

ಮಳವಳ್ಳಿ: ಸರ್ವ ಸಮುದಾಯ ಒಟ್ಟಾಗಿ ಒಗ್ಗೂಡಿ ಜಯಂತಿ ಆಚರಣೆ ಮಾಡುವುದರಿಂದ ಮಾತ್ರ ಶಿವರಾತ್ರಿ ಶಿವಯೋಗಿಗಳ ಜಯಂತ್ಯುತ್ಸವವು ಧಾರ್ಮಿಕ ಪರಂಪರೆಯ ಹಾಗೂ ಸಮಾನತೆಯ ಸಂಕೇತವಾಗಿ ಯಶಸ್ವಿಯಾಗಲು ಸಾಧ್ಯವಾಗುತ್ತದೆ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.
ಪಟ್ಟಣದಲ್ಲಿ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ 1066ನೇ ಜಯಂತಿ ಮಹೋತ್ಸವ ಆಚರಣೆ ಸಂಬಂಧ ಮಂಗಳವಾರ ಪಟ್ಟಣದ ರೈತ ಸಮುದಾಯ ಭವನದ ಬಳಿ ಆಯೋಜಿಸಲಾಗಿದ್ದ ಸರ್ವ ಸಮುದಾಯ ಹಾಗೂ ರಾಜಕೀಯ ಮತ್ತು ರಾಜಕೀಯೇತರ ಮುಖಂಡರ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಇಂದಿನ ಸಭೆಯ ವೇದಿಕೆಯಲ್ಲಿರುವ ಒಬೊಬ್ಬ ಮುಖಂಡರು ಒಬ್ಬರೇ ಜಯಂತಿ ಆಚರಣೆ ವೆಚ್ಚವನ್ನು ಭರಿಸಿಕೊಂಡು ನಿರ್ವಹಣೆ ಮಾಡಲು ಶಕ್ತರಿದ್ದು, ಹಾಗೆ ಮಾಡುವುದರಿಂದ ಏಕ ವ್ಯಕ್ತಿಯ ಜಯಂತಿ ಆಚರಣೆಯಾಗಲಿದೆ. ಹಾಗಾಗಿ ಸರ್ವ ಸಮುದಾಯದ ಸಹಕಾರದಿಂದ ಎಲ್ಲರ ಸಹಮತದ ಜತೆಗೂಡಿ ಆಚರಣೆ ಮಾಡುವುದು ಶಿವರಾತ್ರಿ ಶಿವಯೋಗಿಗಳ ಜಯಂತಿ ಆಚರಣೆಯೂ ಸಂಭ್ರಮದಿಂದ ಕೂಡಿರುತ್ತದೆ ಎಂದು ಸಲಹೆ ನೀಡಿದರು.
ಡಿ.18 ರಿಂದ 5 ದಿನಗಳ ಕಾಲ ಶಿವಯೋಗಿಗಳ ಜಯಂತಿ ಮಹೋತ್ಸವ ನೆರವೇರಲಿದ್ದು, ಅಂದಿನ ಸಮಾರಂಭಕ್ಕಾಗಿ ಸಂಗ್ರಹವಾಗುವ ಆರ್ಥಿಕ ಸಂಪನ್ಮೂಲದಲ್ಲಿ ವೆಚ್ಚವನ್ನು ಭರಿಸಿ ಉಳಿಯುವ ಹಣದ ಅಷ್ಟೇ ಮೊತ್ತವನ್ನು ಶ್ರೀ ಮಠದಿಂದ ಜತೆಗೂಡಿಸಿ ತಾಲೂಕಿನಲ್ಲಿ ಸ್ಮರಣೀಯ ಜನೋಪಯೋಗಿ ಸತ್ಕಾರ್ಯಕ್ಕೆ ಸದ್ವಿನಿಯೋಗ ಮಾಡಲಾಗುವುದು ಎಂದು ತಿಳಿಸಿದರು.
ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ, ಏಳು ವರ್ಷಳ ನಂತರ ಮಂಡ್ಯ ಜಿಲ್ಲೆಯಲ್ಲಿ ಎರಡನೇ ಬಾರಿಗೆ ಶಿವರಾತ್ರೀಶ್ವರರ ಶಿವಯೋಗಿಗಳ ಜಯಂತಿ ಮಹೋತ್ಸವ ಆಚರಣೆಗೆ ಅವಕಾಶ ದೊರೆತಿದ್ದು, ಪಟ್ಟಣದಲ್ಲಿ ನಡೆಯುವ ಸಮಾರಂಭದ ಅಷ್ಟೂ ದಿನಗಳ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಜಗದ್ಗುರುಗಳ ಆಶೀರ್ವಾದದೊಡನೆ ಯಶಸ್ವಿಯಾಗಿ ನಡೆಸಿಕೊಡಲು ಶ್ರಮಿಸುತ್ತೇನೆ ಎಂದರು.
ಮಾಜಿ ಶಾಸಕ ಡಾ.ಕೆ.ಅನ್ನದಾನಿ ಮಾತನಾಡಿ, ನನ್ನ ಅವಯಲ್ಲಿ ತಾಲೂಕು ಕೇಂದ್ರದಲ್ಲಿ ಜಯಂತ್ಯುತ್ಸವ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಕೋವಿಡ್ ಕಾರಣದಿಂದಾಗಿ ಶ್ರೀ ಕ್ಷೇತ್ರದಲ್ಲಿ ಸರಳವಾಗಿ ನಡೆಸಲಾಗಿತ್ತು. ಆ ಹಿನ್ನೆಲೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಜಿಲ್ಲೆಯ ಸಂಸದರೂ ಆಗಿರುವುದರಿಂದ ಸುತ್ತೂರು ಕ್ಷೇತ್ರದಲ್ಲಿ ನಡೆದ ಸಮಾರಂಭದಲ್ಲಿ ಪ್ರಸಕ್ತ ವರ್ಷ ಮಳವಳ್ಳಿಯಲ್ಲಿ ಜಯಂತಿ ಆಚರಿಸಲು ಶ್ರೀಗಳಿಂದ ಅನುಮತಿ ಪಡೆದಿದ್ದರು ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ಐದು ದಿನಗಳು ಜಯಂತ್ಯುತ್ಸ್ಸವ ನಡೆಸುವುದು ಬಹಳ ಕಠಿಣವಾದ ಸಂಗತಿಯಾಗಿದ್ದು, ಇದು ಯಶಸ್ವಿಯಾಗಬೇಕಾದರೆ ಎಲ್ಲ ವರ್ಗದ ಸಮುದಾಯದವರು ಕೈ ಜೋಡಿಸಬೇಕಿದೆ. ಇದರಿಂದ ತಾಲೂಕಿನ ಜನತೆಗೆ ಹೊಸದೊಂದು ಧಾರ್ಮಿಕ ಬೆಳಕು ಮೂಡಲಿದೆ ಎಂದು ಅಭಿಪ್ರಾಯಪಟ್ಟರು.
ಮಾಜಿ ಸಚಿವ ಬಿ.ಸೋಮಶೇಖರ್ ಮಾತನಾಡಿ, ಪ್ರಸ್ತುತ ರಾಜಕೀಯ ಕ್ಷೇತ್ರ ಕಲುಷಿತಗೊಂಡಿದ್ದು, ರಾಜಕೀಯ ಕ್ಷೇತ್ರ ಶುದ್ಧಗೊಳಿಸಲು ಮಠಮಾನ್ಯಗಳ ಗುರುಗಳು ಆಲೋಚಿಸಬೇಕಿದೆ ಎಂದರು.
ಸಭೆಯಲ್ಲಿ ಕನಕಪುರ ದೇಗುಲ ಮಠದ ಕಿರಿಯ ಶ್ರೀ ಚನ್ನಬಸವ ಸ್ವಾಮೀಜಿ , ಕೊಳ್ಳೇಗಾಲ ಬುದ್ಧ ವಿಹಾರ ಕಲ್ಯಾಣ ಸಿಂಗ್ ಬಂತೇಜಿ, ಎಂ.ಎಲ್.ಹುಂಡಿ ಮಠದ ಶ್ರೀ ಗೌರಿಶಂಕರ ಸ್ವಾಮೀಜಿ, ತಾಲೂಕಿನ ವಿವಿಧ ಮಠಾೀಶರು ಹಾಗೂ ಮುಸ್ಲಿಂ ಧರ್ಮ ಗುರುಗಳು ಸೇರಿದಂತೆ ಜೆಡಿಎಸ್ ಪಕ್ಷದ ಹಿಂದುಳಿದ ವರ್ಗದ ರಾಜ್ಯಾಧ್ಯಕ್ಷ ಡಿ.ಜಯರಾಮು, ಪುರಸಭೆ ಅಧ್ಯಕ್ಷ ಪುಟ್ಟಸ್ವಾಮಿ, ಕೆಎಂಎ್ ನಿರ್ದೇಶಕ ವಿಶ್ವನಾಥ, ವೀರಶೈವ ಮಹಾಸಭ ಜಿಲ್ಲಾಧ್ಯಕ್ಷ ಆನಂದ, ತಾಲೂಕು ಅಧ್ಯಕ್ಷ ಮೂರ್ತಿ, ಜಿಪಂ ಮಾಜಿ ಸದಸ್ಯರಾದ ಆರ್.ಎನ್.ವಿಶ್ವಾಸ್, ರವಿ, ಹನುಮಂತು, ಸುಜಾತಾ ಪುಟ್ಟು, ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ನಾಗೇಶ್, ಬಿಜೆಪಿ ರಾಜ್ಯ ನಾಯಕ ಮುನಿರಾಜು, ಯಮದೂರು ಸಿದ್ದರಾಜು ಸೇರಿದಂತೆ ಹಲವರಿದ್ದರು.