

ಬೆಂಗಳೂರು: ನಟ ಕಿಚ್ಚ ಸುದೀಪ್ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ನಲ್ಲಿ ಹೊಸ ಸಿನಿಮಾದಲ್ಲಿ ನಟಿಸ್ತಾರಾ ಅನ್ನೋ ಪ್ರಶ್ನೆ ಇದೀಗ ಅಭಿಮಾನಿಗಳ ವಲಯದಲ್ಲಿ ಎದ್ದಿದೆ. ಇದಕ್ಕೆ ಕಾರಣ ಹೊಂಬಾಳೆ ಫಿಲ್ಮ್ಸ್ನ ಕಾರ್ತಿಕ್ ಗೌಡ ಹಂಚಿಕೊಂಡಿರುವ ಫೋಟೋ.
ಹೌದು, ಕಾರ್ತಿಕ್ ಗೌಡ ಸುದೀಪ್ ಜತೆಗಿನ ಫೋಟೋವನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಜತೆಗೆ 'ಕಿಚ್ಚ ಸುದೀಪ್ ಅವರೊಂದಿಗೆ ಹೊಸ ಆರಂಭ ಎಂದು' ಬರೆದುಕೊಂಡಿದ್ದಾರೆ. ಕಾರ್ತಿಕ್ ಗೌಡ ಈ ಫೋಟೋ ಪೋಸ್ಟ್ ಮಾಡುತ್ತಿದ್ದಂತೆ ಕಿಚ್ಚನ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ. ಸುದೀಪ್ ಹೊಂಬಾಳೆ ಬ್ಯಾನರ್ನ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ವರ್ಷ ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾ ತೆರೆಗೆ ಬಂದಿತ್ತು. ಬಾಕ್ಸ್ ಆಫೀಸ್ಲ್ಲಿ ಉತ್ತಮ ದಾಖಲೆಯನ್ನೂ ಬರೆದಿತ್ತು. ಮುಂದೆ ಉಪೇಂದ್ರ ಜತೆಗಿನ ಕಬ್ಜ ಸಿನಿಮಾದಲ್ಲಿ ಸುದೀಪ್ ತೆರೆ ಹಂಚಿಕೊಂಡಿದ್ದು, ಸಿನಿಮಾ ಬಿಡುಗಡೆಯಾಗಬೇಕಿದೆ.
ಕೆಜಿಎಫ್ ಸಿನಿಮಾ ನಿರ್ಮಾಣ ಮಾಡುವ ಮೂಲಕ ವಿಶ್ವಮಟ್ಟದಲ್ಲಿ ಹೆಸರು ಮಾಡಿದ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್. ಸದ್ಯ ಹೊಂಬಾಳೆ ಬ್ಯಾನರ್ನಲ್ಲಿ ಬಿಡುಗಡೆಯಾದ ಕಾಂತಾರ ಸಿನಿಮಾ ಎಲ್ಲೆಡೆ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಮುಂದೆ ರಾಘವೇಂದ್ರ ಸ್ಟೋರ್ಸ್, ಸಲಾರ್ ಸಿನಿಮಾ ಬಿಡುಗಡೆಯಾಗಬೇಕಿದೆ. ಹೊಂಬಾಳೆ ಬ್ಯಾನರ್ನಲ್ಲಿ ಮಲಯಾಳಂ ಸೂಪರ್ ಸ್ಟಾರ್ ಫಹದ್ ಫಾಸಿಲ್ ನಟನೆಯ ಧೂಂ ಸಿನಿಮಾ ಇತ್ತೀಚೆಗೆ ಸೆಟ್ಟೇರಿದೆ.
ಈ ಮಧ್ಯೆ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ನಲ್ಲಿ ಹೊಸ ಪ್ಯಾನ್ ಇಂಡಿಯಾ ಸಿನಿಮಾ ಘೋಷಣೆಯಾಗುತ್ತದೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾದಲ್ಲಿ ಕಿಚ್ಚ ಸುದೀಪ್ ಕಾಣಸಿಕೊಳ್ಳುತ್ತಾರೆ ಎಂಬ ಸುದ್ದಿಯಿದ್ದು, ಇದು ನಿಜವಾಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.