More

    ನೀರಿಗಾಗಿ ರಾಜಕೀಯ ನಿವೃತ್ತಿ ವಿಚಾರ, ಕ್ಷೇತ್ರದ ಸಮಸ್ಯೆ ಬಿಚ್ಚಿಟ್ಟ ಶಾಸಕ ಯಶವಂತರಾಯಗೌಡ ಪಾಟೀಲ, ಜನಪರ ಕಾಳಜಿಗೆ ಸಿಎಂ ಸಕಾರಾತ್ಮಕ ಸ್ಪಂದನೆ !

    ವಿಜಯಪುರ: ಭೀಕರ ಬರದ ಸಂದರ್ಭ ಜನ ಜಾನುವಾರುವಿಗೆ ಕುಡಿಯುವ ನೀರು ಹಾಗೂ ಕೃಷಿಗೆ ನೀರಾವರಿ ಕಲ್ಪಿಸದಿದ್ದರೆ ಅಧಿಕಾರದಲ್ಲಿದ್ದೇನು ಪ್ರಯೋಜನ? ಯಾವ ಪುರುಷಾರ್ಥಕ್ಕೆ ರಾಜಕಾರಣ ಮಾಡಬೇಕು? ಅಧಿಕಾರದಲ್ಲಿರುವ ಬದಲು ರಾಜಕೀಯ ನಿವೃತ್ತಿಯೇ ಲೇಸು ಎಂಬ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲರ ಕಳಕಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಸಿಎಂ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಸಮಸ್ಯೆ ಆಲಿಸಿ ಪರಿಹಾರ ಕಲ್ಪಿಸುವ ಭರವಸೆ ನೀಡಿದ್ದಾರೆ.

    ನ. 7 ರಂದು ಜಿಲ್ಲೆಯ ಜನರ ಸಮಸ್ಯೆ, ಬರ, ನೀರಾವರಿ ಮತ್ತು ವಿದ್ಯುತ್ ಸಮಸ್ಯೆ ಸೇರಿದಂತೆ ವಿವಿಧ ಸಮಸ್ಯೆಗಳನ್ನಿಟ್ಟುಕೊಂಡು ಯಶವಂತರಾಯಗೌಡ ಪಾಟೀಲ ಅಸಮಾಧಾನ ತೋಡಿಕೊಂಡಿದ್ದರು. ರಾಜ್ಯ ಮತ್ತು ಕೇಂದ್ರ ಸರ್ಕಾರ ರೈತರ ಸಮಸ್ಯೆಗೆ ಸಮರ್ಪಕವಾಗಿ ಸ್ಪಂದಿಸಬೇಕು. ರೈತರ ವಿಷಯದಲ್ಲಿ ರಾಜಕಾರಣ ಬೇಡ ಎಂದು ಪಕ್ಷಾತೀತವಾಗಿ ಮಾತನಾಡುತ್ತ ನೈಜ ಕಳಕಳಿ ಪ್ರದರ್ಶಿಸಿದ್ದರು. ಮಾತ್ರವಲ್ಲ, ಜನರ ದುಃಖ ದುಮ್ಮಾನಗಳಿಗೆ ಸ್ಪಂದಿಸಲಾಗದಿದ್ದರೆ ಅಧಿಕಾರದಲ್ಲಿದ್ದೇನು ಪ್ರಯೋಜನ ಎಂದಿದ್ದರು. ಇದನ್ನು ಗಮನಿಸಿರುವ ಸಿಎಂ ಸಿದ್ದರಾಮಯ್ಯ ಅವರು ನ. 10 ರಂದು ಯಶವಂತರಾಯಗೌಡ ಪಾಟೀಲರನ್ನು ಬೆಂಗಳೂರಿನ ಕಾವೇರಿ ನಿವಾಸಕ್ಕೆ ಕರೆಯಿಸಿ ಚರ್ಚಿಸಿದ್ದಾರೆ.

    ಕ್ಷೇತ್ರದ ಸಮಸ್ಯೆಗಳ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟಿರುವ ಶಾಸಕ ಯಶವಂತರಾಯಗೌಡರು, ಇಂಡಿ ಶಾಖಾ ಕಾಲುವೆಯ (ಐಬಿಸಿ) ಕಿಮೀ-1.00 ರಿಂದ 172.00 ಕಿಮೀವರೆಗೆ ನಾಲೆಯ ಕೊನೆ ಭಾಗದವರೆಗೆ ನೀರು ಹರಿಸುವುದು, ಗುತ್ತಿ ಬಸವಣ್ಣ ಕಾಲುವೆ (ಐಎಲ್‌ಸಿ) ಕಿಮೀ-1.00 ರಿಂದ 203.00 ಕಿಮೀ ವರೆಗೆ ನಾಲೆಯ ಕೊನೆ ಭಾಗದವರೆಗೆ ನೀರು ಹರಿಸುವುದು, ಮುಳವಾಡ ಏತ ನೀರಾವರಿ ಯೋಜನೆಯ ತಿಡಗುಂದಿ ವಿಸ್ತರಣಾ ಕಾಲುವೆ 56ರಿಂದ 66 ರ ಮುಖಾಂತರ ಕಾಲುವೆಯ ಹಂಜಗಿ, ನಿಂಬಾಳ, ಅಥರ್ಗಾ ಹಾಗೂ ತಡವಲಗಾ ಕೆರೆಗಳಿಗೆ ನೀರು ಹರಿಸುವುದು, ಸ್ಥಗಿತಗೊಂಡಿರುವ ಭುಯ್ಯರ ಕೆರೆ ತುಂಬುವ ಯೋಜನೆಯ ಕಾಮಗಾರಿ ಪುನಾರಂಭಿಸುವುದು, ಹೋರ್ತಿ ರೇವಣಸಿದ್ಧೇಶ್ವರ ಏತ ನೀರಾವರಿ ಯೋಜನೆಯ 1ನೇ ಹಂತದ ಜಾಕವೇಲ್ ಕಾಮಗಾರಿಗೆ ವೇಗ ನೀಡುವುದು, ಇದೇ ಯೋಜನೆಯ ಹಂತ 2ನೇ ಹಾಗೂ 3ನೇ ಹಂತದ ಕಾಮಗಾರಿ ತುರ್ತಾಗಿ ಕೈಗೊಳ್ಳಲು ಡಿಪಿಆರ್‌ಸಿದ್ಧಪಡಿಸಿ ಟೆಂಡರ್ ಕರೆದು ತುರ್ತಾಗಿ ಕಾಮಗಾರಿ ಕೈಗೊಳ್ಳಲು ಕೆಬಿಜೆಎನ್‌ಎಲ್ ಮಂಡಳಿಯ ಸಭೆಯಲ್ಲಿ ಅನುಮೋದನೆ ನೀಡುವುದು, ಇಂಡಿ ತಾಲೂಕಿನ 19 ಸಣ್ಣ ನೀರಾವರಿ ಕೆರೆ ತುಂಬುವ ಯೋಜನೆ ತ್ವರಿತವಾಗಿ ಕೈಗೊಳ್ಳಲು ಬೇಡಿಕೆ ಇರಿಸಿದ್ದಾರೆ.

    ಮುಂದುವರಿದು ಇಂಡಿ ತಾಲೂಕಿನ ಹಂಜಗಿ, ಅರ್ಜನಾಳ, ಗೂಗಿಹಾಳ ಹಾಗೂ ಲೋಣಿ ಕೆಡಿ ನೀರು ಶೇಖರಣಾ ಜಲಾಶಯಗಳಿಗೆ ಇಂಡಿ ಶಾಖಾ ಕಾಲುವೆ ಮುಖಾಂತರ (ಐಬಿಸಿ) ಕೆರೆ ತುಂಬಿಸುವುದು, ಇಂಡಿ-ಸಿಂದಗಿ ತಾಲೂಕಿನ ನದಿ ಭಾಗದ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲು ಮಹಾರಾಷ್ಟ್ರದ ಸರ್ಕಾರದೊಂದಿಗೆ ತುರ್ತಾಗಿ ಮಾತುಕತೆ ನಡೆಸಿ ಉಜನಿ ಜಲಾಶಯದಿಂದ ಭೀಮಾನದಿಗೆ ನೀರು ಹರಿಸುವುದು, ಇಂಡಿ ಪ್ರತ್ಯೇಕ ಜಿಲ್ಲೆ ರಚನೆ ಹಾಗೂ ಇಂಡಿ ಮತ್ತು ಸಿಂದಗಿ ತಾಲೂಕನ್ನು ಆರ್ಟಿಕಲ್ 371 ಜೆ ಅಡಿಯಲ್ಲಿ ಸೇರ್ಪಡೆ ಮಾಡಿ ವಿಶೇಷ ಸೌಲಭ್ಯ ಕಲ್ಪಿಸುವುದು, 2023-24ನೇ ಸಾಲಿಗೆ ಬೆಳೆ ಹಾನಿಗೆ ಪರಿಹಾರ ಕಲ್ಪಿಸುವುದು ಹಾಗೂ ಜಲಧಾರೆ ಯೋಜನೆಯನ್ನು ತುರ್ತಾಗಿ ಕೈಗೊಳ್ಳುವ ಕುರಿತು ಸಿಎಂ ಸಿದ್ದರಾಮಯ್ಯ ಅವರಲ್ಲಿ ಬೇಡಿಕೆ ಇರಿಸಿ ಕೂಲಂಕಷವಾಗಿ ಚರ್ಚಿಸಿದ್ದು ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿದೆ. ಈ ಬಗ್ಗೆ ವಿಜಯವಾಣಿಯೊಂದಿಗೆ ಮಾತನಾಡಿದ ಶಾಸಕ ಯಶವಂತರಾಯಗೌಡ ಪಾಟೀಲ ‘ಜನರ ಕಳಕಳಿ ಮುಂದಿಟ್ಟುಕೊಂಡು ಸುದ್ದಿಗೋಷ್ಠಿ ಮಾಡಿದ ಕುರಿತು ಸಿಎಂ ಸಿದ್ದರಾಮಯ್ಯ ಚರ್ಚಿಸಿದ್ದು ಈ ವೇಳೆ ಸಮಸ್ಯೆಗಳ ಬಗ್ಗೆ ವಿವರಿಸಲಾಯಿತು. ಸಿಎಂ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts