

ಪುಣೆ: ಭೀಮಾ ಕೋರೇಗಾಂವ್ ಕೇಸ್ನ ಆರೋಪಿ ಸುಧಾ ಭಾರದ್ವಾಜ್ ಅವರು ಮಧುಮೇಹ ಮತ್ತು ಇಸ್ಚೆಮಿಕ್ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರಿಗೆ ಜೈಲಿನಲ್ಲೇ ಸೂಕ್ತ ಚಿಕಿತ್ಸೆ ಒದಗಿಸಲಾಗುತ್ತಿದೆ ಎಂದು ಜೈಲು ಅಧಿಕಾರಿಗಳು ಕೋರ್ಟ್ಗೆ ತಿಳಿಸಿದ್ದಾರೆ.
ಜಸ್ಟೀಸ್ ಎಸ್.ಎಸ್.ಶಿಂಧೆ ಮತ್ತು ಜಸ್ಟೀಸ್ ಎಸ್.ಪಿ.ತಾವಡೆ ಅವರನ್ನು ಒಳಗೊಂಡ ಡಿವಿಷನ್ ಬೆಂಚ್ಗೆ ಮುಂಬೈ ಬೈಕುಲಾ ಜಿಲ್ಲಾ ಕಾರಾಗೃಹದ ವೈದ್ಯಕೀಯ ಅಧಿಕಾರಿ ಈ ಕುರಿತ ವರದಿಯನ್ನು ಸಲ್ಲಿಸಿದ್ದಾರೆ. ಭಾರದ್ವಾಜ್ ಅವರು ಸಲ್ಲಿಸಿದ್ದ ಕ್ರಿಮಿನಲ್ ಅಪೀಲ್ನ ವಿಚಾರಣೆ ಕೈಗೆತ್ತಿಕೊಂಡಿರುವ ಕೋರ್ಟ್ ಜೈಲಿನ ಅಧಿಕಾರಿಗಳಿಂದ ಭಾರದ್ವಾಜ್ ಅವರ ಆರೋಗ್ಯ ವರದಿ ಕೇಳಿತ್ತು. ಜೈಲಿನೊಳಗೆ ಸಾಮಾಜಿಕ ಅಂತರ ಸೇರಿ ಒಟ್ಟಾರೆ ಸ್ಥಿತಿಗತಿ ವಿವರ ಸಲ್ಲಿಸುವಂತೆ ಸೂಚಿಸಿತ್ತು.
ಇದನ್ನೂ ಓದಿ: ಎಸ್ಐಟಿ ರಚನೆಗೆ ಸುಪ್ರೀಂ ಅಸಮ್ಮತಿ
ಸುಧಾ ಭಾರದ್ವಾಜ್ ಅವರನ್ನು ಫರೀದಾಬಾದ್ನ ಅವರ ಮನೆಯಿಂದ 2018ರ ಆಗಸ್ಟ್ 28 ರಂದು ಬಂಧಿಸಲಾಗಿತ್ತು. ಆರಂಭದಲ್ಲಿ ಅವರನ್ನು ಯೆರವಾಡಾ ಜೈಲಿನಲ್ಲಿ ಇರಿಸಲಾಗಿತ್ತು. ತರುವಾಯ ಬೈಕುಲಾ ಜೈಲಿಗೆ ಸ್ಥಳಾಂತರಿಸಲಾಗಿದೆ. ಸುಧಾ ಭಾರದ್ವಾಜ್ ಆರೋಗ್ಯ ನೆಲೆಯಲ್ಲಿ ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿಯನ್ನು ಮೇ 29ರಂದು ವಿಶೇಷ ಎನ್ಐಎ ಕೋರ್ಟ್ ತಿರಸ್ಕರಿಸಿತ್ತು.
ಇದನ್ನೂ ಓದಿ: ನಕ್ಸಲರ ಜತೆ ಚಿಂತಕರ ನಂಟು
ಈ ನಡುವೆ, ಸಕ್ಕರೆ, ಅಧಿಕ ರಕ್ತದೊತ್ತಡ, ಪಲ್ಮನರಿ ಟ್ಯೂಬರ್ಕುಲೋಸಿಸ್ ಮುಂತಾದ ಆರೋಗ್ಯ ಸಮಸ್ಯೆಗಳಿವೆ. ಕೋವಿಡ್ ಸೋಂಕು ಬಹುಬೇಗ ತಗುಲಬಹುದಾಗಿದ್ದು, ಆರೋಗ್ಯ ರಕ್ಷಣೆ ಸಂಬಂಧ ಮಧ್ಯಂತರ ಜಾಮೀನು ನೀಡಬೇಕು ಎಂದು ಸುಧಾ ಭಾರದ್ವಾಜ್ ಕೋರಿದ್ದರು. ಆದರೆ, ಜುಲೈ 1ರಂದು ಮತ್ತೆ ಎನ್ಐಎ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೆ, ಕೋವಿಡ್ 19 ಸಂಕಷ್ಟದ ಸಮಯವನ್ನು ದುರ್ಬಳಕೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿತ್ತು. ಮಾವೋವಾದಿ ಸಂಘಟನೆಗಳ ಜತೆಗಿನ ಸಂಪರ್ಕಕ್ಕೆ ಸಂಬಂಧಿಸಿದ ಎಲ್ಲ ಸಾಕ್ಷ್ಯಗಳೂ ಸುಧಾ ವಿರುದ್ಧ ಇರುವ ಕಾರಣ ಅವರಿಗೆ ಜಾಮೀನು ನೀಡಿದರೆ ತೊಂದರೆಯಾಗುತ್ತದೆ ಎಂದೂ ಎನ್ಐಎ ವಾದಿಸಿದೆ. (ಏಜೆನ್ಸೀಸ್)