

ವಿಜಯಪುರ: ಬರ ಹಾಗೂ ನೆರೆ ನಿರ್ವಹಣೆ ಆಳುವ ವರ್ಗದ ಮೊದಲ ಆದ್ಯತೆಯಾಗಬೇಕು. ಸರ್ಕಾರ ಯಾವುದೆ ಇರಲಿ ಜನರಿಗೆ ಕುಡಿಯುವ ನೀರು, ವಿದ್ಯುತ್ ಹಾಗೂ ಬೆಳೆಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸದೇ ಹೋದರೆ ಅಧಿಕಾರಿದಲ್ಲಿದ್ದೇನು ಪ್ರಯೋಜನ? ಯಾವ ಪುರುಷಾರ್ಥಕ್ಕಾಗಿ ಅಧಿಕಾರದಲ್ಲಿರಬೇಕು? ಹಾಗೊಂದು ವೇಳೆ ಜನರಿಗಾಗಿ ಅಧಿಕಾರ ತ್ಯಜಿಸಬೇಕಾದ ಸಂದರ್ಭ ಬಂದರೆ ಅದಕ್ಕೂ ಸಿದ್ದ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಅಸಮಾಧಾನ ತೋಡಿಕೊಂಡರು.
ನಾನು ಎಂಥ ಪಕ್ಷ ನಿಷ್ಠ ಎಂಬುದು ತೋರಿಸಿಕೊಡಬೇಕಿಲ್ಲ. ಎರಡು ತಲೆಮಾರಿನಿಂದ ಪಕ್ಷದಲ್ಲಿದ್ದೇವೆ. ಆದರೆ ಜನರ ವಿಷಯಕ್ಕೆ ಬಂದರೆ ಎಂಥದ್ದೇ ತ್ಯಾಗಕ್ಕೂ ಸಿದ್ದ. ಪ್ರಸ್ತುತ ರಾಜ್ಯ ಮಾತ್ರವಲ್ಲ; ದೇಶದ ಬಹುತೇಕ ಕಡೆ ಬರ ಆವರಿಸಿದೆ. ಇಂಥ ಸಂದಿಗ್ದ ಸ್ಥಿತಿಯಲ್ಲಿ ಕೇಂದ್ರ ಸರ್ಕಾರವಿರಲಿ, ರಾಜ್ಯ ಸರ್ಕಾರವಿರಲಿ ಜನರ ನೆರವಿಗೆ ಧಾವಿಸಬೇಕು. ರೈತರ ವಿಷಯದಲ್ಲಿ ರಾಜಕೀಯ ಮಾಡದೇ ಬೆಳೆ ಹಾನಿಗೆ ಪರಿಹಾರ ಕೊಡಬೇಕು. ಇನ್ಪುಟ್ ಸಬ್ಸಿಡಿ ಮೂಲಕ ರೈತರ ಸಹಾಯಕ್ಕೆ ಬರಬೇಕಿದೆ. ಕೇಂದ್ರ ಸರ್ಕಾರ ಕೂಡ ತ್ವರಿತವಾಗಿ ಪರಿಹಾರ ಬಿಡುಗಡೆ ಮಾಡಬೇಕು. ರಾಜ್ಯ ಹಾಗೂ ಕೇಂದ್ರ ಸರ್ಕಾರ ಜಂಟಿಯಾಗಿ ರೈತರ ನೆರವಿಗೆ ಧಾವಿಸಬೇಕೆಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಒತ್ತಾಯಿಸಿದರು.
ರಾಜ್ಯದ ನೀರಾವರಿ ಯೋಜನೆಗಳು ಸಮರ್ಪಕವಾಗಿ ಅನುಷ್ಟಾನವಾಗಬೇಕು. ಏತ ನೀರಾವರಿ ಯೋಜನೆ, ಕೆರೆಗೆ ನೀರು ತುಂಬುವ ಯೋಜನೆ ಸಮರ್ಪಕವಾಗಿ ಅನುಷ್ಟಾನಗೊಳ್ಳದಿದ್ದರೆ ಈ ಯೋಜನೆಗಳಾದರೂ ಏಕೆ? ಜನರಿಗೆ ಏನು ಹೇಳೋದು? ಅಧಿಕಾರದಲ್ಲಿದ್ದು ಪ್ರಯೋಜನವಾದರೂ ಏನು? ಎಂದು ಪ್ರಶ್ನಿಸಿದ ಯಶವಂತರಾಯಗೌಡರು ನೀರು ನಿರ್ವಹಣೆಯಲ್ಲಿ ನಾವು ಸಂಪೂರ್ಣ ವಿಫಲರಾಗುತ್ತಿದ್ದೇವೆ. ನೀರು ಹಂಚಿಕೆಯಲ್ಲಿ ತಾರತಮ್ಯವಾಗುತ್ತಿದೆ. ಆಲಮಟ್ಟಿ ಜಲಾಶಯಕ್ಕಾಗಿ ಅಪಾರ ಭೂಮಿ ಕಳೆದುಕೊಂಡ ವಿಜಯಪುರ ಜಿಲ್ಲೆಯ ಜನರೇ ನೀರಿನಿಂದ ವಂಚಿತರಾಗುತ್ತಿರುವುದು ಖೇದಕರ ಎಂದರು.
ಕಂದಾಯ, ಕೃಷಿ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಬರ ನಿರ್ವಹಣೆಯತ್ತ ಹೆಚ್ಚಿನ ಗಮನ ಹರಿಸಬೇಕು. ಈಗಾಗಲೇ ದಾವಣಗೆರೆ, ಬಾಗಲಕೋಟೆಗೆಲ್ಲ ಭೇಟಿ ನೀಡಿರುವ ಕಂದಾಯ ಸಚಿವರು ಇತರ ಜಿಲ್ಲೆಗಳಿಗೂ ಭೇಟಿ ನೀಡಬೇಕು. ಕೃಷಿ ಸಚಿವರಿಗೆ ಖುದ್ದಾಗಿ ಭೇಟಿ ನೀಡಿ ಬರ ಪರಿಸ್ಥಿತಿ ಬಗ್ಗೆ ವಿವರಿಸಿದ್ದೇನೆ. ವಸ್ತು ಸ್ಥಿತಿ ಗಮನಿಸಿ ಪರಿಹಾರ ಕಂಡುಕೊಳ್ಳಬೇಕಿದೆ. ಮುಂಜಾಗೃತೆ ಕೈಗೊಳ್ಳದೇ ಹೋದರೆ ಭವಿಷ್ಯದಲ್ಲಿ ಕೆಟ್ಟ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದರು.
ಬರ ಮತ್ತು ನೆರೆ ಈ ರಾಜ್ಯದಲ್ಲಿ ಅನೇಕ ವರ್ಷಗಳಿಂದ ಕಾಡುತ್ತಿದೆ. ಹೀಗಾಗಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಚಳಿಗಾಲ ಅಧಿವೇಶನದಲ್ಲಿ ಧ್ವನಿ ಎತ್ತುವುದಾಗಿ ತಿಳಿಸಿದರು.
ವಿದ್ಯುತ್ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಕೈಗೊಂಡ ನಿರ್ಧಾರಕ್ಕೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರಲ್ಲದೇ, ರೈತರ ಕೃಷಿ ಪಂಪ್‌ಸೆಟ್‌ಗೆ ಏಳು ಗಂಟೆ ವಿದ್ಯುತ್ ಪೂರೈಸುವ ತೀರ್ಮಾನ ಶ್ಲಾಘನೀಯ ಎಂದರು.
ಭೀಮಾನದಿಗೆ ಮಹಾರಾಷ್ಟ್ರದಿಂದ ನೀರು ಹರಿಸುವ ಕೆಲಸವಾಗಬೇಕು. ಎರಡೂ ಸರ್ಕಾರಗಳು ಸಮನ್ವಯತೆ ಸಾಧಿಸಬೇಕು. ಪ್ರಾದೇಶಿಕವಾಗಿ, ಭಾಷಾವಾರು ಪ್ರಾಂತ್ಯಗಳನ್ನು ರಚನೆ ಮಾಡಲಾಗಿದೆ ವಿನಃ ನಾವಾಗಲಿ ಮಹಾರಾಷ್ಟ್ರದವರಾಗಲಿ ಬೇರೆ ದೇಶಗಳಲ್ಲಿ ಇಲ್ಲ. ಭೀಮಾ ನದಿಗೆ ಅಡ್ಡಲಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರಗಳೆರಡೂ ಬ್ಯಾರೇಜ್‌ಗಳನ್ನು ನಿರ್ಮಿಸಿಕೊಂಡಿವೆ. ಪರಸ್ಪರ ಮಾತುಕತೆ ಮೂಲಕ ಬ್ಯಾರೇಜ್‌ಗಳ ಭರ್ತಿ ಮಾಡಿಕೊಳ್ಳಬೇಕಿದೆ. ಸದ್ಯದ ಮಾಹಿತಿ ಪ್ರಕಾರ ಡಿಸೆಂಬರ್‌ನಲ್ಲಿ ಕೃಷಿ ಉದ್ದೇಶಿತ ನೀರು ಹರಿಯುವಿಕೆ ಸ್ಥಗಿತಗೊಳ್ಳಲಿದೆ. ಇದರಿಂದ ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ಬಹುತೇಕ ಸ್ಥಗಿತಗೊಳ್ಳಲಿವೆ. ನೀರಿನ ಹಾಹಾಕಾರ ಉಂಟಾಗಲಿದೆ. ಹೀಗಾಗಿ ಈಗಿನಿಂದಲೇ ನೀರು ನಿರ್ವಹಣೆಯತ್ತ ಗಮನ ಹರಿಸಬೇಕೆಂದರು.