"ಶಿವಾಜಿ ಬಹದ್ದೂರ್" ಚಿತ್ರದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಆಪ್ತಮಿತ್ರ ರಾಜ್ ಬಹದ್ದೂರ್!

Untitled design (8)
Published on

ಬೆಂಗಳೂರು: ಆರೋನ್ ಕಾರ್ತಿಕ್ ನಿರ್ದೇಶನ ಮತ್ತು ಶಿವಪೂರ್ಣ(ಲೋಕೇಶ್), ಮುತ್ತುರಾಜ್ ನಿರ್ಮಾ‌ಣದ "ಶಿವಾಜಿ ಬಹದ್ದೂರ್" ಚಿತ್ರದ ಮುಹೂರ್ತ ಸಮಾರಂಭ ಹಾಗೂ ಪತ್ರಿಕಾಗೋಷ್ಠಿ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿತು. ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರ ಆಪ್ತಮಿತ್ರ ರಾಜ್ ಬಹದ್ದೂರ್ ಅಭಿನಯಿಸಿದ್ದಾರೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎನ್.ಎಂ. ಸುರೇಶ್, ಹಿರಿಯ ನಟ ಮುಖ್ಯಮಂತ್ರಿ ಚಂದ್ರು, ನಿರ್ದೇಶಕ ಹೆಚ್. ವಾಸು, ಸ್ವಸ್ತಿಕ್ ಶಂಕರ್, ನಟ ಷಣ್ಮುಖ ಗೋವಿಂದರಾಜು, ಗಾಯಕ ಆಲೂರು ನಾಗಪ್ಪ, ಸಿರಿ ಮ್ಯೂಸಿಕ್ ಚಿಕ್ಕಣ್ಣ ಸೇರಿದಂತೆ ಸಾಕಷ್ಟು ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.

ಸಿನಿಮಾ ಕುರಿತು ಮಾತನಾಡಿದ ನಿರ್ದೇಶಕ ಆರೋನ್ ಕಾರ್ತಿಕ್, ನಮ್ಮ ಚಿತ್ರದಲ್ಲಿ ಶಿವಾಜಿ ಎಂಬುದು ಪ್ರಧಾನ ಮಂತ್ರಿ ಪಾತ್ರದ ಹೆಸರು. ಬಹದ್ದೂರ್ ಎಂದರೆ ಮುಖ್ಯಮಂತ್ರಿ ಪಾತ್ರದ ಹೆಸರು. ಶಿವಾಜಿ ಪಾತ್ರದ ಧ್ವನಿ ಮಾತ್ರ ಸಿನಿಮಾದಲ್ಲಿ ಕೇಳುತ್ತದೆ. ಬಹದ್ದೂರ್ ಅಂದರೆ ಮುಖ್ಯಮಂತ್ರಿ ಪಾತ್ರದಲ್ಲಿ ರಾಜ್ ಬಹದ್ದೂರ್ ನಟಿಸುತ್ತಿದ್ದಾರೆ. ಪ್ರಪಂಚಕ್ಕೆ ಮಾರಕವಾಗಿರುವ ಉಗ್ರವಾದ(ಭಯೋತ್ಪಾದನೆ) ತಡೆಗಟ್ಟಲು ಹೋರಾಡುವ ಉತ್ತಮ ಸಿಎಂ ಆಗಿ ರಾಜ್ ಬಹದ್ದೂರ್ ಕಾಣಿಸಿಕೊಳ್ಳಲಿದ್ದಾರೆ ಎಂದರು.

ಇದರೊಟ್ಟಿಗೆ ವಿಲನ್ ಪಾತ್ರದಲ್ಲಿ ಖ್ಯಾತ ನಟ ಅಮೀರ್ ಖಾನ್ ಸಹೋದರ ಫೈಸಲ್ ಖಾನ್ ನಟಿಸಲಿದ್ದಾರೆ. "ರಂಗಿನ ರಾಟೆ" ಖ್ಯಾತಿಯ ರಾಜೀವ್ ರಾಥೋಡ್, ಪಲ್ಲವಿ ಪ್ರಕಾಶ್, ಸುಶ್ಮಿತ, ಶೋಭ, ಗಣೇಶ್ ರಾವ್ ಮುಂತಾದವರು ಮುಖ್ಯಭೂಮಿಕೆಯಲ್ಲಿದ್ದಾರೆ. ಸಂಗೀತ ನಿರ್ದೇಶನದ ಜವಾಬ್ದಾರಿಯನ್ನು ನಾನೇ ತೆಗೆದುಕೊಂಡಿದ್ದೇನೆ ಎಂದು ಆರೋನ್ ಕಾರ್ತಿಕ್ ಹೇಳಿದರು.

ರಜನಿಕಾಂತ್ ಹಾಗೂ ತಮ್ಮ ಸ್ನೇಹದ ಕುರಿತು ಒಂದಷ್ಟು ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡ ನಟ ರಾಜ್ ಬಹದ್ದೂರ್, "ರಜನಿ ಅವರಿಗೆ ನಾನು ಈ ಚಿತ್ರದಲ್ಲಿ ನಟಿಸುತ್ತಿರುವ ವಿಷಯ ತಿಳಿಸಿದೆ. ತುಂಬಾ ಖುಷಿಪಟ್ಟರು. ಚಿತ್ರ ಸಿದ್ದವಾದ ಮೇಲೆ ಬಂದು ನೋಡುವುದಾಗಿಯೂ ಹೇಳಿದ್ದಾರೆ. ನಾನು ಈ ಹಿಂದೆ ರಜನಿ ಅವರ ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದ್ದೆ. ಮೈನ್ ಲೀಡ್​ನಲ್ಲಿ ನಟಿಸುತ್ತಿರುವ ಮೊದಲ ಚಿತ್ರವಿದು" ಎಂದರು.

"ನಾನು ನಟಿಸುತ್ತಿರುವ ವಿಷಯ ತಿಳಿದು ಇಲ್ಲಿನ ರಜನಿಕಾಂತ್ ಅಭಿಮಾನಿಗಳು ತುಂಬಾ ಸಂತೋಷ ಪಟ್ಟಿದ್ದಾರೆ. ಈ ಸಿನಿಮಾ ಬಿಡುಗಡೆಗೆ ಕಾಯುತ್ತಿರುವುದಾಗಿಯೂ ಹೇಳಿದ್ದಾರೆ. ರಜನಿ ಅಭಿಮಾನಿಗಳು ಸಿನಿಮಾ ನೋಡಿದರೆ ಖಂಡಿತ ಸಿನಿಮಾ ಗೆದ್ದಂತೆ" ಎಂದು ರಾಜ್ ಬಹದ್ದೂರ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net