ಮೊದಲು ನೀವೆಲ್ಲ ಬಾಯಿಮುಚ್ಚಿ! ನಾಲಿಗೆ ಹರಿಬಿಡುವವರ ವಿರುದ್ಧ ಸಿಡಿದೆದ್ದ ಸೈಯದ್​ ಅಜ್ಮಲ್ | Saeed Ajmal

ವಿಜಯವಾಣಿ - 2025-03-14T163941.882
Published on

ಪಾಕಿಸ್ತಾನ: ಇತ್ತೀಚೆಗಷ್ಟೇ ಮುಕ್ತಾಯಗೊಂಡ ಐಸಿಸಿ ಚಾಂಪಿಯನ್ಸ್​ ಟ್ರೋಫಿಯಲ್ಲಿ ಆತಿಥೇಯರಾಗಿ ಕಣಕ್ಕಿಳಿದಿದ್ದ ಪಾಕಿಸ್ತಾನ, ಆರಂಭಿಕ ಹಂತದಲ್ಲೇ ಅತಿಥಿಯರಾಗಿ ಟೂರ್ನಿಯಿಂದ ಹೊರಬಿದ್ದದ್ದು ಸದ್ಯ ಪಾಕ್ ಮಾಜಿ ಹಿರಿಯ ಕ್ರಿಕೆಟಿಗರು (Saeed Ajmal) ಮತ್ತು ಮಾಜಿ ಆಟಗಾರರ ಟೀಕೆ, ಆರೋಪಗಳಿಗೆ ಕಾರಣವಾಗಿದೆ.

ಮೊಹಮ್ಮದ್​ ರಿಜ್ವಾನ್​ ನಾಯಕತ್ವದ ಪಾಕಿಸ್ತಾನ ತಂಡವನ್ನು ಟೀಕಿಸಿರುವ ಪಾಕ್ ಮಾಜಿ ಹಿರಿಯ ಆಟಗಾರರು, ಚಾಂಪಿಯನ್ಸ್​ ಟ್ರೋಫಿ ಗೆಲ್ಲುವುದಿರಲಿ, ಉತ್ತಮ ಪ್ರದರ್ಶನವನ್ನೂ ನೀಡದ ತಂಡದ ವಿರುದ್ಧ ತೀವ್ರ ವ್ಯಂಗ್ಯವಾಡಿದ್ದಾರೆ. ಬಾಬರ್​ ಆಜಂರನ್ನು ವಿರಾಟ್​ ಕೊಹ್ಲಿಗೆ ಹೋಲಿಸಿ ಮಾತನಾಡುವುದು ಸೇರಿದಂತೆ ಇತರೆ ಕ್ರಿಕೆಟಿಗರನ್ನು ಎಳೆದು, ಟೀಕೆ ಮಾಡುವುದನ್ನು ಪಿಸಿಬಿ ಸದಸ್ಯ, ಮಾಜಿ ಹಿರಿಯ ಕ್ರಿಕೆಟಿಗ ಸೈಯದ್​ ಅಜ್ಮಲ್ ವಿರೋಧಿಸಿದ್ದಾರೆ. ​

ಮುಂಬರುವ ನ್ಯೂಜಿಲೆಂಡ್​ ವಿರುದ್ಧದ ಸರಣಿಯಲ್ಲಿ ತಂಡದಿಂದ ಬಾಬರ್​ರನ್ನು ಕೈಬಿಟ್ಟಿರುವ ಪಾಕ್ ಮ್ಯಾನೇಜ್​ಮೆಂಟ್​ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಅಜ್ಮಲ್​, ಸಚಿನ್ ತೆಂಡೂಲ್ಕರ್ ಅವರಿಗೆ ಪ್ರತಿ ಪಂದ್ಯದಲ್ಲೂ ಶತಕ ಗಳಿಸಲು ಸಾಧ್ಯವಾಗಲಿಲ್ಲ. ಹಾಗಿದ್ದ ಮೇಲೆ ಬಾಬರ್​ರನ್ನು ಏಕೆ ಪದೇ ಪದೇ ಟೀಕಿಸಲಾಗುತ್ತಿದೆ? ಪಾಕಿಸ್ತಾನಿ ಕ್ರಿಕೆಟ್ ಅನ್ನು ವಿಶ್ವಾದ್ಯಂತ ಖ್ಯಾತಿಗೆ ತಂದ ಬಾಬರ್ ಅವರ ಆತ್ಮವಿಶ್ವಾಸಕ್ಕೆ ಧಕ್ಕೆ ತರುವ ರೀತಿಯಲ್ಲಿ ವರ್ತಿಸುವುದನ್ನು ಮೊದಲು ನಿಲ್ಲಿಸಿ" ಎಂದಿದ್ದಾರೆ.

ಬಾಯಿಗೆ ಬೀಗ ಹಾಕಿ

"ಪ್ರತಿಯೊಬ್ಬ ಕ್ರಿಕೆಟಿಗನು ತನ್ನ ವೃತ್ತಿಜೀವನದಲ್ಲಿ ಕಠಿಣ ಹಂತವನ್ನು ಎದುರಿಸಬೇಕಾಗುತ್ತದೆ. ಅದು ಅನಿವಾರ್ಯ. ಯಾವ ಆಟಗಾರನೂ ಸಹ ತನ್ನ ವೃತ್ತಿಜೀವನದುದ್ದಕ್ಕೂ ಅದ್ಭುತವಾಗಿ ಆಡಲು ಸಾಧ್ಯವಿಲ್ಲ. ಎಲ್ಲ ಸಮಯದಲ್ಲೂ ಅವರು ಶತಕ ಬಾರಿಸಬೇಕು ಎಂದು ನಿರೀಕ್ಷಿಸುವುದನ್ನು ಮೊದಲು ಬಿಡಿ. ಪಾಕಿಸ್ತಾನ ಕ್ರಿಕೆಟ್​ಗೆ ಬಾಬರ್​ ಸ್ಟಾರ್​ ಆಟಗಾರ. ನೀವು ಅವರನ್ನು ಇಷ್ಟೊಂದು ಕೀಳಾಗಿ ಕಾಣಬೇಡಿ. ಈ ವಿಷಯದಲ್ಲಿ ನಮ್ಮ ಮಾಜಿ ಕ್ರಿಕೆಟಿಗರು ಬಾಯಿ ಮುಚ್ಚಿಕೊಂಡರೆ ಉತ್ತಮ" ಎಂದು ಅಜ್ಮಲ್ ಕಟುವಾಗಿ ಟೀಕಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net