

ಕೃಷ್ಣ ಕ್ಷೌರ ಮಾಡಿಸಿಕೊಂಡು ಮುಂದೆ ಸಾಗಿದ್ದಾನೆ. ಮಾರ್ಗದಲ್ಲಿ ಸುದಾಮ ಎಂಬ ಒಬ್ಬ ಹೂಮಾಲೆ ಮಾಡುವಾತ ಕಂಡಿದ್ದಾನೆ. ದಾಮ ಎಂದರೆ ದಾರ. ಹಗ್ಗ. ಇವನ ಹೆಸರು ಎಷ್ಟು ಚೆನ್ನಾಗಿದೆ ಎಂದರೆ ಅವನು ವೃತ್ತಿಯಿಂದ ಮಾಲೆಗಾರ. ಆದ್ದರಿಂದ ವೃತ್ತಿಗೆ ತಕ್ಕಂತೆ ಸುದಾಮ ಎಂಬ ಹೆಸರು ಬಂದಿದೆ ಎನ್ನುವಂತೆ ಇದ್ದಾನೆ. ಮಾಲೆ ಕಟ್ಟಬೇಕಾದರೆ ಗಟ್ಟಿಯಾದ ದಾರ ಹುಡುಕಬೇಕು.
ಘಂಟೆ ಗಟ್ಟಲೆ ಕುಳಿತು ಮಾಲೆಯನ್ನು ಪೋಣಿಸುತ್ತಾನೆ. ಒಂದು ಕ್ಷಣದಲ್ಲಿ ದಾರ ಪಟ್ ಎಂದು ಹರಿದರೆ ಏನು ಉಪಯೋಗ? ಅದಕ್ಕಾಗಿ ಮಾಲೆ ಕಟ್ಟಲು ಉತ್ತಮವಾದ ಗಟ್ಟಿಯಾದ ದಾರವನ್ನು ಹುಡುಕುತ್ತಿದ್ದ. ಶ್ರೀಕೃಷ್ಣ ಸದಾಮನನ್ನು ಕರೆದ. ಮಾಲೆಗಳನ್ನು ಕೊಡು ಎಂದು ಕೇಳಿದ. ‘ಕಂಸನಿಗಾಗಿ ಈ ಮಾಲೆಗಳನ್ನು ಒಯ್ಯುತ್ತಿದ್ದೇನೆ. ನಾನು ಅವನಿಗೆ ಮಾಲೆಗಳನ್ನು ಕೊಡದೇ ಇದ್ದರೆ ಏನು ಮಾಡುತ್ತಾನೋ ಗೊತ್ತಿಲ್ಲ. ಆದರೆ ಏನಾದರೂ ಮಾಡಲಿ. ನಾನು ಹುಟ್ಟಿದ್ದೇ ಕೃಷ್ಣನ ಸೇವೆಗೆ.
ಎಷ್ಟು ದಿನಗಳಿಂದ ಕಾಯುತ್ತಿದ್ದೆ. ಕೃಷ್ಣನ ದರ್ಶನ ಆಗಿದ್ದೇ ಒಂದು ಮಹಾಭಾಗ್ಯ. ಕೃಷ್ಣ ಮಥುರೆಗೆ ಬರುತ್ತಾನೆ ಎಂದೇ ನಾವು ಮಥುರೆಯಲ್ಲಿ ಹುಟ್ಟಿದ್ದೇವೆ. ಕಂಸನಿಗಾಗಿ ಬಂದವರಲ್ಲ. ಎಂದು ಭಾವಿಸಿ ಕೃಷ್ಣನಿಗೆ ಮಾಲೆಕೊಟ್ಟಿದ್ದಾನೆ. ಮಾಲೆಯನ್ನು ಪಡೆದ ಕೃಷ್ಣ, ‘ನಿನಗೆ ಏನು ಬೇಕು ಕೇಳು ಕೊಡುತ್ತೇನೆ’ ಎನ್ನುತ್ತಾನೆ. ಸುದಾಮ ಕೇಳುತ್ತಾನೆ: ಎಲ್ಲ ಸಜ್ಜನರಲ್ಲಿ ಪ್ರೀತಿ ಹುಟ್ಟುವಂತೆ ಮಾಡು. ನನಗಿಂತ ಚಿಕ್ಕವರಲ್ಲಿ ದಯೆ, ಮಧ್ಯಮರಲ್ಲಿ ಸ್ನೇಹ. ಉತ್ತಮರಲ್ಲಿ ಭಕ್ತಿಯನ್ನು ನೀಡು’. ನಿಷ್ಕಾಮ ಭಕ್ತಿಯಿಂದ ಸುದಾಮ ಕೇಳಿದ್ದನ್ನು ಕೃಷ್ಣ ಕೊಡುತ್ತಾನಲ್ಲದೆ ಐಹಿಕ ಸಂಪತ್ತನ್ನು ಕೊಟ್ಟು ಅನುಗ್ರಹಿಸುತ್ತಾನೆ. ದೇವರು ನಾವು ಬೇಡಿದ್ದನ್ನು ಕೊಡುತ್ತಾನೋ ಇಲ್ಲವೋ? ನಾವು ಬೇಡಿದ್ದು ಅವನಿಗೆ ನೆನಪಿರುತ್ತೋ ಇಲ್ಲವೋ ? ಎನ್ನುವ ಸಂಶಯ ಹೊತ್ತು ನಾವು ಬದುಕುತ್ತಿದ್ದೇವೆ.
ದೇವರು ಸರ್ವಜ್ಞ ಮೂರ್ತಿ. ನಾವು ಬೇಡದೇ ಇದ್ದರೂ ಅವನಿಗೆ ಎಲ್ಲವೂ ಗೊತ್ತು. ಎಂದೇ ಸುದಾಮ ಕೇಳದೇ ಇದ್ದರೂ ಅವನಿಗೆ ಕೊಟ್ಟು ಅನುಗ್ರಹ ಮಾಡಿದ್ದಾನೆ.