

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಸೇರಿದಂತೆ 13ಕ್ಕೂ ಹೆಚ್ಚು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಇತ್ತ ಪ್ರಕರಣದ ವಿಚಾರಣೆ ತೀವ್ರಗೊಳ್ಳುತ್ತಿದ್ದಂತೆ ಒಂದಿಲ್ಲೊಂದು ವಿಚಾರ ಹೊರಬರುತ್ತಿದ್ದು, ಘಟನೆಗೆ ಸಂಬಂಧಿಸಿದಂತೆ ನಟ ದರ್ಶನ್ ಪುತ್ರ ವಿನೀಶ್ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ವಿನೀಶ್, ನನ್ನ ತಂದೆಯ ಬಗ್ಗೆ ಮಾಡಲಾಗಿರುವ ಎಲ್ಲಾ ಆಕ್ಷೇಪಾರ್ಹ ಕಮೆಂಟ್ಗಳಿಗೆ ಧನ್ಯವಾದಗಳು. ನನಗೆ 15 ವರ್ಷ, ನನಗೂ ಮನಸಿದೆ. ನನಗೂ ಭಾವನೆಗಳಿದೆ ಎಂಬುದನ್ನು ಮರೆತು ಕಮೆಂಟ್ ಮಾಡಿದ್ದೀರಿ. ಈ ಕಷ್ಟದ ಸಮಯದಲ್ಲಿ ನನ್ನ ತಾಯಿ ಮತ್ತು ತಂದೆಗೆ ನಿಮ್ಮ ಬೆಂಬಲದ ಅಗತ್ಯವಿದೆ. ಕಷ್ಟದ ಸಮಯದಲ್ಲಿಯೂ ನನ್ನನ್ನು ಶಪಿಸುವುದರಿಂದ ನೀವೆಲ್ಲರೂ ಬದಲಾಗುವುದಿಲ್ಲ ಎಂದು ವಿನೀಶ್ ದರ್ಶನ್ ಬರೆದುಕೊಂಡಿದ್ದಾರೆ.
ಇತ್ತ ಪ್ರಕರಣ ದಿನ ಕಳೆದಂತೆ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಘಟನೆಗೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿ ಚಿತ್ರದುರ್ಗ ಜಿಲ್ಲೆಯ ಕುರುಬರಹಟ್ಟಿ ನಿವಾಸಿ ರವಿ ಎಂಬಾತ ಪೊಲೀಸರಿಗೆ ಶರಣಾಗಿದ್ದಾನೆ. ಪೊಲೀಸರು ವಿಚಾರಣೆಯನ್ನು ತೀವ್ರಗೊಳಿಸಿದ್ದು, ಪೊಲೀಸ್ ಕಸ್ಟಡಿ ಅಂತ್ಯದ ವೇಳೆಗೆ ಪ್ರಕರಣ ಯಾವೆಲ್ಲಾ ತಿರುವು ಪಡೆದುಕೊಳ್ಳಲಿದೆ ಎಂದು ಕಾದು ನೋಡಬೇಕಿದೆ.