

ಶೃಂಗೇರಿ: ಹಿಂದಿನ ಕಾಲದಲ್ಲಿ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ಹೆಚ್ಚಿನ ಅವಕಾಶವಿರಲಿಲ್ಲ. ಪ್ರಸ್ತುತ ಶಾಲೆಗಳು, ದೃಶ್ಯ ಮಾಧ್ಯಮಗಳಲ್ಲಿ ವಿಪುಲವಾದ ಅವಕಾಶಗಳಿವೆ. ಅವುಗಳನ್ನು ಸಮರ್ಥವಾಗಿ ಬಳಸಿಕೊಳ್ಳಲು ಹೆಚ್ಚಿನ ಗಮನ ಹರಿಸಬೇಕು ಎಂದು ಶೃಂಗೇರಿ ಆದಿಚುಂಚನಗಿರಿ ಮಠದ ಶ್ರೀ ಗುಣನಾಥ ಸ್ವಾಮೀಜಿ ಹೇಳಿದರು.
ಪಟ್ಟಣದ ಬಿಜಿಎಸ್ ಸಂಸ್ಥೆ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಪದವಿಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣದ ಜತೆಗೆ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು. ಕ್ರೀಡೆಯಲ್ಲಿ ಭಾಗವಹಿಸಿದರೆ ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಬಹುದು ಎಂದರು.
ಯುವಪೀಳಿಗೆ ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡಾ ಕ್ಷೇತ್ರಗಳಲ್ಲಿ ತಮ್ಮ ಅಸ್ತಿತ್ವ ಅನಾವರಣಗೊಳಿಸಬೇಕು. ದೇಶ ಅಭಿವೃದ್ಧಿ ಪಥದಲ್ಲಿದೆ. ಹಾಗೆಯೇ ಏಷ್ಯನ್ ಕ್ರೀಡಾಕೂಟದಲ್ಲಿ ಕಬಡ್ಡಿ, ಹಾಕಿ, ಕುಸ್ತಿಯಲ್ಲಿ ಮೊದಲನೇ ಸ್ಥಾನದಲ್ಲಿದ್ದೇವೆ. ಗ್ರಾಮೀಣ ಮಕ್ಕಳಲ್ಲಿ ಆತ್ಮವಿಶ್ವಾಸ, ಛಲವಿದೆ ಎಂಬುದನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧಿಸಿ ತೋರಿಸಿದ್ದಾರೆ. ಅವರ ಆದರ್ಶಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೋಳ್ಳಬೇಕು ಎಂದು ತಿಳಿಸಿದರು.
ಬಿಇಒ ರಾಘವೇಂದ್ರ ಮಾತನಾಡಿ, ಕ್ರೀಡಾಕೂಟದಲ್ಲಿ ಭಾಗವಹಿಸಿದರೆ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಕ್ರಿಯಾಶೀಲತೆ ವ್ಯಕ್ತಿತ್ವಕ್ಕೆ ಮೆರುಗು ನೀಡುತ್ತದೆ. ಸುಸಂಸ್ಕೃತ ವ್ಯಕ್ತಿತ್ವ ಸಮಾಜದ ಉನ್ನತಿಗೆ ಸಹಕಾರಿಯಾಗುತ್ತದೆ. ಪಾಲಕರು ಮತ್ತು ಶಿಕ್ಷಕರು ಮಕ್ಕಳಿಗೆ ಶಿಕ್ಷಣದ ಜತೆಗೆ ಬೌದ್ಧಿಕ ಮೌಲ್ಯಗಳನ್ನು ತುಂಬಲು ಶ್ರಮಿಸಬೇಕು ಎಂದರು.
ಬಿಜಿಎಸ್ ಕಾಲೇಜಿನ ಪ್ರಾಚಾರ್ಯ ಕೆ.ಸಿ.ನಾಗೇಶ್ ಮಾತನಾಡಿ, ಕ್ರೀಡೆ ಮಾನವನ ಉನ್ನತಿಗೆ ಇರುವ ಅಪರೂಪದ ಹಾದಿ. ಶಿಕ್ಷಣದ ಜತೆಗೆ ಕ್ರೀಡೆ ಬಗ್ಗೆ ವಿದ್ಯಾರ್ಥಿಗಳು ಆಸಕ್ತಿ ವಹಿಸಿದರೆ ರಾಷ್ಟ್ರ ಮಟ್ಟದಲ್ಲೂ ಯಶಸ್ಸು ಗಳಿಸಬಹುದು. ವಿದ್ಯಾರ್ಥಿಗಳು ಪ್ರತಿ ಹಂತದಲ್ಲಿ ಅಧ್ಯಾಪಕರ ಮಾರ್ಗದರ್ಶನ ಪಡೆದು ತಮ್ಮ ಭವಿಷ್ಯ ರೂಪಿಸುವತ್ತ ಹೆಚ್ಚಿನ ಗಮನ ನೀಡಬೇಕು ಎಂದು ಹೇಳಿದರು.
ಕ್ರೀಡಾಕೂಟದಲ್ಲಿ ಜೆಸಿಬಿಎಂ ಕಾಲೇಜಿನ ಪ್ರಾಚಾರ್ಯ ಡಾ. ಎಂ.ಸ್ವಾಮಿ, ಸರ್ಕಾರಿ ಪಿಯು ಕಾಲೇಜಿನ ಪ್ರಾಚಾರ್ಯ ಅರುಣ್, ದುಗ್ಗಪ್ಪ ಗೌಡ, ದೈಹಿಕ ಶಿಕ್ಷಣ ಪರಿವೀಕ್ಷಕ ಸಿದ್ದರಾಜು, ದರ್ಶಿನಿ ಸಂಯುಕ್ತ ಪ್ರೌಢಶಾಲೆ ಮುಖ್ಯಶಿಕ್ಷಕ ಕಿರಣ್‌ಕುಮಾರ್, ಹರೀಶ್, ಅನಿಲ್, ಶಂಕರ್ ನಾಯ್ಕ ಇದ್ದರು.