

ಡ್ರಗ್ಸ್ ವಿಚಾರವಾಗಿ ಸ್ಯಾಂಡಲ್ವುಡ್ನಲ್ಲಿ ಸಾಕಷ್ಟು ಬೆಳವಣಿಗೆಗಲಾಗುತ್ತಿವೆ. ನಿರ್ದೇಶಕ ಇಂದ್ರಜಿತ್ ಲಂಕೇಶ್ ಚಂದನವನದಲ್ಲೂ ಡ್ರಗ್ಸ್ ದಂಧೆ ನಡೆಯುತ್ತಿದೆ ಎಂದು ಆರೋಪ ಮಾಡಿದ್ದು, ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಇದೆಲ್ಲದರ ಬೆನ್ನಲ್ಲೆ ಇಂದ್ರಜಿತ್ ಲಂಕೇಶ್ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ್ದಾರೆ. ಅಚ್ಚರಿಯ ವಿಚಾರ ಏನೆಂದರೆ, ಅವರೊಂದಿಗೆ ಕಿಚ್ಚ ಸುದೀಪ್ ಸಹ ಇದ್ದಾರೆ.
ಮಠಕ್ಕೆ ಆಗಮಿಸುತ್ತಿದ್ದಂತೆ ಶ್ರೀಗಳ ದರ್ಶನ ಪಡೆದ ಸುದೀಪ್ ಮತ್ತು ಇಂದ್ರಜಿತ್, ಬಳಿಕ ಶ್ರೀಗಳಿಂದ ಸನ್ಮಾನವನ್ನೂ ಸ್ವೀಕರಿಸಿದರು. ಆದರೆ, ಇಬ್ಬರು ಒಟ್ಟಿಗೆ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ್ದರ ಹಿನ್ನೆಲೆ ಏನು? ಎಂಬ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಸಿಕ್ಕಿಲ್ಲ. ಇನ್ನೊಂದು ಕಡೆ ಈ ಭೇಟಿ ಆಕಸ್ಮಿಕಾನಾ ಅಥವಾ ಮಾತನಾಡಿಕೊಂಡೇ ಬಂದಿದ್ದಾರಾ ಎಂಬುದು ಸದ್ಯದ ಕುತೂಹಲ.
ಇನ್ನು ಕರೊನಾ ಹಾವಳಿಯಿಂದಾಗಿ ಹಲವು ಸ್ಟಾರ್ ನಟರು ಈ ವರ್ಷ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿಲ್ಲ. ಸುದೀಪ್ ಸಹ ಇದೇ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದು, ಅಭಿಮಾನಿಗಳ ಆರೋಗ್ಯದ ದೃಷ್ಟಿಯಿಂದ ಸೆ.2ರಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿರಲು ತೀರ್ಮಾನಿಸಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾ ಮೂಲಕ ಸಂದೇಶ ಕಳಿಸಿರುವ ಅವರು, ಈ ಬಾರಿ ಹುಟ್ಟುಹಬ್ಬದ ಸಂಭ್ರಮ ಬೇಡ ಎಂದು ಹೇಳಿದ್ದಾರೆ.
ಅಷ್ಟೇ ಅಲ್ಲ, ಅಭಿಮಾನಿಗಳೆಲ್ಲಾ ಸುರಕ್ಷಿತವಾಗಿ ತಾವು ಇದ್ದಲ್ಲೇ ಶುಭಹಾರೈಸಿ ಎಂದು ಮನವಿ ಮಾಡಿದ್ದಾರೆ. ಸಾಧ್ಯವಿದ್ದರೆ, ಅಭಿಮಾನಿಗಳು ಇರುವ ಜಾಗದಲ್ಲೇ ಅಗತ್ಯವಿರುವವರಿಗೆ ಸಹಾಯ ಮಾಡುವುದಕ್ಕೆ ಕರೆ ನೀಡಿದ್ದಾರೆ. ಮುಂದೊಂದು ದಿನ ಇವೆಲ್ಲಾ ಮುಗಿದ ನಂತರ ಖಂಡಿತ ಭೇಟಿಯಾಗುವುದಾಗಿ ಹೇಳಿದ್ದಾರೆ.