

ಬೆಂಗಳೂರು: ಗ್ರಾಮ ಪಂಚಾಯಿತಿಗಳಲ್ಲಿ ಇ-ಸ್ವತ್ತು ತಂತ್ರಾಂಶದಲ್ಲಿ ರೆವಿನ್ಯೂ ಸೈಟುಗಳಿಗೆ ಅಕ್ರಮವಾಗಿ ಇ-ಖಾತಾ ವಿತರಿಸುವ ದಂಧೆ ಮುಂದುವರಿದಿದೆ. ಇದು ಸಬ್ ರಿಜಿಸ್ಟ್ರಾರ್‌ಗಳಿಗೆ ದೊಡ್ಡ ತಲೆನೋವಾಗಿದೆ.
ಆನೇಕಲ್ ತಾಲೂಕು ಸರ್ಜಾಪುರ ಗ್ರಾಮದಲ್ಲಿ ರಿಯಲ್ ಎಸ್ಟೇಟ್ ಕಂಪನಿ ಬಿಎಂಆರ್‌ಡಿಎ ಅಥವಾ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆಯದೆ ಲೇಔಟ್ ನಿರ್ಮಾಣ ಮಾಡಿದೆ. ಇದರಲ್ಲಿನ ಸೈಟ್‌ಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಇ-ಸ್ವತ್ತಿನಲ್ಲಿ ಇ-ಖಾತಾ ಪಡೆದು ಉಪ ನೋಂದಣಿ ಕಚೇರಿಯಲ್ಲಿ ಕ್ರಯ ಪತ್ರ ಮಾಡಿಸಿದ್ದಾರೆ.
ಈ ಬಗ್ಗೆ ಸರ್ಜಾಪುರ ಗ್ರಾಮ ಪಂಚಾಯಿತಿ ಪಿಡಿಒ ಕೆ.ಎನ್. ನಂಜರೆಡ್ಡಿ, ಸರ್ಜಾಪುರ ಠಾಣೆಗೆ ದೂರು ನೀಡಿದ್ದಾರೆ. ಇದರ ಅನ್ವಯ ಸೈಟ್ ಮಾಲೀಕ ರಾಘವೇಂದ್ರ ರೆಡ್ಡಿ ಮತ್ತು ಇತರರ ವಿರುದ್ಧ ಎಫ್ಐಆರ್ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದಲ್ಲದೆ, ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತರಿಗೂ ಪಿಡಿಒ ಕೆ.ಎನ್. ನಂಜರೆಡ್ಡಿ ಪತ್ರ ಬರೆದು ಸದರಿ ಬಡಾವಣೆಯ ಸೈಟ್‌ಗಳ ನೋಂದಣಿಗೆ ತಡೆ ನೀಡಬೇಕೆಂದು ಮನವಿ ಮಾಡಿದ್ದಾರೆ. ಇದರ ಅನ್ವಯ ನೋಂದಣಿ ಮತ್ತು ಮುದ್ರಾಂಕ ಇಲಾಖೆ (ಆಡಳಿತ ಮತ್ತು ಕಾನೂನು) ವಿಭಾಗದ ನೋಂದಣಿ ಉಪಮಹಾಪರಿವೀಕ್ಷಕರು, ಆರೋಪಿತ ಸೈಟುಗಳ ನೋಂದಣಿ ಮಾಡದಂತೆ ಎಲ್ಲ ಉಪ ಸಬ್ ರಿಜಿಸ್ಟ್ರಾರ್‌ಗಳಿಗೆ ಲಿಖಿತ ಆದೇಶ ಹೊರಡಿಸಿದ್ದಾರೆ.
ಇದರಿಂದ ಸಬ್ ರಿಜಿಸ್ಟ್ರಾರ್‌ಗಳಿಗೆ ಕಾನೂನು ಸಂಕಷ್ಟ ಎದುರಾಗಿದೆ. ಇಲಾಖೆಯ ಮೇಲಧಿಕಾರಿಯ ಆದೇಶ ಪಾಲಿಸಬೇಕಾದರೆ ಕರ್ನಾಟಕ ನೋಂದಣಿ ನಿಯಮ 1965 ಮತ್ತು ಹೈಕೋರ್ಟ್ ತೀಪು ಉಲ್ಲಂಘಿಸ ಬೇಕಾಗಿದೆ. ಕರ್ನಾಟಕ ನೋಂದಣಿ ನಿಯಮ 1965ರಲ್ಲಿನ 81ರ ಅನ್ವಯ ನೋಂದಣಿಗೆ ಒಪ್ಪಿ ದಸ್ತಾವೇಜನ್ನು ಹಾಜರುಪಡಿಸಿದಾಗ ಪಕ್ಷಕಾರರನ್ನು ಗುರುತಿಸಿ ಇಬ್ಬರ ಸಾಕ್ಷಿ ಪಡೆದು ಫೋಟೋ ಮತ್ತು ಹೆಬ್ಬೆಟ್ಟನ್ನು ಗುರುತು ಪಡೆಯಬೇಕು. ಷೆಡ್ಯೂಲ್ ಸ್ವತ್ತಿಗೆ ಮುದ್ರಾಂಕ ಮತ್ತು ನೋಂದಣಿ ಶುಲ್ಕ ಪಡೆದು ನೋಂದಣಿ ಮಾಡಬೇಕು. ಆದರೆ, ತಪ್ಪು ಮಾಹಿತಿ, ನಕಲಿ ದಾಖಲೆಗಳನ್ನು ಹಾಜರುಪಡಿಸಿದಾಗ ಪ್ರಶ್ನಿಸುವ ಅಧಿಕಾರ ಉಪ ನೋಂದಣಾಧಿಕಾರಿಗೆ ಇರುವುದಿಲ್ಲ.
2000ರ ಫೆ.29ರಂದು ಹೈಕೋರ್ಟ್ ನ್ಯಾಯಾಧೀಶರಾದ ಗೋಪಾಲಗೌಡ ಅವರ ನ್ಯಾಯಪೀಠ, ನೋಂದಣಿ ವೇಳೆ ದಾಖಲೆಗಳ ನೈಜತೆ ಮತ್ತು ಹಕ್ಕುಗಳನ್ನು ಪ್ರಶ್ನಿಸಿದ ಸಬ್ ರಿಜಿಸ್ಟ್ರಾರ್‌ಗೆ 10 ಸಾವಿರ ರೂ. ದಂಡ ವಿಧಿಸಿತ್ತು. ಈ ಎಲ್ಲ ಮಾಹಿತಿ ನೋಂದಣಿ ಮತ್ತು ಮುದ್ರಾಂಕ ಪ್ರಧಾನ ಕಚೇರಿ ಅಧಿಕಾರಿಗಳಿಗೆ ಗೊತ್ತಿದ್ದರೂ ಕಾನೂನಿಗೆ ತಿದ್ದುಪಡಿ ತರದೆ ಕಾನೂನು ಉಲ್ಲಂಘಿಸಿ ಆದೇಶ ಹೊರಡಿಸುತ್ತಿದ್ದಾರೆ. ಇದರಿಂದ ಕೆಳ ಮಟ್ಟದ ಅಧಿಕಾರಿಗಳು ಕಾನೂನು ಸಂಕಷ್ಟ ಎದುರಿಸಬೇಕಾಗಿದೆ.