

ವಾಷಿಂಗ್ಟನ್: ಅಪ್ಪ ಕೊನೆಯುಸಿರೆಳೆಯುವ ಸ್ಥಿತಿಯಲ್ಲಿದ್ದಾನೆ ಎನ್ನುವಾಗ, ಆತ ತನ್ನ ಮಗನಿಗೆ ಏನು ಕೊಡಬಹುದು? ಯಾವುದೋ ಸೀಕ್ರೇಟ್ ಅಥವಾ ಎಲ್ಲಿಯೂ ಬಚ್ಚಿಟ್ಟಿರುವ ಹಣದ ಬಗ್ಗೆಯೋ ಅಥವಾ ಬ್ಯಾಂಕ್ ಡೀಟೇಲ್ಸ್ ಕೊಡಬಹುದು. ಆದರೆ ಇಲ್ಲೊಬ್ಬ ಅಪ್ಪ ಮಾತ್ರ ಡಿಫರೆಂಟ್. ಈತ ಸಾಯುವುದಕ್ಕೂ ಮುನ್ನ ತನ್ನ ಮಗನಿಗೆ ಬಿಯರ್ ಕುಡಿಯಲು ಹಣ ಕೊಟ್ಟಿದ್ದಾನೆ.
ಅಮೆರಿಕದ ಮ್ಯಾಸಚೂಸೆಟ್ಸ್‌ನಲ್ಲಿ ವಾಸಿಸುವ ಮ್ಯಾಟ್‌ನ ತಂದೆ ಜಾನ್ ಗುಡ್‌ಮನ್ ಆರು ವರ್ಷಗಳ ಹಿಂದೆ ಸಾವನ್ನಪ್ಪಿದ್ದಾನೆ. ಆ ಸಮಯಕ್ಕೆ ಮ್ಯಾಟ್ಗೆ 15 ವರ್ಷ ವಯಸ್ಸಾಗಿತ್ತಂತೆ. ಮಗನಿಗೆ 21 ವರ್ಷ ವಯಸ್ಸಾದಾಗ ಮೊದಲ ಬಿಯರ್ನ್ನು ತಾನೇ ಕೊಡಿಸಬೇಕೆಂಬ ಆಸೆ ಅಪ್ಪನಿಗಿತ್ತಂತೆ. ಆದರೆ ಕ್ಯಾನ್ಸರ್ ಕಾರಣದಿಂದಾಗಿ ಆತ ಅಕಾಲಿಕ ಮರಣವಾಗಿದ್ದಾನೆ.
ಜಾನ್ ಸಾಯುವ ಸಮಯದಲ್ಲಿ ಆತನ ಪತ್ನಿ ಮತ್ತು ಮಗಳು ಆತನ ಬಳಿ ಇದ್ದರಂತೆ. ಆಗ ಮಗನನ್ನು ನೆನಪಿಸಿಕೊಂಡ ಜಾನ್, 10 ಡಾಲರ್ನ್ನು (ಸರಿಸುಮಾರು 736 ರೂಪಾಯಿ) ಮಗಳ ಕೈಗಿತ್ತು, "ನನ್ನ ಮಗನಿಗೆ 21 ವರ್ಷ ತುಂಬಿದಾಗ ಈ ಹಣದಲ್ಲೇ ಮೊದಲ ಬಿಯರ್ ಖರೀದಿಸಿ ಕುಡಿಯಲು ಹೇಳು" ಎಂದು ಹೇಳಿದ್ದಾನೆ. ನಂತರ ಕಣ್ಣು ಮುಚ್ಚಿದ್ದಾನೆ.
ಅಪ್ಪ ಹಣ ಕೊಟ್ಟಿರುವ ವಿಚಾರವನ್ನು ಆರು ವರ್ಷಗಳ ಕಾಲ ಮ್ಯಾಟ್ನಿಂದ ಮುಚ್ಚಿಟ್ಟಿದ್ದ ಅಕ್ಕ ಮತ್ತು ಅಮ್ಮ ಇತ್ತೀಚೆಗೆ ವಿಚಾರವನ್ನು ಮಗನಿಗೆ ತಿಳಿಸಿದ್ದಾರೆ. ಮ್ಯಾಟ್‌ನ 21ನೇ ಜನ್ಮದಿನಕ್ಕೆ ಆ ಹಣವನ್ನು ಕೊಟ್ಟು ಬಿಯರ್ ಕುಡಿಯುವಂತೆ ತಿಳಿಸಿದ್ದಾರೆ. ಈ ವಿಚಾರವನ್ನು ಮ್ಯಾಟ್ ತನ್ನ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾನೆ. (ಏಜೆನ್ಸೀಸ್)