

ಸರ್ಕಾರದ ಯೋಜನೆಗಳಲ್ಲಿ ಅವ್ಯವಹಾರ, ಭ್ರಷ್ಟಾಚಾರದ ಅಪಸವ್ಯಗಳು ಆಗಾಗ ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಜನೋಪಯೋಗಿ ಉದ್ದೇಶದ ಯೋಜನೆಗಳು ಅನುಷ್ಠಾನದ ಹಂತದಲ್ಲಿ ಹಳಿ ತಪು್ಪತ್ತವೆ. ಇದರಿಂದ ವ್ಯವಸ್ಥೆ ಮೇಲಿನ ನಂಬಿಕೆ ಕುಸಿಯುತ್ತ ಸಾಗುತ್ತದೆ ಮತ್ತು ಜನನಾಯಕರ ‘ಸುಧಾರಣೆ’ಯ ಭರವಸೆಗಳು ಪೊಳ್ಳು ಎನಿಸಿಬಿಡುತ್ತವೆ. ಇನ್ನು, ಅಕ್ರಮ ಅವ್ಯವಹಾರದಲ್ಲಿ ತೊಡಗಿರುವವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ, ತಪ್ಪಿತಸ್ಥರಿಗೆ ಬಿಸಿ ಮುಟ್ಟಿಸುತ್ತಾರೆ ಎಂಬ ನಂಬಿಕೆ ಸಮಾಜದಲ್ಲಿ ಇದೆ. ಆದರೆ, ಪೊಲೀಸರಿಗಾಗಿ ರೂಪಿಸಿದ ಆರೋಗ್ಯ ಭಾಗ್ಯ ಯೋಜನೆಯನ್ನು, ಪೊಲೀಸರೇ ದುರುಪಯೋಗ ಪಡಿಸಿಕೊಂಡಿರುವ ನಿದರ್ಶನಗಳು ಬೆಳಕಿಗೆ ಬಂದಿವೆ. ಮಾತ್ರವಲ್ಲ, ಲಂಚ ಕೊಟ್ಟರೆ ದಾಖಲಾತಿ ಇಲ್ಲದಿದ್ದರೂ ಮರುಪಾವತಿಗೆ ಅನುಮತಿ ನೀಡುವ ವ್ಯವಸ್ಥೆಯ ಭ್ರಷ್ಟಮುಖವೂ ಅನಾವರಣಗೊಂಡಿದೆ.
ಇದು ಬೇಲಿಯೇ ಎದ್ದು ಹೊಲ ಮೇಯ್ದಂತೆ. ಪೊಲೀಸರು ಕಾನೂನು ಮತ್ತು ನಿಯಮಗಳ ಪರಿಪಾಲಕರು. ಅವರು ಸಮಾಜಕ್ಕೆ ಮಾದರಿ ಆಗಿರಬೇಕೆ ಹೊರತು ವರ್ಚಸ್ಸಿಗೆ ಕುಂದು ತರುವಂಥ ಸ್ಥಿತಿ ತಂದುಕೊಳ್ಳಬಾರದು. ಅಲ್ಲದೆ, ಪೊಲೀಸರಿಂದಲೂ ಲಂಚ ಪಡೆಯುವ ಕರಾಳ ವ್ಯವಸ್ಥೆ ಬೆಳೆಯುತ್ತಿರುವುದು ಚಿಂತಾಜನಕ. ಸರ್ಕಾರ ಇಲ್ಲಿ ಎರಡೂ ಬಗೆಯ ಅವ್ಯವಹಾರದತ್ತ ಗಮನ ಹರಿಸಬೇಕಿದೆ. ಪೊಲೀಸರು ಹಾಗೂ ಅವರ ಅವಲಂಬಿತರ ಉಚಿತ ಆರೋಗ್ಯ ಚಿಕಿತ್ಸೆಗಾಗಿ ಅನುಷ್ಠಾನಕ್ಕೆ ತಂದಿರುವ ‘ಆರೋಗ್ಯ ಭಾಗ್ಯ’ (ಎಬಿವೈ) ಯೋಜನೆಯಡಿ ವೈದ್ಯಕೀಯ ಚಿಕಿತ್ಸಾ ವೆಚ್ಚ ಮರುಪಾವತಿ ವಿಚಾರದಲ್ಲಿ ‘ಕಳ್ಳಾಟ’ ನಡೆಯುತ್ತಿರುವ ಆರೋಪ ಕೇಳಿಬಂದಿದೆ. ಎಲ್ಲ ದಾಖಲಾತಿಗಳು ಸರಿಯಾಗಿದ್ದರೂ ಕ್ಲೇಮ್ ಅರ್ಜಿಯನ್ನು ಪರಿಗಣಿಸಲು ನೂರೆಂಟು ಕಾರಣ ಕೊಟ್ಟು ಲಂಚಕ್ಕಾಗಿ ಪೀಡಿಸುವ ವಿಷಯ ನಿರ್ವಾಹಕರ (ಕ್ಲರ್ಕ್) ದಂಧೆ ಒಂದೆಡೆಯಾದರೆ, ಕೆಲ ಸಿಬ್ಬಂದಿ ಆರೋಗ್ಯ ಭಾಗ್ಯ ಯೋಜನೆ ಜತೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಲ್ಲೂ ಕ್ಲೇಮ್ ಪಡೆದುಕೊಳ್ಳುವ ಅವ್ಯವಹಾರ ನಡೆಯುತ್ತಿದೆ.
ಆರೋಗ್ಯ ಭಾಗ್ಯ ಯೋಜನೆಯಡಿ ಭರಿಸಿದ ಒಟ್ಟು ಮೊತ್ತದಲ್ಲಿ ಶೇಕಡ 70 ರಿಂದ 80 ಮರುಪಾವತಿಯಾಗುತ್ತದೆ. ಅದೇ ರೀತಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಲ್ಲಿ ಭರಿಸಿದ ಮೊತ್ತದಲ್ಲಿ ಶೇ. 30ರಿಂದ 50ರವರೆಗೆ ಮರುಪಾವತಿ ಸಿಗುತ್ತದೆ. ಆದರೆ, ಒಂದು ಕಡೆ ಕ್ಲೇಮ್ ಮಾಡಿದರೆ ಇನ್ನೊಂದು ಕಡೆ ಪಡೆಯಲು ಅವಕಾಶ ಇಲ್ಲ ಎಂಬುದು ಗಮನಾರ್ಹ. ಹೀಗಿದ್ದರೂ, ಲಂಚ, ಪ್ರಭಾವ ಬಳಸಿ ಇಂಥ ಅವ್ಯವಹಾರ ನಡೆಯುತ್ತಿರುವುದು ಖಂಡನೀಯ. ವೈದ್ಯಕೀಯ ಚಿಕಿತ್ಸೆ ಸೇರಿದಂತೆ ಆರೋಗ್ಯಕ್ಕೆ ಸಂಬಂಧಿಸಿದ ಯೋಜನೆಗಳ ಅನುಷ್ಠಾನದಲ್ಲಿ ಪಾರದರ್ಶಕತೆ ಅಗತ್ಯ. ಪೊಲೀಸ್ ಇಲಾಖೆಯಲ್ಲೇ ಈ ಸ್ಥಿತಿಯಾದರೆ, ಉಳಿದ ಕಡೆಗಳಲ್ಲಿ ಭ್ರಷ್ಟಾಚಾರ, ಅವ್ಯವಹಾರ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಇರಬಹುದು ಎಂಬ ಸಂದೇಹವನ್ನೂ ಈ ಬೆಳವಣಿಗೆ ಹುಟ್ಟಿಸಿದೆ. ಆಯುಷ್ಮಾನ್ ಕಾರ್ಡ್ನಂತೆ ಆರೋಗ್ಯ ಭಾಗ್ಯ ಯೋಜನೆಗೂ ಸ್ಮಾರ್ಟ್ ಕಾರ್ಡ್ ನೀಡುವ, ಆ ಮೂಲಕ ನೋಂದಾಯಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಅವಕಾಶ ಕಲ್ಪಿಸಬೇಕು. ಇಂಥ ಅವ್ಯವಹಾರಗಳನ್ನು ತಡೆಗಟ್ಟಿ, ಆಡಳಿತ ಶುದ್ಧೀಕರಣದತ್ತ ಸರ್ಕಾರ ಗಮನ ಹರಿಸಬೇಕು.