

ಬೆಂಗಳೂರು: ರಾಜ್ಯಾದ್ಯಂತ ಸೆ.6ರಿಂದ 6 ರಿಂದ 8ನೇ ತರಗತಿವರೆಗೆ ಶಾಲೆಗಳು ಆರಂಭವಾಗುತ್ತಿದ್ದು, 31.03 ಲಕ್ಷ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಶಾಲಾ ಆಡಳಿತ ಮಂಡಳಿಗಳು ಇದಕ್ಕಾಗಿ ಕಳೆದ ನಾಲ್ಕೈದು ದಿನಗಳಿಂದ ಸಿದ್ಧತೆಯಲ್ಲಿ ತೊಡಗಿದ್ದು, ವಿದ್ಯಾರ್ಥಿಗಳ ಆಗಮನಕ್ಕಾಗಿ ಕಾಯುತ್ತಿದ್ದಾರೆ. ಪಾಸಿಟಿವಿಟಿ ದರ ಶೇ.2ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಷ್ಟೇ ಶಾಲೆ ತರೆಯಲು ಅನುಮತಿ ನೀಡಲಾಗಿದೆ.
ಈಗಾಗಲೆ, ಆ.23ರಿಂದ 9 ರಿಂದ 12ನೇ ತರಗತಿವರೆಗೆ ಶಾಲೆ-ಕಾಲೇಜುಗಳು ಆರಂಭವಾಗಿದ್ದು, ಸಮಸ್ಯೆ ಇಲ್ಲದೇ ನಡೆಯುತ್ತಿರುವ ಹಿನ್ನೆಲೆಯಲ್ಲಿ 6 ರಿಂದ 8ನೇ ತರಗತಿಗಳನ್ನು ಆರಂಭಿಸಲು ಸರ್ಕಾರ ಮುಂದಾಗಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ನೋಡಿಕೊಂಡು 1 ರಿಂದ 5ನೇ ತರಗತಿ ಆರಂಭಿಸಲಾಗುವುದು ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಾಮರಾಜನಗರ ಹಾಗೂ ಹಾಸನ ಸೇರಿ 5 ಜಿಲ್ಲೆಗಳ ಪಾಸಿಟಿವಿಟಿ ದರ, ಮರಣ ಪ್ರಮಾಣ, ಆಸ್ಪತ್ರೆ ದಾಖಲಾತಿ ವಿವರ, ಲಸಿಕೆ ವಿತರಣೆ ಪ್ರಗತಿ, ಕೋವಿಡ್ ಸ್ಥಿತಿಗತಿಯ ಮಾಹಿತಿ ಪಡೆದ ಸಿಎಂ, ಆಯಾ ಜಿಲ್ಲೆಗಳಲ್ಲಿ ಪರೀಕ್ಷೆ ಪ್ರಮಾಣ ಹೆಚ್ಚಿಸುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ. ಪ್ರಸ್ತುತ ದಕ್ಷಿಣ ಕನ್ನಡ ಹಾಗೂ ಕೊಡಗಿನಲ್ಲಿ ಪಾಸಿಟಿವಿಟಿ ದರ ಹೆಚ್ಚಿದ್ದು, ಸೋಮವಾರ ಸೋಂಕು ಕಡಿಮೆಯಾಗುವ ಸೂಚನೆಗಳು ಸಿಕ್ಕಿದ್ದು, ಈ ಜಿಲ್ಲೆಗಳಲ್ಲೂ ಶಾಲೆ ಆರಂಭವಾಗಲಿದೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ವಿ.ಅನ್ಬುಕುಮಾರ್ ಕಳೆದ ಎರಡು ದಿನಗಳ ಹಿಂದೆಯೇ ಅಧಿಕಾರಿಗಳ ಸಭೆ ನಡೆಸಿ ಶಾಲೆ ಆರಂಭಕ್ಕೆ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದರು. ಅಲ್ಲದೆ, ಶಾಲೆ ಆರಂಭದ ದಿನ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರವಹಿಸಲು ಸೂಚಿಸಿದ್ದಾರೆ.
ರಾಜ್ಯದಲ್ಲಿ ಕೋವಿಡ್ ಪ್ರಕರಣ ಕಡಿಮೆಯಾಗಿದೆ. ಆದ್ದರಿಂದ ಪ್ರೌಢಶಾಲೆ ಪ್ರಾರಂಭಿಸಲಾಗಿದೆ. ಕರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾದರೆ ಶಾಲೆ ಮುಚ್ಚುವ ಅನಿವಾರ್ಯತೆ ಇದೆ. ಶಿಕ್ಷಕರಿಗೆ ಸರ್ಕಾರ ಅನ್ಯಾಯ ಮಾಡಿಲ್ಲ. ಆದರೆ, ಶಿಕ್ಷಕರ ಸಂಘಟನೆಗಳು ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದು ವರ್ಗಾವಣೆ ನಿಲ್ಲಿಸೋದು ಅವರೇ ಹೊರತು ಸರ್ಕಾರವಲ್ಲ. ಎಲ್ಲರನ್ನೂ ತೃಪ್ತಿಪಡಿಸಲು ಸಾಧ್ಯವಿಲ್ಲ. ಆದರೆ, ಶೈಕ್ಷಣಿಕ ವರ್ಷದಲ್ಲಿ ಎಚ್ಚರಿಕೆಯ ಕ್ರಮ ಕೈಗೊಂಡು ವರ್ಗಾವಣೆ ಪ್ರಾರಂಭಿಸಲಾಗುತ್ತಿದೆ.
| ಬಿ.ಸಿ.ನಾಗೇಶ್ ಶಿಕ್ಷಣ ಸಚಿವ
ಕೋವಿಡ್ ನಡುವೆ ಮಕ್ಕಳ ಆರೋಗ್ಯದ ಬಗ್ಗೆ ಗಮನ ಹರಿಸುವುದರ ಜತೆಗೆ ಭವಿಷ್ಯವನ್ನು ರೂಪಿಸಬೇಕಿದೆ. ಈ ನಿಟ್ಟಿನಲ್ಲಿ ಶಾಲೆ ಕಾಲೇಜುಗಳು ಆರಂಭವಾಗಿರುವುದು ಉತ್ತಮವಾಗಿದೆ. ಮಕ್ಕಳಿಗೆ ಇನ್ನೂ ಲಸಿಕೆ ದೊರೆಯದ ಕಾರಣ ಕೋವಿಡ್ ನಿಯಮಗಳವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ.
| ಡಾ. ಬಸವರಾಜು ಕೋವಿಡ್ 3ನೇ ಅಲೆಯ ಹೈಪವರ್ ಸಮಿತಿ ಸದಸ್ಯ
ಎಸ್ಒಪಿ ಪಾಲನೆ ಕಡ್ಡಾಯ: ಈಗಾಗಲೆ ವಾರದ ಹಿಂದೆಯೇ ಪ್ರಮಾಣಿತ ಕಾರ್ಯಾಚರಣ ವಿಧಾನ(ಎಸ್ಒಪಿ) ಬಿಡುಗಡೆ ಮಾಡಿದ್ದು, ಅದನ್ನು ಕಡ್ಡಾಯ ವಾಗಿ ಪಾಲಿಸುವಂತೆ ಎಲ್ಲರಿಗೂ ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಶಾಲೆಗಳು ಮೊದಲೇ ತರಗತಿಗಳನ್ನು ಸ್ಯಾನಿಟೈಸ್ ಮಾಡಿವೆ. ಸುರಕ್ಷತಾ ಕ್ರಮಗಳ ಬಗ್ಗೆ ಪಾಲಕರೊಂದಿಗೆ ಆನ್ಲೈನ್ ಸಭೆ ನಡೆಸಿ ತಿಳಿಸಿವೆ. ರಾಜ್ಯದಲ್ಲಿ 2021-22ನೇ ಸಾಲಿಗೆ 6ನೇ ತರಗತಿಗೆ 10,47,646, 7ನೇ ತರಗತಿ-10,47,646, 8ನೇ ತರಗತಿಗೆ 10,10,645 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ.
ಎರಡು ವರ್ಷಗಳಿಂದ ಶಾಲೆ ಇರದೆ ಮಕ್ಕಳು ಶಿಸ್ತು ಮರೆತಿರುತ್ತಾರೆ. ಹಾಗಾಗಿ ಶಿಕ್ಷಕರು ಏಕಾಏಕಿ ಪಠ್ಯ ಚಟುವಟಿಕೆಗಳನ್ನು ಪ್ರಾರಂಭಿಸದೆ, ಮೊದಲು ಮಕ್ಕಳ ಮನಸ್ಥಿತಿ ಅರಿಯಬೇಕು. ಕೋವಿಡ್ ಕುರಿತು ಜಾಗೃತಿ ಮೂಡಿಸಬೇಕು.
| ಡಾ.ನಿಜಗುಣ ಮಕ್ಕಳ ತಜ್ಞ, ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ
ಕೋವಿಡ್ 3ನೇ ಅಲೆಯ ಭೀತಿಯ ನಡುವೆಯೇ ರಾಜ್ಯದಲ್ಲಿ ಇಂದು 6-8 ನೇ ತರಗತಿ ಮಕ್ಕಳಿಗೆ ಶಾಲೆ ಆರಂಭವಾಗುತ್ತಿದೆ. ಹೀಗಾಗಿ ಪಾಲಕರು ಹಾಗೂ ಶಾಲೆಯ ಆಡಳಿತ ಮಂಡಳಿ ಮಕ್ಕಳ ಸುರಕ್ಷತೆ ಹಿನ್ನೆಲೆಯಲ್ಲಿ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಮಕ್ಕಳ ತಜ್ಞರು ಎಚ್ಚರಿಸಿದ್ದಾರೆ. ರಾಜ್ಯದಲ್ಲಿ ಈವರೆಗೂ 3.20 ಲಕ್ಷ ಮಕ್ಕಳು ಕೋವಿಡ್ ನಿಂದ ಬಳಲಿದ್ದು, 155 ಮಕ್ಕಳು ಸೋಂಕಿಗೆ ಬಲಿಯಾಗಿದ್ದಾರೆ. ಇವರಲ್ಲಿ 0-9 ವರ್ಷದ 92,258 (64 ಸಾವು) ಹಾಗೂ 10-19 ವರ್ಷದ 2,28,248 (91) ವಯೋಮಾನದವರಾಗಿದ್ದಾರೆ. ಸದ್ಯ ಮಕ್ಕಳಿಗೆ ಕೋವಿಡ್ ಲಸಿಕೆ ಲಭ್ಯವಿಲ್ಲದ ಕಾರಣ ಹೆಚ್ಚಿನ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದಿದ್ದಾರೆ. ಒಂದೆಡೆ ಕೋವಿಡ್ ಭೀತಿ ಮತ್ತೊಂದೆಡೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಈಗಾಗಲೆ ರಾಜ್ಯಾದ್ಯಂತ ಡೆಂಗೆ, ಚಿಕೂನ್ ಗುನ್ಯಾ, ನ್ಯುಮೋನಿಯ, ವೈರಲ್ ಫೀವರ್ ಪ್ರಕರಣಗಳು ಹೆಚ್ಚಾಗಿವೆ. ಹಾಗಾಗಿ ಕೋವಿಡ್ ರಹಿತ ರೋಗಗಳ ಬಗ್ಗೆಯೂ ಎಚ್ಚರವಹಿಸಬೇಕಾಗಿದೆ ಎಂಬುದು ಕೋವಿಡ್ 3ನೇ ಅಲೆಯ ಹೈಪವರ್ ಸಮಿತಿ ಸದಸ್ಯ ಡಾ. ಬಸವರಾಜು ಮಾತು.
ಎಲ್ಲರೂ ಲಸಿಕೆ ಪಡೆದಿರಬೇಕು: ಮಕ್ಕಳಿಗೆ ಶಾಲೆ ಆರಂಭವಾಗುತ್ತಿರುವುದರಿಂದ ಮಕ್ಕಳ ಸಂಪರ್ಕಕ್ಕೆ ಬರುವ ಪಾಲಕರು ಹಾಗೂ ಶಾಲೆಯ ಸಿಬ್ಬಂದಿ ಎಲ್ಲರೂ ಕಡ್ಡಾಯವಾಗಿ ಲಸಿಕೆ ಪಡೆದಿರಬೇಕು. ಮಕ್ಕಳ ತಂದೆ ತಾಯಿ, ಮನೆಯ ಎಲ್ಲ ಸದಸ್ಯರು, ಮಗುವನ್ನು ಶಾಲೆಗೆ ಕರೆದೊಯ್ಯುವ ವಾಹನದ ಚಾಲಕ ಹಾಗೂ ಸಿಬ್ಬಂದಿ, ಶಿಕ್ಷಕರು ಸೇರಿ ಶಾಲೆಯಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬರೂ ಲಸಿಕೆ ಪಡೆದಿರಬೇಕು. ಇದರಿಂದ ಮಕ್ಕಳ ರಕ್ಷಣೆಯ ಜತೆಗೆ ಮಕ್ಕಳಿಂದ ಸೋಂಕು ಹರಡಿದರೆ ದೊಡ್ಡವರೂ ರಕ್ಷಣೆ ಪಡೆಯಲು ಸಹಕಾರಿಯಾಗಲಿದೆ ಎಂದು ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ನಿಜಗುಣ ತಿಳಿಸಿದ್ದಾರೆ.