವರ್ಷ ಅಲ್ಲಲ್ಲಿ ಕಲುಷಿತ ನೀರು ಕುಡಿದು ಜನರು ಸಾವಿಗೀಡಾಗುವ ಪ್ರಕರಣಗಳು ಸಂಭವಿಸುತ್ತಲೇ ಇವೆ. ಕಳೆದ ವರ್ಷ ಚಿತ್ರದುರ್ಗದಲ್ಲಿ ಕಲುಷಿತ ನೀರು ಕುಡಿದು ಐವರು ಮೃತಪಟ್ಟು ಇನ್ನೂರಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿದ್ದರು. ಕಳೆದ ತಿಂಗಳು ಮೈಸೂರಿನ ಕೆ. ಸಾಲುಂಡಿ ಗ್ರಾಮದಲ್ಲಿ ಒಬ್ಬ ಮೃತಪಟ್ಟು, 15 ಜನ ಅಸ್ವಸ್ಥಗೊಂಡಿದ್ದರು. ಈಗ ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ಕುದುರೆಮೋತಿ ಗ್ರಾಮದಲ್ಲಿ ಹಲವರು ಕಲುಷಿತ ನೀರು ಕುಡಿದು ಅನಾರೋಗ್ಯಕ್ಕೀಡಾಗಿದ್ದಾರೆ. ಇನ್ನು ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಚಿನ್ನೇನಹಳ್ಳಿಯಲ್ಲಿ ಕಳೆದ ನಾಲ್ಕೈದು ದಿನಗಳಲ್ಲಿ ಕಲುಷಿತ ನೀರಿಗೆ 6 ಜನರು ಬಲಿಯಾಗಿ, ಹಲವಾರು ಜನರು ಆಸ್ಪತ್ರೆ ಸೇರಿದ್ದಾರೆ.

ರಾಜ್ಯ ರಾಜಧಾನಿಯ ಕೆಲವು ಭಾಗಗಳು ಕೂಡ ಈ ಸಮಸ್ಯೆಯನ್ನು ಎದುರಿಸುತ್ತಿವೆ. ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದೆಲ್ಲೆಡೆ ವಾಟರ್ ಆಡಿಟ್ ಮಾಡಿಸುವುದಾಗಿ ಭರವಸೆ ನೀಡಿದ್ದರು. ಆ ಕ್ರಮ ಸ್ವಾಗತಾರ್ಹವಾದರೂ, ಈಗ ನಡೆದಿರುವ ಘಟನೆಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅತ್ಯಗತ್ಯ. ಈ ಎಲ್ಲ ಘಟನೆಗಳಿಗೂ ಸ್ಥಳೀಯ ಮುನಿಸಿಪಾಲಿಟಿ/ ಮಹಾನಗರಪಾಲಿಕೆಯ ಅಧಿಕಾರಿಗಳನ್ನು ಜವಾಬ್ದಾರರನ್ನಾಗಿ ಮಾಡಬೇಕಾಗುತ್ತದೆ. ಅವರ ನಿರ್ಲಕ್ಷ್ಯ ಪರಿಣಾಮವಾಗಿಯೇ ಈ ಸಾವು-ನೋವು ಸಂಭವಿಸಿರುವುದು ಸ್ಪಷ್ಟವಾಗಿದೆ. ಕೆಳಮಟ್ಟದ ಕೆಲವು ನೌಕರರನ್ನು ಅಮಾನತುಗೊಳಿಸುವುದು ಜನರ ಕಣ್ಣೊರೆಸುವ ತಂತ್ರವಾಗಬಹುದೇ ಹೊರತು ಸಮಸ್ಯೆಗೆ ಪರಿಹಾರವಾಗಲಾರದು. ಕಲುಷಿತ ನೀರು ಪೂರೈಸುವ ಮೂಲಕ ಜನರ ಸಾವಿಗೆ ಕಾರಣವಾಗುವುದು ಕಡಿಮೆ ಅಪರಾಧವೇನಲ್ಲ. ಹಾಗಾಗಿ ನಿರ್ದಿಷ್ಟ ಅಧಿಕಾರಿಗಳನ್ನು ಗುರುತಿಸಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಈಗ ಮಳೆಗಾಲ ಆರಂಭವಾಗಿರುವುದರಿಂದ ಅಲ್ಲಲ್ಲಿ ನೀರಿನ ಪೈಪ್​ಗಳು ಒಡೆದಿರುತ್ತವೆ. ಅದರಲ್ಲಿ ಕೊಳಚೆ ನೀರು ಸೇರಿಕೊಳ್ಳುತ್ತದೆ. ಎಲ್ಲೆಲ್ಲಿ ಹೀಗಾಗಿದೆಯೋ ಅಲ್ಲಿ ತಕ್ಷಣವೇ ದುರಸ್ತಿ ಕೈಗೊಳ್ಳುವುದು, ಇಲ್ಲವೇ ಬೇರೆ ಮೂಲಗಳಿಂದ ಸುರಕ್ಷಿತ ನೀರು ಒದಗಿಸುವುದು ಅಧಿಕಾರಿಗಳ ಕರ್ತವ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net