

ದುಬೈ: ಟಿಕ್ಟಾಕ್ ಬಗ್ಗೆ ಗೊತ್ತಿಲ್ಲದವರು ಬಹುಶಃ ಯಾರೂ ಇಲ್ಲ. ಸರ್ಕಾರಿ ಇಲಾಖೆಗಳು ಸೇರಿ, ಅನೇಕ ಸೆಲೆಬ್ರಿಟಗಳು, ಗಣ್ಯರು ಕೂಡ ಟಿಕ್ಟಾಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯಕ್ಕೆ ಈ ಆ್ಯಪ್ನ್ನು ಭಾರತದಲ್ಲಿ ನಿಷೇಧಿಸಲಾಗಿದೆಯಾದರೂ ಬೇರೆ ದೇಶಗಳಲ್ಲಿ ಟಿಕ್ಟಾಕ್ ತನ್ನ ಹಾವಳಿಯನ್ನು ಮುಂದುವರಿಸಿದೆ. ಇದೀಗ ಈ ಆ್ಯಪ್ಗೆ ದುಬೈನ್ ದೊರೆಯೂ ಎಂಟ್ರಿ ಕೊಟ್ಟಿದ್ದಾರೆ.
ದುಬೈನ ಸುಲ್ತಾನ, ಅರಬ್ ಸಂಯುಕ್ತ ಸಂಸ್ಥಾನದ ಉಪಾಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ರಶೀದ್ ಟಿಕ್ಟಾಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕುರಿತಾಗಿ ಟ್ವಿಟ್ಟರ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ನಾನು ಟಿಕ್ಟಾಕ್ಗೆ ಬಂದಿದ್ದೇನೆ. ಇಲ್ಲಿ ಕೋಟ್ಯಂತರ ಜನರಿದ್ದಾರೆ. ಜನರನ್ನು ತಲುಪಲು ಇದು ಸೂಕ್ತ ವೇದಿಕೆ. ನಾನು ಈ ಆ್ಯಪ್ ಮೂಲಕ ಜನರನ್ನು ತಲುಪಲಿದ್ದೇನೆ. ನನ್ನ 50 ವರ್ಷದ ಸೇವೆಯ ಹಾದಿಯನ್ನು ಪರಿಚಯಿಸಲಿದ್ದೇನೆ. ಜನರಿಗೆ ಸ್ಫೂರ್ತಿ ತುಂಬಲಿದ್ದೇನೆ ಎಂದು ಹೇಳಿದ್ದಾರೆ.
ಶೇಖ್ ಅವರ ಟಿಕ್ಟಾಕ್ ಅಕೌಂಟ್ನಲ್ಲಿ ಎರಡು ವಿಡಿಯೋಗಳನ್ನು ಹಾಕಲಾಗಿದೆ. ಒಂದರಲ್ಲಿ ಹುಲಿ ಸಿಂಹಗಳ ವಿಡಿಯೋವಿದ್ದು, ಪ್ರತಿನಿತ್ಯ ಧನಾತ್ಮಕ ಭಾವದೊಂದಿಗೆ ಏಳಬೇಕೆಂದು ಶೇಖ್ ಅವರು ತಮ್ಮ ಧ್ವನಿಯಲ್ಲೇ ಹೇಳಿದ್ದಾರೆ. ಎರಡನೇ ವಿಡಿಯೋದಲ್ಲಿ ಕರೊನಾ ಸೋಂಕಿನ ಬಗ್ಗೆ ಜಾಗ್ರತೆ ವಹಿಸುವಂತೆ ಅವರು ಕೇಳಿಕೊಂಡಿದ್ದಾರೆ. (ಏಜೆನ್ಸೀಸ್)