ರನೌಟ್​ ಮಾಡದ ದೀಪಕ್ ಚಹರ್; ಗರಂ ಆದ ಕ್ರಿಕೆಟ್ ಫ್ಯಾನ್ಸ್!

Deepak Chahar
Published on

ಇಂದೋರ್: ಭಾರತ - ಸೌತ್​ ಆಫ್ರಿಕಾ ನಡುವಣ ಮೂರನೇ ಟಿ-20 ಪಂದ್ಯದಲ್ಲಿ ಭಾರತ ಆಲೌಟ್ ಆಗುವ ಮೂಲಕ 49 ರನ್​ಗಳ ಅಂತರದಿಂದ ಸೋಲು ಒಪ್ಪಿಕೊಂಡಿತ್ತು. ಈ ಮೂಲಕ 3-0 ಅಂತದಿಂದ ಸರಣಿ ಕೈವಶ ಮಾಡಿಕೊಳ್ಳುವ ಅವಕಾಶವ ಭಾರತ ಕಳೆದುಕೊಂಡಿತು.


ಟಾಸ್​ ಗೆದ್ದ ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಂಡರು. ಆರಂಭದಲ್ಲಿ ಉತ್ತಮ ಲಯ ಕಂಡ ಭಾರತದ ಬೌಲಿಂಗ್, ಕೊನೆಗೆ ಹಳಿ ತಪ್ಪಿತು. 43 ಎಸೆತಗಳಲ್ಲಿ 68 ರನ್ ಬಾರಿಸಿದ ಕ್ವಿಂಟನ್ ಡಿಕಾಕ್, ಭಾರತದ ಬೌಲರ್​ಗಳ ಲೆಕ್ಕಾಚಾರ ಬದಲಿಸಿದರು. ಡಿಕಾಕ್​ ಔಟ್ ಆಗುತ್ತಿದ್ದಂತೆ ರಿಲೀ ರೊಸ್ಸೊ ಅಬ್ಬರಿಸಲು ಆರಂಭಿಸಿದರು. 48 ಎಸೆತ ಆಡಿದ ರೊಸ್ಸೊ ಭರ್ಜರಿ ಶತಕ ಸಿಡಿಸಿ ಮಿಂಚಿದರು. ಇವರಿಗೆ ಟ್ರಿಸ್ಟಾನ್​​ ಸ್ಟಬ್ಸ್​ ಸಾಥ್​ ನೀಡಿದರು. ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಸದುಪಯೋಗಪಡಿಸಿಕೊಂಡ ಸೌತ್ ಆಫ್ರಿಕಾ ತಂಡ, 20 ಓವರ್​​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 227 ರನ್ ಕಲೆ ಹಾಕಿತು.

ರೊಸ್ಸೊ ಅವರಿಗೆ ಉತ್ತಮ ಸಾಥ್ ನೀಡುತ್ತಿದ್ದ ಟ್ರಿಸ್ಟಾನ್​​ ಸ್ಟಬ್ಸ್​ ಅವರನ್ನು 16ನೇ ಓವರ್​ ಬೌಲಿಂಗ್ ಮಾಡುತ್ತಿದ್ದ ದೀಪಕ್ ಚಹರ್ ಅವರಿಗೆ ಔಟ್ ಮಾಡುವ ಅವಕಾಶವಿತ್ತು. ಆದರೆ ಅವರನ್ನು ಔಟ್ ಮಾಡದೇ ದೀಪಕ್ ಚಹರ್ ಹಿಂದೆ ಸರಿದು, ಎಚ್ಚರಿಕೆ ನೀಡಿದ್ದಾರೆ. ಇದೀಗ ದೀಪಕ್ ಚಹರ್ ಅವರ ನಡೆಯನ್ನು ಕ್ರಿಕಟ್ ಪ್ರೇಮಿಗಳು ಟೀಕಿಸುತ್ತಿದ್ದಾರೆ.


ದೀಪಕ್ ಚಹರ್ 16ನೇ ಓವರ್​ನ ಮೊದಲ ಬಾಲ್​ ಮಾಡುವ ಮುನ್ನವೇ ಸ್ಟಬ್ಸ್​ ನಾನ್​ ಸ್ಟ್ರೈಕರ್​ ಎಂಡ್​ನಿಂದ ಕ್ರೀಸ್​ ಬಿಟ್ಟು ಮುಂದೆ ಬಂದಿದ್ದರು. ದೀಪಕ್​ ಚಹರ್​ಗೆ ರನೌಟ್ ಮಾಡುವ ಅವಕಾಶ ಇತ್ತು. ಆದರೆ ಚಹರ್ ಮಾತ್ರ ಔಟ್ ಮಾಡದೆ ಎಚ್ಚರಿಕೆ ನೀಡಿದ್ದಾರೆ. ಐಸಿಸಿ ನೂತನ ನಿಯಮದ ಅನ್ವಯ ಬಾಲ್​ ಎಸೆಯುವ ಮುನ್ನವೇ ಬ್ಯಾಟ್ಸ್​​ಮನ್ ಕ್ರಿಸ್ ಬಿಟ್ಟು ಮುಂದೆ ಬಂದರೆ ರನೌಟ್​ ಮಾಡುವ ಅವಕಾಶ ನೀಡಿದೆ. ಇಷ್ಟಾಗಿಯೂ ಚಹರ್ ಔಟ್ ಮಾಡದೇ ಇರುವುದಕ್ಕೆ ಜಾಲತಾಣದ ಮೂಲಕ ಕ್ರಿಕೆಟ್ ಪ್ರೇಮಿಗಳು ಟೀಕಿಸುತ್ತಿದ್ದಾರೆ. ಚಹರ್ ನೀಡಿದ ಜೀವದಾನದಿಂದ ಟ್ರಿಸ್ಟಾನ್ ಸ್ಟಬ್ಸ್ 18 ಎಸೆತಗಳಲ್ಲಿ 23 ರನ್​ಗಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net