ಮಹಾಕುಂಭ ಮೇಳದಲ್ಲಿ ಕಣ್ಮರೆಯಾಗಿದ್ದ ಮಹಿಳೆ ಕಡೆಗೂ ಪ್ರತ್ಯಕ್ಷ! ತಾಯಿ-ಮಗನನ್ನು ಸೇರಿಸಿದ್ದೇ ಅಂತರ್ಜಾಲ | Lost Women

ವಿಜಯವಾಣಿ - 2025-03-14T153154.405
Published on

Lost Women: ಮಹಾಕುಂಭ ಮೇಳದಲ್ಲಿ ಫೆ.23ರಂದು ಕಾಣೆಯಾಗಿದ್ದ ಬಿಹಾರದ ಮಹಿಳೆಯೊಬ್ಬರು ಇದೀಗ 15 ದಿನಗಳ ಬಳಿಕ ಜಾರ್ಖಂಡ್‌ನಲ್ಲಿ ಪತ್ತೆಯಾಗಿದ್ದಾರೆ. ಜನಜಂಗುಳಿ ಮಧ್ಯೆ ನಾಪತ್ತೆಯಾಗಿದ್ದ ತಾಯಿಯನ್ನು ಎಷ್ಟೇ ಹುಡುಕಿದರೂ ಸಿಗುತ್ತಿಲ್ಲ ಎಂದು ದೂರು ನೀಡಿ, ಕಣ್ಣೀರಿಟ್ಟಿದ್ದ ಮಗನಿಗೆ ಕಡೆಗೂ ತಾಯಿ ಸಿಕ್ಕಿದ್ದಾರೆ. ಅದಕ್ಕೆ ಅಂತರ್ಜಾಲವೇ ಕಾರಣ.

ಬಿಹಾರದ ರೋಹ್ತಾಸ್ ಜಿಲ್ಲೆಯ ನಿವಾಸಿ ಲಖ್‌ಪತೋ ದೇವಿ ಫೆಬ್ರವರಿ 23ರಂದು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭ ಮೇಳಕ್ಕೆ ತನ್ನ ಕುಟುಂಬದೊಂದಿಗೆ ಪ್ರಯಾಣಿಸಿದ್ದರು. ಧಾರ್ಮಿಕ ಆಚರಣೆಯಲ್ಲಿ ಜನಸಾಗರವೇ ಸೇರಿದ್ದರಿಂದ ತಮ್ಮ ಸಂಬಂಧಿಕರಿಂದ ಬೇರ್ಪಟ್ಟ ದೇವಿ, ಮತ್ತೆ ಕುಟುಂಬದ ಸದಸ್ಯರನ್ನು ಸೇರಲು ಸಾಧ್ಯವಾಗಲಿಲ್ಲ. ಭಕ್ತಸಾಗರವೇ ತುಂಬಿ ಹೋಗಿದ್ದ ಕುಂಭಮೇಳದಲ್ಲಿ ಮಹಿಳೆಯನ್ನು ಪತ್ತೆಹಚ್ಚಲು ಸಾಧ್ಯವಾಗದ ಪೊಲೀಸರು ಆಕೆಯ ಭಾವಚಿತ್ರವನ್ನು ಎಲ್ಲೆಡೆ ಹಂಚಿದ್ದರು.

ಮಾರ್ಚ್ 10ರಂದು, ಜಾರ್ಖಂಡ್‌ನ ಗರ್ವಾ ಜಿಲ್ಲೆಯಲ್ಲಿ ಲಖ್‌ಪತೋ ದೇವಿ ಪತ್ತೆಯಾಗಿದ್ದಾರೆ ಎಂಬ ವರದಿಗಳು ಕುಟುಂಬಸ್ಥರಿಗೆ ಲಭಿಸಿತು. ಪ್ರಯಾಗ್‌ರಾಜ್‌ನಿಂದ ಸರಿಸುಮಾರು 310 ಕಿಮೀ ಮತ್ತು ರೋಹ್ತಾಸ್‌ನಿಂದ 110 ಕಿ.ಮೀ. ದೂರದ ಬಹಿಯಾರ್ ಖುರ್ದ್ ಗ್ರಾಮದಲ್ಲಿ ಪತ್ತೆಯಾದ ಮಹಿಳೆ, ತಾನು ಹೇಗೆ ಇಲ್ಲಿಗೆ ಬಂದೆ ಎಂಬುದೇ ತಿಳಿದಿಲ್ಲ ಎಂದು ಅಳಲು ವ್ಯಕ್ತಪಡಿಸಿದ್ದರು. ಸರಪಂಚ ಸೋನಿ ಎಂಬ ಮಹಿಳೆಯ ನಿರಂತರ ಪ್ರಯತ್ನದಿಂದ ದೇವಿ ಮತ್ತು ಅವರ ಕುಟುಂಬಸ್ಥರು ಈಗ ಮತ್ತೆ ಒಂದಾಗಿದ್ದಾರೆ.

ಸೋನಿ ಪತಿ ವೀರೇಂದ್ರ ಬೈತಾ ಅವರು ಮಾತನಾಡಿ, "ನಾಪತ್ತೆಯಾದ ಮಹಿಳೆ ಗೊಂದಲಮಯ ಸ್ಥಿತಿಯಲ್ಲಿ ಗರ್ವಾಕ್ಕೆ ಬಂದಿದ್ದರು. ಅವರು ದಿಗ್ಭ್ರಮೆಗೊಂಡಂತೆ ಇದ್ದದ್ದು ನಮಗೆ ತಿಳಿಯಿತು. ನನ್ನ ಪತ್ನಿ ಅವರಿಗೆ ಆಹಾರ ಮತ್ತು ಉಳಿಯಲು ಜಾಗ ಕೂಡ ಮಾಡಿಕೊಟ್ಟರು. ಈಕೆ ಎಲ್ಲಿಯವರು? ಇವರ ಕುಟುಂಬಸ್ಥರು ಯಾರು ಎಂದು ತಿಳಿಯಲು ನಾವು ಜಾಲತಾಣಗಳ ಮೊರೆ ಹೋದೆವು. ಅಲ್ಲಿ ಅವರ ಫೋಟೋ ನೋಡಿದ ಬಳಿಕ ಅವರ ಕುಟುಂಬಸ್ಥರನ್ನು ಸಂಪರ್ಕಿಸಲು ಮುಂದಾದೆವು" ಎಂದು ಹೇಳಿದರು.

ಮಹಿಳೆ ಕಾಣೆಯಾದ ವೈರಲ್ ಪೋಸ್ಟ್ ನೋಡಿದ ಸೋನಿ, ಅವರನ್ನು ಸಂಪರ್ಕಿಸಿ, ಗರ್ವಾಕ್ಕೆ ಬರುವಂತೆ ದೂರವಾಣಿ ಕರೆಯಲ್ಲಿ ಹೇಳಿದ್ದರು. ಅಂತೆಯೇ ಸ್ಥಳಕ್ಕೆ ಆಗಮಿಸಿದ ಮಹಿಳೆಯ ಪುತ್ರ ರಾಹುಲ್ ಕುಮಾರ್, ತನ್ನ ತಾಯಿಯನ್ನು ಮನೆಗೆ ಕರೆದುಕೊಂಡು ಬಂದಿದ್ದಾರೆ. ಎರಡು ವಾರಗಳಿಂದ ಕಣ್ಣೀರಿಡುತ್ತಿದ್ದ ಕುಟುಂಬಸ್ಥರಲ್ಲಿ ಈಗ ಮಂದಹಾಸ, ಸಂಭ್ರಮ ಮನೆಮಾಡಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net