

ಬೆಂಗಳೂರು: ಬೇಸಿಗೆ ಶುರುವಾಗಿದೆ. ಉಷ್ಣಾಂಶ ಹೆಚ್ಚಳ ಹಾಗೂ ಗಾಳಿಯಲ್ಲಿ ತೇವಾಂಶ ಕಡಿಮೆ ಆಗಿರುವ ಹಿನ್ನೆಲೆ ಈಗಾಗಲೇ ಜನರಿಗೆ ಹಗಲು ಹಾಗೂ ರಾತ್ರಿ ವೇಳೆ ಸೆಖೆಯ ಅನುಭವವಾಗುತ್ತಿದೆ. ಈ ಬಾರಿ ವಾಡಿಕೆಯಷ್ಟೇ ಸೆಖೆ ಇರಲಿದೆ. ಏಪ್ರಿಲ್ ಮತ್ತು ಮೇನಲ್ಲಿ ಇದು ತುಸು ಹೆಚ್ಚಾಗುವ ಸಾಧ್ಯತೆಯಿದೆ.
ಕಲಬುರಗಿಯಲ್ಲಿ ಶನಿವಾರ ಅತಿ ಹೆಚ್ಚು 37.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಶಿವಮೊಗ್ಗ, ಮಂಡ್ಯ, ಬೀದರ್, ಕೊಪ್ಪಳ, ವಿಜಯಪುರ, ಗದಗ, ರಾಯಚೂರು ಹಾಗೂ ದಾವಣಗೆರೆ ಯಲ್ಲಿ ಸರಾಸರಿ 35-36 ಡಿಗ್ರಿ, ಬೆಂಗಳೂರು, ಚಿತ್ರದುರ್ಗ, ಹಾಸನ, ಬೆಳಗಾವಿ, ಧಾರವಾಡ, ಹಾವೇರಿ, ಮೈಸೂರು ಸೇರಿ ಇನ್ನಿತರ ಜಿಲ್ಲೆಗಳಲ್ಲಿ ಸರಾಸರಿ 31-33 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಈ ಎಲ್ಲ ಜಿಲ್ಲೆಗಳಲ್ಲಿ ವಾಡಿಕೆಯಷ್ಟೇ ಉಷ್ಣಾಂಶ ಹಾಗೂ ಸೆಖೆ ದಾಖಲಾಗಲಿದೆ ಎಂದು ಹವಾಮಾನ ತಜ್ಞ ಡಾ. ಶ್ರೀನಿವಾಸರೆಡ್ಡಿ ವಿಜಯವಾಣಿಗೆ ಮಾಹಿತಿ ನೀಡಿದರು. ಇದನ್ನೂ ಓದಿರಿ ಜಾರಕಿಹೊಳಿಯ ಸಿಡಿ ಮಾಡಿದ ಕಿಂಗ್ಪಿನ್ 44 ಲಕ್ಷ ರೂ. ಹಿಡಿದು ಕಾರು ಖರೀದಿಗೆ ಹೋದ!
ಮಾ.1ರಿಂದ ಮೇ.31ರವರೆಗೆ ಬೇಸಿಗೆ ಕಾಲವಿದೆ. ಕಳೆದ ಫೆ.27 ಮತ್ತು ಫೆ.28 ರಾಜ್ಯದಲ್ಲಿ ಹೆಚ್ಚು ಉಷ್ಣಾಂಶ ದಾಖಲಾಗಿತ್ತು. ಬಳಿಕ ವಾಡಿಕೆಯಂತೆ ಪ್ರತಿನಿತ್ಯ ಉಷ್ಣಾಂಶ ದಾಖಲಾಗುತ್ತಿದೆ. ಈಗಾಗಲೇ ನಮಗೆ ಉಷ್ಣಾಂಶ ಮುನ್ಸೂಚನೆ ವರದಿ ಸಿಕ್ಕಿದೆ. ರಾಜ್ಯದಲ್ಲಿ ಈ ಬಾರಿ ವಾಡಿಕೆಯಷ್ಟೇ ಉಷ್ಣಾಂಶ ಹಾಗೂ ಸೆಖೆ ಇರಲಿದೆ. ಬೆಳಗ್ಗೆ 11ರಿಂದ ಮಧ್ಯಾಹ್ನ 3.30 ಗಂಟೆವರೆಗೆ ಬಿಸಿಲಿನ ಝಳ ಹೆಚ್ಚು ಇರಲಿದೆ. ತಾಪಮಾನ ಹೆಚ್ಚಳವಾಗುವ ಜತೆಗೆ ಅಕಾಲಿಕ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಿದರು.