2ನೇ ಬಾರಿ ಮಾಸ್ಕ್​ ಉಲ್ಲಂಘಿಸಿದ್ರೆ 10 ಸಾವಿರ ರೂ. ದಂಡ: ಭಾನುವಾರ ಲಾಕ್​ಡೌನ್​ ಘೋಷಣೆ

Lockdown
Published on

ಲಖನೌ: ಮಹಾಮಾರಿ ಕರೊನಾ ವೈರಸ್​ ಎರಡನೇ ಅಲೆ ಆತಂಕ ದಿನೇದಿನೆ ಹೆಚ್ಚಾಗುತ್ತಿದೆ. ಸೋಂಕಿತ ಪ್ರಕರಣಗಳ ಜತೆಗೆ ಸಾವಿನ ಸಂಖ್ಯೆಯು ಹೆಚ್ಚಾಗುತ್ತಿರುವುದರಿಂದ ಅನೇಕ ರಾಜ್ಯಗಳು ಕಠಿಣ ಕ್ರಮಗಳ ಮೊರೆ ಹೋಗುತ್ತಿವೆ.

ಇದೀಗ ಉತ್ತರ ಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ್​ ನೇತೃತ್ವದ ಬಿಜೆಪಿ ಸರ್ಕಾರ ಕಠಿಣ ನಿಯಮ ಜಾರಿ ಮಾಡಿದೆ. ಮಾಸ್ಕ್​ ಧರಿಸದೆ ಎರಡನೇ ಬಾರಿ ಸಿಕ್ಕಿಕೊಂಡರೆ 10 ಸಾವಿರ ರೂ. ದಂಡ ವಿಧಿಸಿ ಎಂದು ಸಿಎಂ ಯೋಗಿ ಆದೇಶ ಹೊರಡಿಸಿದ್ದಾರೆ. ಇದರೊಂದಿಗೆ ಭಾನುವಾರದ ಲಾಕ್​ಡೌನ್​ನಂತಹ ಕಠಿಣ ಕ್ರಮವನ್ನು ಜಾರಿ ಮಾಡಲಾಗಿದೆ.

ಮಾಸ್ಕ್​ ಇಲ್ಲದೆ ಮೊದಲ ಬಾರಿ ಸಿಕ್ಕಿಕೊಂಡರೆ 1000 ರೂಪಾಯಿ ದಂಡ ವಿಧಿಸಲಾಗುವುದು. ಒಂದು ವೇಳೆ ಎರಡನೇ ಬಾರಿ ಸಿಕ್ಕಿಕೊಂಡರೆ 10 ಸಾವಿರ ದಂಡ ತೆರಬೇಕಾಗುತ್ತದೆ. ಭಾನುವಾರ ಅಗತ್ಯ ಸೇವೆಗಳು ಮತ್ತು ಕೆಲವೊಂದು ಚಟುವಟಿಕೆಗಳನ್ನು ಹೊರತುಪಡಿಸಿ ಉಳಿದೆಲ್ಲ ಕಾರ್ಯಗಳು ಲಾಕ್​ ಆಗಲಿದೆ.

ನಿನ್ನೆಯಷ್ಟೇ ಮೇ 15ರವರೆಗೆ ಶಾಲೆಗಳನ್ನು ಬಂದ್​ ಮಾಡಿ ಆದೇಶ ಹೊರಡಿಸಲಾಗಿದೆ. ಅಲ್ಲದೆ, ಬೋರ್ಡ್​ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಉತ್ತರ ಪ್ರದೇಶದಲ್ಲಿ ಗುರುವಾರ 22,439 ಹೊಸ ಪ್ರಕರಣಗಳು ಮತ್ತು 104 ಸಾವು ವರದಿಯಾಗಿದ್ದು, ಎರಡನೇ ಅಲೆಯ ಆತಂಕ ಹೆಚ್ಚಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net