

Sunita Williams: ಕಳೆದ ಒಂಬತ್ತು ತಿಂಗಳಿನಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಸಿಲುಕಿಕೊಂಡಿರುವ ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್(Sunita Williams) ಮತ್ತು ಸಹ ಗಗನಯಾತ್ರಿ ಬುಚ್ ವಿಲ್ಮೋರ್ ಮಾರ್ಚ್ 19ರ ಮೊದಲೇ ಭೂಮಿಗೆ ಹಿಂತಿರುಗುತ್ತಾರೆ ಎಂದು ಈ ಹಿಂದೆ ನಾಸಾ ದೃಢಪಡಿಸಿತ್ತು. ಆದರೆ, ಅದು ನಿರೀಕ್ಷಿಸಿದಂತೆ ಮೊದಲಿಗೆ ಸಾಧ್ಯವಾಗಲಿಲ್ಲ. ಆದರೆ, ಈಗ ಇಬ್ಬರೂ ಗಗನಯಾತ್ರಿಗಳನ್ನು ಶೀಘ್ರವೇ ಭೂಮಿಗೆ ಕರೆತರಲು ಪಣತೊಟ್ಟಿದೆ.
ಇಬ್ಬರನ್ನೂ ಭೂಮಿಗೆ ಮರಳಿ ಕರೆತರುವ ಪ್ರಯತ್ನಗಳು ವಿಫಲವಾಗಿದ್ದು. ಈ ಬಾರಿಯ ಪ್ರಯತ್ನ ಸಫಲವಾಗೋದು ಖಚಿತ ಎಂದೇ ಹೇಳಲಾಗಿದೆ. ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರನ್ನು ಭೂಮಿಗೆ ಯಶಸ್ವಿಯಾಗಿ ಕರೆತರಲು ದಾಪುಗಾಲಿಟ್ಟಿರುವ ನಾಸಾ-ಸ್ಪೇಸ್‌ಎಕ್ಸ್, ಮೂರು ದಿನಗಳ ಹಿಂದೆ ಕ್ರೂ-10 ರಾಕೆಟ್ ಬಾಹ್ಯಾಕಾಶಕ್ಕೆ ಉಡಾಯಿಸಲು ಸಿದ್ಧವಾಗಿತ್ತು. ಆದಾಗ್ಯೂ, ಪ್ರತಿಕೂಲ ಹವಾಮಾನ ಮತ್ತು ತಾಂತ್ರಿಕ ಸಮಸ್ಯೆಯಿಂದಾಗಿ ಉಡಾವಣೆಯನ್ನು ಮುಂದೂಡಿತ್ತು. ಆದರೆ, ಈಗ ಕ್ರೂ-10 ಮಿಷನ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.
ನಾಲ್ಕು ಗಗನಯಾತ್ರಿಗಳನ್ನು ಹೊತ್ತ ಫಾಲ್ಕನ್-9 ರಾಕೆಟ್ ಶನಿವಾರ (ಮಾ.15) ಭಾರತೀಯ ಕಾಲಮಾನ ಪ್ರಕಾರ ಬೆಳಗ್ಗೆ 4.33ಕ್ಕೆ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಂಡಿತು. ಡ್ರ್ಯಾಗನ್ ಕ್ಯಾಪ್ಸುಲ್‌ನಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಆನ್ ಮೆಕ್‌ಕ್ಲೇನ್, ನಿಕೋಲ್ ಆಯರ್ಸ್, ಟಕುಯಾ ಒನಿಶಿ ಮತ್ತು ಕಿರಿಲ್ ಪೆಸ್ಕೋವ್ ಎಂಬ ನಾಲ್ವರು ಗಗನಯಾತ್ರಿಗಳು ತೆರಳಿದ್ದಾರೆ. ಆದಾಗ್ಯೂ, ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಮಾರ್ಚ್ 19ರೊಳಗೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಹೊರಡುವ ಸಾಧ್ಯತೆಯಿದೆ ಎಂದು ನಾಸಾ ಮಾಹಿತಿ ಹಂಚಿಕೊಂಡಿದೆ.
ಎಲ್ಲವೂ ಅಂದುಕೊಂಡಂತೆ ಈಡೇರಿದರೆ, ಈ ತಿಂಗಳ 20ರ ನಂತರ ಸುನೀತಾ ಮತ್ತು ಬುಚ್ ಭೂಮಿಯನ್ನು ತಲುಪಲಿದ್ದಾರೆ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).